
ಬೆಂಗಳೂರು: 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, 16ನೇ ಹಣಕಾಸು ಆಯೋಗದಲ್ಲಿಯೂ ಅದೇ ರೀತಿಯ ಅನ್ಯಾಯ ಆಗದಂತೆ ನೋಡಿಕೊಳ್ಳುವ ಪ್ರಯತ್ನಗಳನ್ನು ನಡೆಸುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಭರವಸೆ ನೀಡಿದರು.
ವಿಧಾನ ಪರಿಷತ್ತಿನಲ್ಲಿ ಗುರುವಾರ ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ಹಣಕಾಸು ಆಯೋಗದ ಶಿಫಾರಸಿನಂತೆ ಅನುದಾನ ಹಾಗೂ ತೆರಿಗೆ ಹಂಚಿಕೆ ಮಾಡಲಾಗುತ್ತದೆ. 2018–19ರಲ್ಲಿ ರೂ.35,894 ಕೋಟಿ ದೊರೆತಿತ್ತು. ನಂತರ ಪ್ರತಿ ವರ್ಷವೂ ಕಡಿಮೆ ದೊರೆತಿದೆ. ನಾಲ್ಕು ವರ್ಷಗಳ ಹಣಕಾಸಿನ ಸ್ಥಿತಿಗತಿಗೆ ಹೋಲಿಸಿದರೆ, ಅದು ತೀರ ಕಡಿಮೆ ಮೊತ್ತ. 14ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲು ಶೇ 4.71 ಇತ್ತು. 15ನೇ ಹಣಕಾಸು ಆಯೋಗದಲ್ಲಿ ಅದು 3.65ಕ್ಕೆ ಕುಸಿದಿದೆ. ಶೇ 1.06ರಷ್ಟು ಕಡಿಮೆ ನಿಗದಿ ಮಾಡಲಾಗಿದೆ ಎಂದು ಹೇಳಿದರು.
15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ವಿಶೇಷ ಅನುದಾನ ನೀಡುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಯನ್ನು ಕೇಂದ್ರ ಪುರಸ್ಕರಿಸಿಲ್ಲ. ಕೇಂದ್ರದ ಮೇಲೆ ಒತ್ತಡ ಹಾಕಲು ರಾಜ್ಯ ನಿರಂತರ ಪ್ರಯತ್ನ ಮಾಡುತ್ತಿದೆ. ಜಿಎಸ್‌ಟಿಯಲ್ಲೂ ರಾಜ್ಯದ ಪಾಲು ಸಮರ್ಪಕವಾಗಿ ಸಿಗುತ್ತಿಲ್ಲ. ಈ ಕುರಿತು ಹಿಂದಿನ ಬಿಜೆಪಿ ಸರ್ಕಾರ ಧ್ವನಿಯನ್ನೇ ಎತ್ತಲಿಲ್ಲ. ಇದನ್ನು ಹೇಳಿದರೆ ವಿರೋಧ ಪಕ್ಷದ ನಾಯಕರಿಗೆ ಬೇಸರವಾಗುತ್ತದೆ ಎಂದು ತಿಳಿಸಿದರು.
ರಾಜ್ಯದಿಂದ ಕೇಂದ್ರಕ್ಕೆ ಸಂದಾಯವಾಗುವ ಎಲ್ಲಾ ರೀತಿಯ ತೆರಿಗೆ ಮಾಹಿತಿ ರಾಜ್ಯ ಸರ್ಕಾರದ ಬಳಿ ಇಲ್ಲ. ನೀಡಬೇಕಿರುವ ಪಾಲನ್ನೂ ಸರಿಯಾಗಿ ನೀಡದಿದ್ದರೆ ಹೇಗೆ? ಉತ್ತರದ ರಾಜ್ಯಗಳಿಗೆ ಹೆಚ್ಚಿನ ನೆರವು ನೀಡಲಾಗಿದೆ. ಕರ್ನಾಟಕಕ್ಕೆ ತಾರತಮ್ಯ ಎಸಗಲಾಗಿದೆ. 16ನೇ ಹಣಕಾಸು ಆಯೋಗದ ಮುಂದೆ ರಾಜ್ಯದ ವಾದ ಸಮರ್ಥವಾಗಿ ಮಂಡಿಸುತ್ತೇವೆ. ವಾದ ಮಂಡನೆಗೆ ಅಗತ್ಯವಾದ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಆಗಿರುವ ತಾರತಮ್ಯ ಸರಿಪಡಿಸಲು ಆಯೋಗಕ್ಕೆ ಕೋರಿಕೆ ಸಲ್ಲಿಸುತ್ತೇವೆ’ ಎಂದರು.
Advertisement