ಆನ್‌ಲೈನ್ ಮೂಲಕ ಮದುವೆ ನೋಂದಣಿಯು 'ಲವ್ ಜಿಹಾದ್‌'ಗೆ ಉತ್ತೇಜನ ನೀಡುತ್ತದೆ: ಪ್ರಮೋದ್ ಮುತಾಲಿಕ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ್ದ ರಾಜ್ಯ ಬಜೆಟ್‍ನಲ್ಲಿ ಆನ್‍ಲೈನ್ ವಿವಾಹ ನೋಂದಣಿ (Online Marriage Registration) ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಆದರೆ, ಸರ್ಕಾರ ಈ ನಿರ್ಧಾರ ವಿರುದ್ಧ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಶನಿವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್

ಬೆಂಗಳೂರು: ಕರ್ನಾಟಕದಲ್ಲಿ ಆನ್‌ಲೈನ್ ಮೂಲಕ ಮದುವೆಗಳ ನೋಂದಣಿಗೆ ಅನುಕೂಲವಾಗುವಂತೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಶ್ರೀರಾಮ ಸೇನೆಯು ಆಕ್ಷೇಪ ವ್ಯಕ್ತಪಡಿಸಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ್ದ ರಾಜ್ಯ ಬಜೆಟ್‍ನಲ್ಲಿ ಆನ್‍ಲೈನ್ ವಿವಾಹ ನೋಂದಣಿ (Online Marriage Registration) ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಆದರೆ, ಸರ್ಕಾರ ಈ ನಿರ್ಧಾರ ವಿರುದ್ಧ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಶನಿವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, 'ಕರ್ನಾಟಕ ಸರ್ಕಾರದ ನಿರ್ಧಾರದಿಂದ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಲಿವೆ. ಹೀಗಾಗಿ, ಆನ್‌ಲೈನ್ ವಿವಾಹ ನೋಂದಣಿಗೆ ಕಾಂಗ್ರೆಸ್ ಸರ್ಕಾರ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

'ಲವ್ ಜಿಹಾದ್ ಪ್ರಕರಣಗಳಿಗೆ ಆನ್‌ಲೈನ್ ವಿವಾಹ ನೋಂದಣಿ ಸಹಕಾರಿಯಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ಹಿಂದೂ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ 'ಲವ್ ಜಿಹಾದ್'ಗೆ ಬಲಿಯಾಗುತ್ತಾರೆ. ವಿವಾಹಗಳ ಆನ್‌ಲೈನ್ ನೋಂದಣಿಯ ಪ್ರಸ್ತಾಪವನ್ನು ಹಿಂಪಡೆಯಬೇಕು ಮತ್ತು ಹಿಂದಿನ ವ್ಯವಸ್ಥೆಯನ್ನು ಮುಂದುವರಿಸಬೇಕು' ಎಂದು ಮುತಾಲಿಕ್ ಹೇಳಿದರು.

'ಕೆಲವು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಯುವಕರು ತಮ್ಮ ಪೋಷಕರ ಒಪ್ಪಿಗೆಯಿಲ್ಲದೆ ಹಿಂದೂ ಹುಡುಗಿಯರೊಂದಿಗೆ ತಮ್ಮ ವಿವಾಹವನ್ನು ಆನ್‌ಲೈನ್‌ನಲ್ಲಿ ನೋಂದಾಯಿಸುವ ಸಾಧ್ಯತೆಯಿದೆ. ಆ ಮದುವೆಗಳು ಅವರ ಪೋಷಕರಿಗೆ ತಿಳಿಯದೆ ಕಾನೂನು ಅನುಮತಿ ಪಡೆದರೆ ಅದು 'ಲವ್ ಜಿಹಾದ್' ಅನ್ನು ಉತ್ತೇಜಿಸುತ್ತದೆ' ಎಂದು ಅವರು ಹೇಳಿದರು.

'ಆಫ್‌ಲೈನ್‌ನಲ್ಲಿ ಮದುವೆಗಳ ನೋಂದಣಿಯಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಆಕ್ಷೇಪಣೆಗಾಗಿ ಅವಕಾಶವಿತ್ತು. ಆದಾಗ್ಯೂ, ವಿವಾಹಗಳ ಆನ್‌ಲೈನ್ ನೋಂದಣಿಯಲ್ಲಿ ಯಾವುದೇ ಆಕ್ಷೇಪಣೆಗಳಿಗೆ ಅವಕಾಶವಿಲ್ಲ ಮತ್ತು ಮೋಸ ಹೋಗುವ ಸಾಧ್ಯತೆಗಳು ಹೆಚ್ಚು' ಎಂದರು.

ನೇರವಾಗಿ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ ವಿವಾಹ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯೇ ಸರಿಯಾದ ವಿಧಾನ. ಯಾವುದೇ ಕಾರಣಕ್ಕೂ ಆನ್‌ಲೈನ್ ಮೂಲಕ ವಿವಾಹ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com