ಕೊಡಗಿನಾದ್ಯಂತ ಸಾಧಾರಣ ಮಳೆ; ಸಣ್ಣಪುಟ್ಟ ಹಾನಿ, ಪ್ರವಾಹದ ಭೀತಿ ಸದ್ಯಕ್ಕಿಲ್ಲ

ಕೊಡಗಿನಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ನದಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದೆ. ಮಳೆಯ ನಂತರ ಸಣ್ಣಪುಟ್ಟ ಭೂಕುಸಿತಗಳು ಮತ್ತು ಕೆಲವು ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. 
ಕೊಡಗಿನಲ್ಲಿ ಮಳೆಯಿಂದಾಗಿ ಧರೆಗುರುಳಿದ ಮರ
ಕೊಡಗಿನಲ್ಲಿ ಮಳೆಯಿಂದಾಗಿ ಧರೆಗುರುಳಿದ ಮರ

ಮಡಿಕೇರಿ: ಕೊಡಗಿನಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ನದಿ ನೀರಿನ ಮಟ್ಟ ನಿಧಾನವಾಗಿ ಏರಿಕೆಯಾಗುತ್ತಿದೆ. ಮಳೆಯ ನಂತರ ಸಣ್ಣಪುಟ್ಟ ಭೂಕುಸಿತಗಳು ಮತ್ತು ಕೆಲವು ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. 

ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ 35.3 ಮಿ.ಮೀ ಮಳೆ ದಾಖಲಾಗಿದೆ. ಭಾಗಮಂಡಲ ಪಟ್ಟಣದಲ್ಲಿ 24 ಗಂಟೆಗಳಲ್ಲಿ 59.4 ಮಿಮೀ ಮಳೆಯಾಗಿದ್ದು, ಕಾವೇರಿ ನದಿಯಲ್ಲಿ ನೀರಿನ ಮಟ್ಟ ನಿಧಾನವಾಗಿ ಏರುತ್ತಿದೆ. ಆದರೆ, ಪಟ್ಟಣದಲ್ಲಿ ಪ್ರವಾಹ ಭೀತಿ ಎದುರಾಗಿಲ್ಲ.

ಬಲವಾದ ಗಾಳಿಗೆ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದಿದ್ದರಿಂದ ಒಳಗಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಜೂನ್‌ನಿಂದ ಇಲ್ಲಿಯವರೆಗಿನ ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 1018 ವಿದ್ಯುತ್ ಕಂಬಗಳು ಮತ್ತು ಏಳು ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿವೆ. ಮಳೆ ಸಂಬಂಧಿ ಹಾನಿಯಿಂದ ಸೆಸ್ಕ್ ಇಲಾಖೆ ಒಂದು ತಿಂಗಳಲ್ಲಿ 129.34 ಲಕ್ಷ ರೂಪಾಯಿ ನಷ್ಟ ಅನುಭವಿಸಿದೆ.

ಜಿಲ್ಲೆಯಾದ್ಯಂತ ಮಳೆ ಹಾಗೂ ಸಣ್ಣಪುಟ್ಟ ಭೂಕುಸಿತದಿಂದ ಹಲವಾರು ಮನೆಗಳು ಹಾನಿಗೊಳಗಾಗಿವೆ. ಶನಿವಾರ ಸುರಿದ ಮಳೆಗೆ ಕಾನೂರು ಗ್ರಾಮದಲ್ಲಿ ಮನೆಯೊಂದರ ಕಾಂಪೌಂಡ್ ಗೋಡೆಗೆ ಹಾನಿಯಾಗಿದೆ. ಅಮ್ಮತ್ತಿ-ಕನ್ನಂಗಾಲ ರಸ್ತೆಯಲ್ಲಿ ಅಲ್ಪಸ್ವಲ್ಪ ಭೂಕುಸಿತ ಉಂಟಾಗಿದ್ದು, ಇದನ್ನು ಸಂಬಂಧಿಸಿದ ಪಂಚಾಯಿತಿ ಸದಸ್ಯರು ತಾತ್ಕಾಲಿಕವಾಗಿ ಸರಿಪಡಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದೊಂದು ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಒಟ್ಟು 40 ಮನೆಗಳು ಭಾಗಶಃ ಹಾನಿಯಾಗಿದ್ದು, ಎರಡು ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ.

ಚೆಯಂಡಾಣೆ ಸಮೀಪದ ಚೇಲಾವರ ಜಲಪಾತ ರಸ್ತೆಯಲ್ಲಿ ಭಾರಿ ಗಾಳಿಗೆ ಬೃಹತ್ ಮರವೊಂದು ಉರುಳಿ ಬಿದ್ದಿದೆ. ವಿದ್ಯುತ್ ತಂತಿ ತುಂಡಾಗಿದ್ದು, ಕೆಲಕಾಲ ಮರ ಸಂಚಾರಕ್ಕೆ ಅಡ್ಡಿಯಾಗಿದೆ. ಆದರೆ, ಸ್ಥಳೀಯರ ಪ್ರಯತ್ನದಿಂದ ತೆರವುಗೊಳಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com