ಹೆಡ್ ಕಾನ್​ಸ್ಟೇಬಲ್ ಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆ ಇಲ್ಲ ಎಂದ ಸರ್ಕಾರ, ಬಿಜೆಪಿ ಪ್ರತಿಭಟನೆ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಅಕ್ರಮ ಮರಳು ಸಾಗಣೆ ತಡೆಯಲು ಹೋದ ಪೊಲೀಸ್ ಕಾನ್ಸ್​ಟೇಬಲ್​​ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ನಿರಾಕರಿಸಿದ್ದು, ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಬಿಜೆಪಿ ಸೋಮವಾರ ಪ್ರತಿಭಟನೆ ನಡೆಸಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಅಕ್ರಮ ಮರಳು ಸಾಗಣೆ ತಡೆಯಲು ಹೋದ ಪೊಲೀಸ್ ಕಾನ್ಸ್​ಟೇಬಲ್​​ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ನಿರಾಕರಿಸಿದ್ದು, ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಬಿಜೆಪಿ ಸೋಮವಾರ ಪ್ರತಿಭಟನೆ ನಡೆಸಿತು.

ಸೋಮವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಬಿಜೆಪಿ ಪಟ್ಟು ಹಿಡಿಯಿತು.

ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಬಿಜೆಪಿ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಶಶಿಲ್ ನಮೋಶಿ, ರವಿಕುಮಾರ್, ತಳವಾರ್ ಸಾಬಣ್ಣ ಅವರು ಆಗ್ರಹಿಸಿದರು.

ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಪರಮೇಶ್ವರ್ ಅವರು, ಮರಳು ದಂಧೆ ಹೊಸದೇನಲ್ಲ, ಎಲ್ಲಾ ಸರ್ಕಾರದ ಅವಧಿಯಲ್ಲೂ ನಿರಂತರವಾಗಿ ನಡೆಯುತ್ತಲೇ ಇದೆ. ರಾಜ್ಯದ ಎಲ್ಲ ಕಡೆ ಇದೆ. ಜೇವರ್ಗಿ ತಾಲೂಕಿನ ನೆಲೋಗಿ ಠಾಣಾ ವ್ಯಾಪ್ತಿಯಲ್ಲಿ ಮರಳು ತುಂಬಿ ಬರುತ್ತಿರುವ ಮಾಹಿತಿ ಸಿಕ್ಕಾಗ ಪೊಲೀಸರು ಹೋಗುತ್ತಾರೆ. ಮಫ್ತಿಯಲ್ಲೂ ಕೆಲವೊಮ್ಮೆ ಹೋಗುತ್ತಾರೆ. ಇದೇ ರೀತಿ ಟ್ರ್ಯಾಕ್ಟರ್ ನಿಲ್ಲಿಸುವಂತೆ ಪೊಲೀಸರು ಕೇಳಿದಾಗ ಟ್ರ್ಯಾಕ್ಟರ್ ನಿಲ್ಲಿಸಿಲ್ಲ. ಪ್ರಯತ್ನ ನಡೆಸಿದ ಪೊಲೀಸ್ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಬಗ್ಗೆಯೂ ಮಾತನಾಡಬೇಕಲ್ಲ, ಪೊಲೀಸ್ ಕಾನ್ಸ್​ಟೇಬಲ್​ ಸತ್ತಾಗ ತನಿಖೆ ನಡೆಸಲು ಪೊಲೀಸರು ಬರುತ್ತಾರೆ. ಚಾಕುವಿನಿಂದ ಚುಚ್ಚಲು ಬಂದಾಗ ಪೊಲೀಸರು ಏನು ಮಾಡಬೇಕು ಹೇಳಿ? ಎಂದು ಪ್ರಶ್ನಿಸಿದರು.

ಸಾಯಬಣ್ಣ ಚಾಕುವಿನಿಂದ ತಿವಿಯಲು ಬಂದು ತಪ್ಪಿಸಿಕೊಳ್ಳಲು ಮುಂದಾದಾಗ ಗಾಳಿಯಲ್ಲಿ ಗುಂಡು ಹಾರಿಸಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಅವನನ್ನು ಸಾಯಿಸಿಲ್ಲ, ಸ್ಥಳೀಯವಾಗಿ ಇಟ್ಟರೆ ಗಲಾಟೆ ನಡೆಯುವ ಸಾಧ್ಯತೆ ಕಾರಣಕ್ಕೆ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಇದನ್ನ ಬಹಳ ದೊಡ್ಡದಾಗಿ ಪರಿಗಣಿಸಬೇಕಿಲ್ಲ. ಇಂತಹ ಎಲ್ಲ ಘಟನೆ ನ್ಯಾಯಾಂಗ ತನಿಖೆ ಎಂದರೆ ಹೇಗೆ? ಜೈನಮುನಿ ಕೇಸ್ ಸಿಬಿಐಗೆ ಕೊಡಿ ಎಂದಿರಿ. ಆದರೆ ನಮ್ಮ ಪೊಲೀಸರೇ ಸಮರ್ಥರಿದ್ದಾರೆ ಎಂದಿದ್ದೆವು. ಅದರಂತೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವ ಅಗತ್ಯವಿಲ್ಲ. ಹಾಗಾಗಿ, ಕೊಡಲ್ಲ ಎಂದು ಹೇಳಿದರು.

ಗೃಹ ಸಚಿವರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಶಶಿಲ್ ನಮೋಶಿ, ಮರಳು ಮಾಫಿಯಾಗೆ ಸಾಯಬಣ್ಣ ವಿರುದ್ಧ ಇಲ್ಲಿ ದಾರಿ ತಪ್ಪಿಸಿದ್ದಾರೆ. ರೌಡಿಶೀಟರ್ ಅಲ್ಲದ ವ್ಯಕ್ತಿಗೆ ರೌಡಿ ಶೀಟರ್ ಮಾಡಿದ್ದಾರೆ. ಕೋಳಿ ಅಪಘಾತ ಪ್ರಕರಣ ಉಲ್ಲೇಖಿಸಿ 10 ಜನರ ಮೇಲೆ ರೌಡಿಶೀಟರ್ ಹಾಕಿದ್ದಾರೆ. ಅದನ್ನು ಅಲೋಕ್ ಕುಮಾರ್ ಮುಂದೆ ಒಯ್ದು ಕೇಳಿದಾಗ ಅವರು ಬೈದು ವಾಪಸ್ ಪಡೆಯಿರಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಆದರೆ 8 ಜನರ ಮೇಲಿನ ರೌಡಿ ಶೀಟರ್ ವಾಪಸ್ ಪಡೆದು ಇಬ್ಬರ ಮೇಲೆ ಮಾತ್ರ ಉಳಿಸಿಕೊಂಡಿದ್ದಾರೆ. ಕೋಳಿ ಕೊಂದಿದ್ದಕ್ಕೆ ರೌಡಿಶೀಟರ್ ಮಾಡುತ್ತಾರಾ? ಪಿಎಸ್ಐ, ಸಿಪಿಐ ಎಲ್ಲರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಪೊಲೀಸರ ಮೇಲೆ ಪೊಲೀಸರೇ ತನಿಖೆ ಮಾಡಿಸುತ್ತಾರಾ? ಸತ್ಯ ಹೊರಬರುತ್ತಾ? ಹಾಗಾಗಿ ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಆಗ್ರಹಿಸಿದರು.

ಘಟನೆ ನಡೆದಾಗ ಪೊಲೀಸರು ಸಮವಸ್ತ್ರ ಧರಿಸಿರಲಿಲ್ಲ ಮತ್ತು ಕುಡಿದಿದ್ದರು. ರೇವಣಸಿದ್ದಪ್ಪ ಕರಜಗಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ನ್ನು ಹಿಂಬಾಲಿಸಿಕೊಂಡು ಬಂದಿದ್ದರು, ಟ್ರೇಲರ್ ಬೇರ್ಪಡುತ್ತಿದ್ದಂತೆ ಟ್ರೇಲರ್ ಅಡಿ ಸಿಲುಕಿ ಚೌಹಾಣ್ ಮೃತಪಟ್ಟಿದ್ದಾನೆ, ಬಳಿಕ ಸ್ಥಳದಲ್ಲಿ ಮತ್ತೊಬ್ಬ ಪೊಲೀಸ್ ಕಥೆ ಕಟ್ಟಿ ಪರಾರಿಯಾಗಿದ್ದಾನೆ. ಪ್ರಕರಣದಲ್ಲಿ ಸ್ಥಳದಲ್ಲಿ ಇಲ್ಲದ ಕರಜಗಿ ಸಹೋದರ ಸಾಯಿಬಣ್ಣ ಕರಜಗಿ ಎಂಬುವವರ ಹೆಸರನ್ನೂ ಎಳೆದು ತರಲಾಗಿದೆ. ಕಜರಗಿಯವರು ಮರಳ ಸಾಗಿಸುತ್ತಿದ್ದದ್ದು. ಅವರ ಮನೆ ನಿರ್ಮಾಣಕ್ಕಾಗಿ ಆಗಿತ್ತು. ಮರಳು ಮಾಫಿಯಾದಲ್ಲಿ ಭಾಗಿಯಾಗಿರುವವರಿಂದ ಹಣ ವಸೂಲಿ ಮಾಡಲು ಚೌಹಾಣ್ ಅಲ್ಲಿಗೆ ಹೋಗಿದ್ದರು ಮತ್ತು ಈ ಪ್ರದೇಶದಲ್ಲಿ ಮರಳು ಮಾಫಿಯಾವನ್ನು ನಿಭಾಯಿಸುವಲ್ಲಿ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಸಾಯಿಬಣ್ಣ ಅವರನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ. ಸಾಯಿಬಣ್ಣನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸದೆ ಮೈಸೂರು ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಜಿ ಪರಮೇಶ್ವರ ಅವರು, ಪೊಲೀಸರು ಅನೇಕ ಕಾರ್ಯಾಚರಣೆಗಳಿಗೆ ಸಾಮಾನ್ಯ ಉಡುಪಿನಲ್ಲಿ ಹೋಗುತ್ತಾರೆ ಮತ್ತು ಪಿಕೆಟಿಂಗ್ ಪಾಯಿಂಟ್‌ನಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಚೌಹಾಣ್ ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ಅನ್ನು ಕಂಡು ಚಾಲಕನಿಗೆ ನಿಲ್ಲಿಸುವಂತೆ ಹೇಳಿದ್ದಾರೆ, ಆದರೆ ಚಾಲಕ ಕರ್ತವ್ಯದಲ್ಲಿದ್ದ ಪೊಲೀಸರನ್ನು ಕೊಲೆ ಮಾಡಿದ್ದಾನೆಂದು ಹೇಳಿದರು.

ಇದೇ ವೇಳೆ ಸಾಯಿಬಣ್ಣನ ಮೇಲೆ ಪೊಲೀಸರು ಗುಂಡು ಹಾರಿಸಿರುವುದನ್ನು ಸಮರ್ಥಿಸಿಕೊಂಡ ಅವರು, ಅವರನ್ನು ಇನ್ನೂ ವಶಕ್ಕೆ ತೆಗೆದುಕೊಂಡಿರಲಿಲ್ಲ. ಆದರೆ ವಿಚಾರಣೆಗೆ ಕರೆದೊಯ್ಯುವಾಗ ಸಬ್ ಇನ್ಸ್‌ಪೆಕ್ಟರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಕರ್ತವ್ಯದ ವೇಳೆ ಓರ್ವ ಪೊಲೀಸ್‌ ಸಾವಿಗೀಡಾಗಿದ್ದಾರೆ. ಆದರೆಸ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ವ್ಯಕ್ತಿಯ ಮೇಲೆ ನಿಮಗೆ (ಬಿಜೆಪಿ ಸದಸ್ಯರು) ಹೆಚ್ಚು ಕಾಳಜಿ ಇದೆ, ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಯ ಅಗತ್ಯವಿಲ್ಲ ಎಂದು ಬಿಜೆಪಿ ನಾಯಕರ ಆಗ್ರಹವನ್ನು ನಿರಾಕರಿಸಿದರು.

ಈ ವೇಳೆ ಸರ್ಕಾರದ ನಡೆಯನ್ನು ಖಂಡಿಸಿದ ಬಿಜೆಪಿ ಸದಸ್ಯರು, ಸದನದ ಬಾವಿಗಿಳಿಸಿದು ಪ್ರತಿಭಟನೆ ನಡೆಸಿದರು. ಈ ವೇಳೆ ತೀವ್ರ ಗದ್ದಲ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಯಿತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com