ಸದಸ್ಯರ ಅಮಾನತು ಖಂಡಿಸಿ ಪ್ರತಿಭಟನೆ: ಬೊಮ್ಮಾಯಿ, ಎಚ್ ಡಿಕೆ ಸೇರಿ ಹಲವರು ಪೊಲೀಸ್ ವಶಕ್ಕೆ, ಕುಸಿದುಬಿದ್ದ ಶಾಸಕ ಯತ್ನಾಳ್‌ ಆಸ್ಪತ್ರೆಗೆ

ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಸದಸ್ಯರ ಅಮಾನತು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸೌಧ ಆವರಣದಲ್ಲೇ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಆರೋಗ್ಯ ಏರುಪೇರಿನಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಸಿದು ಬಿದ್ದಿದ್ದಾರೆ.
ಕುಸಿದು ಬಿದ್ದ ಶಾಸಕ ಯತ್ನಾಳ್
ಕುಸಿದು ಬಿದ್ದ ಶಾಸಕ ಯತ್ನಾಳ್

ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಸದಸ್ಯರ ಅಮಾನತು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸೌಧ ಆವರಣದಲ್ಲೇ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಆರೋಗ್ಯ ಏರುಪೇರಿನಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಸಿದು ಬಿದ್ದಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಸೋಮವಾರ ಮತ್ತು ಮಂಗಳವಾರ ನಗರದಲ್ಲಿ ವಿಪಕ್ಷಗಳ ಸಭೆ ನಡೆಸಲಾಗಿತ್ತು. ಕಾಂಗ್ರೆಸ್‌ ಸರ್ಕಾರವು 30 ಐಎಎಸ್‌ ಅಧಿಕಾರಿಗಳನ್ನು ತನ್ನ ಮೈತ್ರಿಕೂಟದ ನಾಯಕರ ಸೇವೆಗೆ ನಿಯೋಜಿಸಿದೆ ಎಂದು ಆರೋಪಿಸಿ ಜೆಡಿಎಸ್ ಮತ್ತು ಬಿಜೆಪಿ ಪ್ರತಿಭಟನೆ ನಡೆಸುತ್ತಿವೆ. ಇದೇ ವಿಚಾರವಾಗಿ ಇಂದು ವಿಧಾನಸಭೆ ಅಧಿವೇಶನದಲ್ಲಿ ಗದ್ದಲ ಏರ್ಪಟ್ಟು ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರತ್ತ ಬಿಜೆಪಿ ಸದಸ್ಯರು ಕಾಗದ ಪತ್ರಗಳನ್ನು ಹರಿದು ಎಸೆದಿದ್ದರು. ಇದೇ ವಿಚಾರವಾಗಿ ಅಸಮಾಧಾನಗೊಂಡಿದ್ದ ಸ್ಪೀಕರ್ ಯುಟಿ ಖಾದರ್ ಅವರು, ಸದಸ್ಯರ ನಡೆಯನ್ನು ಸ್ಪೀಕರ್ ಸ್ಥಾನಕ್ಕೆ ಅಗೌರವ ಎಂದು ಪರಿಗಣಿಸಿ ಬಿಜೆಪಿಯ 10 ಶಾಸಕರನ್ನು ಅಮಾನತು ಮಾಡಿದ್ದರು.

ವಿಧಾನಸಭೆಯಿಂದ ಅಮಾನತುಗೊಂಡವರನ್ನು ಮಾರ್ಷಲ್ಸ್‌ ಹೊರಹಾಕಿದರು. ಮತ್ತೊಂದೆಡೆ ಸದನದಲ್ಲಿ  ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದಾರೆ. ಸ್ಪೀಕರ್‌ ಕಚೇರಿ ಮೆಟ್ಟಿಲು ಮೇಲೆ ಕುಳಿತು ಬಿಜೆಪಿ ಸದಸ್ಯರಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಸ್ಪೀಕರ್ ನಿರ್ಣಯವನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾನಿರತ ಮಾಜಿ ಸಿಎಂಗಳಾದ ಬೊಮ್ಮಾಯಿ, ಹೆಚ್​​ಡಿ ಕುಮಾರಸ್ವಾಮಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್​ನಲ್ಲಿ ತುಂಬಿಸಿ ಕರೆದೊಯ್ದಿದ್ದಾರೆ. ಆರಗ ಜ್ಞಾನೇಂದ್ರ, ಅಶ್ವತ್ಥ್ ನಾರಾಯಣ, ಸುರೇಶ್ ಕುಮಾರ್​, ವಿ.ಸುನೀಲ್ ಕುಮಾರ್, ಮುನಿರತ್ನ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ವಶಕ್ಕೆ ಪಡೆದ ಸದಸ್ಯರನ್ನು ಬಿಎಂಟಿಸಿ ಬಸ್​ನಲ್ಲಿ ತುಂಬಿಸಿ ಕರೆದೊಯ್ದಿದ್ದಾರೆ.

ವಿಧಾನಸಭೆ ಪೂರ್ವಭಾಗದ ಪ್ರವೇಶ ದ್ವಾರದ ಗಾಜು ಪುಡಿ ಪುಡಿ
ಬಿಜೆಪಿಯ 10 ಶಾಸಕರ ಅಮಾನತು ವಿರೋಧಿಸಿ ಪ್ರತಿಭಟನೆ ಮಾಡಲಾಗುತ್ತಿದ್ದು, ಈ ವೇಳೆ ವಿಧಾನಸಭೆ ಪೂರ್ವಭಾಗದ ಪ್ರವೇಶ ದ್ವಾರದ ಬಳಿ ಶಾಸಕರ ನೂಕು ನುಗ್ಗಲು ಉಂಟಾದ ಕಾರಣ ಪ್ರವೇಶ ದ್ವಾರದ ಗಾಜು ಪುಡಿ ಪುಡಿ ಆಗಿದೆ.

ಕುಸಿದುಬಿದ್ದ ಶಾಸಕ ಯತ್ನಾಳ್‌
ವಿಧಾನಸಭೆಯಿಂದ ಬಿಜೆಪಿಯ 10 ಸದಸ್ಯರು ಅಮಾನತು ಮಾಡಲಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಾರ್ಷಲ್ಸ್​ ಎಳೆದಾಟದಿಂದಾಗಿ ಶಾಸಕ ಯತ್ನಾಳ್ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಅವರ ಬಿಪಿ ಹೆಚ್ಚಾಗಿ ಕುಸಿದು ಬಿದ್ದಿದ್ದಾರೆ.  ಕೂಡಲೇ ಅವರನ್ನು ಆ್ಯಂಬುಲೆನ್ಸ್ ಮೂಲಕ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯತ್ನಾಳ್​ ನೋಡಲು ಪತ್ನಿ ಶೈಲಜಮ್ಮ ಹಾಗೂ ಮಗ ಹರ್ಷ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com