ವಿಪಕ್ಷಗಳ ನಾಯಕರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳ ಬಳಕೆ ವಿವಾದ: ಶಿಷ್ಟಾಚಾರ ಅನುಸರಿಸಲಾಗಿದೆ ಎಂದ ಸಿಎಂ

ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿರೋಧ ಪಕ್ಷದ ನಾಯಕರು ಸೋಮವಾರದಿಂದ ಬೆಂಗಳೂರಲ್ಲಿ ಟಿಕಾಣಿ ಹೂಡಿದ್ದಾರೆ. ವಿಪಕ್ಷಗಳ ನಾಯಕರು ಬೆಂಗಳೂರಿಗೆ ಬರುತ್ತಿದ್ದಂತೆಯೇ, ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿಗಳು ಅವರನ್ನು ಸ್ವಾಗತಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿರೋಧ ಪಕ್ಷದ ನಾಯಕರು ಸೋಮವಾರದಿಂದ ಬೆಂಗಳೂರಲ್ಲಿ ಟಿಕಾಣಿ ಹೂಡಿದ್ದಾರೆ. ವಿಪಕ್ಷಗಳ ನಾಯಕರು ಬೆಂಗಳೂರಿಗೆ ಬರುತ್ತಿದ್ದಂತೆಯೇ, ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿಗಳು ಅವರನ್ನು ಸ್ವಾಗತಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಬಿಜೆಪಿ ನಾಯಕರು ಕೂಡ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿಯವರು, ಅಧಿಕಾರ ಬಂಧನಕ್ಕಾಗಿ ಘಟಬಂಧನಕ್ಕೆ ಒಳಗಾದ ಕಾಂಗ್ರೆಸ್ ಪಕ್ಷವು ಕರ್ನಾಟಕದ ಹೆಮ್ಮೆ, ಪರಂಪರೆ,ಸ್ವಾಭಿಮಾನಕ್ಕೆ ಘಟಶ್ರಾದ್ಧ ಮಾಡಿದೆ. ಘಟಬಂಧನಕ್ಕೆ ಬಂದ ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ ಹೆಮ್ಮೆಯ ಐಎಎಸ್ ಅಧಿಕಾರಿಗಳನ್ನು ಕಳಿಸಿದ ಕಾಂಗ್ರೆಸ್ ಸರಕಾರದ ನಡೆ ತಪ್ಪು. ನುಡಿದಂತೆ ನಡೆಯುವುದು ಎಂದರೆ ಇದೇನಾ...? ಎಂದು ಪ್ರಶ್ನಿಸಿದ್ದಾರೆ.

ಇದು ರಾಜ್ಯ ಸರಕಾರಿ ಕಾರ್ಯಕ್ರಮ ಅಲ್ಲ, ಹೊಸ ಸರಕಾರದ ಪ್ರಮಾಣ ಸ್ವೀಕಾರವೂ ಅಲ್ಲ. ಕೇವಲ ರಾಜಕೀಯ ಸಭೆಯಷ್ಟೇ. ಇಂಥ ಸಭೆಗೆ ಬಂದ ರಾಜಕೀಯ ನಾಯಕರಿಗೆ ಆಥಿತ್ಯ ನೀಡಲು ಜವಾಬ್ದಾರಿಯುತ ಅಧಿಕಾರಿಗಳನ್ನು ಕಳಿಸಿದ್ದು ಆರೂವರೆ ಕೋಟಿ ಕನ್ನಡಿಗರಿಗೆ ಎಸಗಿದ ಘೋರ ಅಪಚಾರ ಹಾಗೂ ರಾಜ್ಯದ ಪಾಲಿಗೆ ಮಹಾ ದುರಂತ.

ಯಾವುದೇ ಒಂದು ರಾಜ್ಯದ ಅಭಿವೃದ್ಧಿ, ಆಡಳಿತ, ಮುನ್ನಡೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಐಎಎಸ್ ಅಧಿಕಾರಿಗಳು ಕೇವಲ ಅಧಿಕಾರಿಗಳಷ್ಟೇ ಅಲ್ಲ; ಆಯಾ ರಾಜ್ಯಗಳ ಕ್ಷಮತೆ, ದಕ್ಷತೆಯ ಪ್ರತೀಕ. ಅಂಥವರನ್ನು ಇನ್ನೊಬ್ಬರ ಆಜ್ಞಾಪಾಲಕರನ್ನಾಗಿ ಮಾಡಿ, ಬಾಗಿಲು ಕಾಯುವ ಕೆಲಸ ಹಚ್ಚಿದ್ದು ಆಡಳಿತ ಪಕ್ಷದ ಅಹಂಕಾರದ ಪರಮಾವಧಿ.

ಇದು ನಿಶ್ಚಿತವಾಗಿಯೂ ಐಎಎಸ್ ಸೇವಾ ನೀತಿ ಸಂಹಿತೆಯ ಉಲ್ಲಂಘನೆ. ಇದು ತಮ್ಮ ಸ್ವಾಭಿಮಾನ, ಗೌರವಕ್ಕೆ ಧಕ್ಕೆ ತರುವಂತದ್ದು ಎಂದು ಗೊತ್ತಿದ್ದರೂ ಅಧಿಕಾರಿಗಳು ಈ ಕೆಲಸಕ್ಕೆ ಒಪ್ಪಿದ್ದು ನನಗೆ ಅತೀವ ಅಚ್ಚರಿ, ಆಘಾತ ಉಂಟು ಮಾಡಿದೆ. ಇಂಥ ವಿವಾದಾಸ್ಪದ ಆದೇಶ ಹೊರಡಿಸಿದ ಮುಖ್ಯ ಕಾರ್ಯದರ್ಶಿಗಳು ಜನತೆಗೆ ಉತ್ತರ ಕೊಡಲೇಬೇಕಿದೆ.

ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವ ಕಾಂಗ್ರೆಸ್ ಪಕ್ಷ, ರಾಜ್ಯದಲ್ಲಿ 'ಐಎಎಸ್ ಜೀತ ಪದ್ಧತಿ'ಯನ್ನು ಜಾರಿಗೆ ತರುವ ಮೂಲಕ ಹೊಸ ನಮೂನೆಯ 'ರಾಜಕೀಯ, ಆಡಳಿತ ವಸಾಹತುಶಾಹಿ'ಯನ್ನು ದೇಶಕ್ಕೆ ಪರಿಚಯ ಮಾಡಿದೆ. ಹೌದು; ಕಾಂಗ್ರೆಸ್ ಯಾವಾಗಲೂ ಕುಖ್ಯಾತಿಗಳಿಗೇ ಕುಖ್ಯಾತಿ. ಅಂಥ ಅಪಾಯಕಾರಿ ಹಸ್ತವಾಸಿಯೇ ಕೈ ಪಕ್ಷದ ಆಸ್ತಿ.

35 ಸೀಟು ಕೊಟ್ಟ ತಪ್ಪಿಗೆ ಕನ್ನಡಿಗರಿಗೆ ವಿಪರೀತ ದರ್ಪ ತೋರಿದೆ ಕಾಂಗ್ರೆಸ್. ಸತ್ಯಯುಗದಲ್ಲಿ ಹಿರಣ್ಯಕಶಿಪು ಅಷ್ಟದಿಕ್ಪಾಲಕರನ್ನು ಸೆರೆಹಿಡಿದು ಮೆಟ್ಟಿಲು ಮಾಡಿಕೊಂಡ ಪಾಪಕ್ಕೆ ಸರ್ವನಾಶವಾದ. ಕಾಂಗ್ರೆಸ್ ಕೂಡ 30 ಐಎಎಸ್ ಅಧಿಕಾರಿಗಳನ್ನು ರಾಜಕಾರಣಿಗಳ ದ್ವಾರಪಾಲಕರನ್ನಾಗಿ ಮಾಡುವ ಮೂಲಕ ತನ್ನ ನಾಶಕ್ಕೆ ತಾನೇ ನಾಂದಿ ಹಾಡಿದೆ ಎಂದು ಹೇಳಿದ್ದರು.

ಕುಮಾರಸ್ವಾಮಿಯವರ ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿಗಳು, ಇಂದು ಬೆಂಗಳೂರಿಗೆ ಆಗಮಿಸಿದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರುಗಳನ್ನು ರಾಜ್ಯ ಅತಿಥಿಗಳೆಂದು ಪರಿಗಣಿಸಲಾಗಿತ್ತು. ಶಿಷ್ಟಾಚಾರದ ಪ್ರಕಾರ ಆ ಎಲ್ಲ ಗಣ್ಯರ ಸ್ವಾಗತಕ್ಕೆ ಮಾತ್ರ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಇದರ ಹೊರತಾಗಿ ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಯಾವ ಪಾತ್ರವೂ ಇಲ್ಲ. ಈ ರೀತಿಯ ಶಿಷ್ಟಾಚಾರದ ಪಾಲನೆ ಹಿಂದಿನ ಎಲ್ಲ ಸರ್ಕಾರದ ಕಾಲದಲ್ಲಿಯೂ ನಡೆದಿತ್ತು ಎಂದು ಹೇಳಿದ್ದಾರೆ.

ಈ ನಡುವೆ ಕುಮಾರಸ್ವಾಮಿ ಅವರ ಟೀಕೆಗೆ ನಾನು ಉತ್ತರಿಸುವುದಿಲ್ಲ ಎಂದು ಉಪ ಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.

ಎಐಸಿಸಿ ನಾಯಕರೊಬ್ಬರು ಮಾತನಾಡಿ, ಕೆಲವು ಗಣ್ಯರನ್ನು ನಾನು ಮತ್ತು ಕೆಲವು ಸಚಿವರು ಸ್ವಾಗತಿಸಿದ್ದಾರೆ. ಇತರ ಮುಖಂಡರನ್ನು ಅಧಿಕಾರಿಗಳು ಸ್ವಾಗತಿಸಿದರು. ಇದು ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಮತ್ತು ಪದ್ಧತಿಯಾಗಿದೆ. ಪಾಟ್ನಾದಲ್ಲಿ ನಡೆದ ಸಭೆಯಲ್ಲೂ ಕೂಡ ಶಿಷ್ಟಾಚಾರದ ಪ್ರಕಾರ ಭಾಗವಹಿಸುವ ಗಣ್ಯರನ್ನು ಅಧಿಕಾರಿಗಳು ಸ್ವಾಗತಿಸಿದ್ದರು. ಕುಮಾರಸ್ವಾಮಿ ಅವರು ಎನ್‌ಡಿಎಯಿಂದ ಆಹ್ವಾನಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಸುದ್ದಿಯಲ್ಲಿರಲು ಅವರಿಗೆ ವಿಷಯ ಬೇಕು. ಅವರಿಗೆ ಶುಭವಾಗಲಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com