ಪಿಎಸ್‌ಐ ನೇಮಕಾತಿ ಹಗರಣ: ನ್ಯಾಯಾಂಗ ತನಿಖೆಗೆ ಆದೇಶ, ನ್ಯಾ.ವೀರಪ್ಪ ನೇತೃತ್ವದ ಏಕ ಸದಸ್ಯ ಆಯೋಗ ರಚನೆ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ 545 ಪಿಎಸ್ಐ ನೇರ ನೇಮಕಾತಿಯಲ್ಲಿನ ಅಕ್ರಮಗಳ ಕುರಿತು ಎಲ್ಲಾ ಆಯಾಗಳಲ್ಲೂ ತನಿಖೆ ನಡೆಸಲು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಶುಕ್ರವಾರ ಆದೇಶಿಸಿದೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ 545 ಪಿಎಸ್ಐ ನೇರ ನೇಮಕಾತಿಯಲ್ಲಿನ ಅಕ್ರಮಗಳ ಕುರಿತು ಎಲ್ಲಾ ಆಯಾಗಳಲ್ಲೂ ತನಿಖೆ ನಡೆಸಲು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಶುಕ್ರವಾರ ಆದೇಶಿಸಿದೆ.

ಈ ಸಂಬಂಧ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ ರಚಿಸಲಾಗಿದೆ. ಹಗರಣ ಕುರಿತ ವರದಿಯನ್ನು ಮೂರು ತಿಂಗಳಲ್ಲಿ ನೀಡುವಂತೆ ಆಯೋಗವನ್ನು ಸರ್ಕಾರ ಕೋರಿದೆ.

2021ರ ಜನವರಿ 21ರಂದು ಪಿಎಸ್ಐಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿತ್ತು. ನೇಮಕಾತಿಯಲ್ಲಿ ನಿಯಮಗಳ ಉಲ್ಲಂಘನೆ, ವಿವಿಧ ಹಂತಗಳಲ್ಲಿ ನಡೆದಿರುವ ಅಕ್ರಮಗಳು ಹಾಗೂ ಯಾರೆಲ್ಲಾ ದುರ್ಲಾಭ ಪಡೆದಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಮುಂದಿನ ದಿನಗಳಲ್ಲಿ ಪಿಎಸ್‌ಐ ಹುದ್ದೆಯ ನೇರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಯಮಾನುಸಾರ, ಪಾರದರ್ಶಕ ಹಾಗೂ ಲೋಪರಹಿತವಾಗಿ ನಡೆಸಲು ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಶಿಫಾರಸು ಮಾಡುವಂತೆ ಆಯೋಗವನ್ನು ಕೋರಲಾಗಿದೆ.

ಸಿಐಡಿ ತಂಡ ಹಾಗೂ ಪೊಲೀಸ್ ನೇಮಕಾತಿ ವಿಭಾಗವು ಆಯೋಗಕ್ಕೆ ಸಮಗ್ರ ಮಾಹಿತಿ, ದಾಖಲೆ ಸಲ್ಲಿಸುವಂತೆ ಸೂಚಿಸಿದೆ.

ನ್ಯಾಯಾಂಗ ತನಿಖೆಯನ್ನು ರಚಿಸುವ ಆದೇಶವು ಅದರ ಉಲ್ಲೇಖದ ನಿಯಮಗಳಾಗಿ ನಾಲ್ಕು ಪ್ರಶ್ನೆಗಳನ್ನು ಪಟ್ಟಿಮಾಡಿದೆ. 545 ಪಿಎಸ್‌ಐಗಳ ನೇಮಕ ಮಾಡುವ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ? ಉಲ್ಲಂಘನೆಗಳು ಅಥವಾ ಅಕ್ರಮಗಳು ಯಾವುವು? ಅಕ್ರಮಗಳು ಯಾವ ಮಟ್ಟದಲ್ಲಿ ನಡೆದಿವೆ? ಅಕ್ರಮದಿಂದ ಅನಗತ್ಯ ಲಾಭ ಪಡೆದ ವ್ಯಕ್ತಿಗಳು ಯಾರು? PSI ನೇಮಕಾತಿ ಪರೀಕ್ಷೆಯನ್ನು ನಿಯಮಗಳ ಪ್ರಕಾರ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲು ಸರ್ಕಾರವು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು? ಎಂಬುದರ ಕುರಿತು ವರದಿ ಸಲ್ಲಿಸುವಂತೆ ಸೂಚಿಸಿದೆ. ಆಲ್ಲದೆ, ಸಿಐಡಿ ಮತ್ತು ಪೊಲೀಸ್ ನೇಮಕಾತಿ ವಿಭಾಗವು ಅಗತ್ಯ ದಾಖಲೆಗಳು ಮತ್ತು ಮಾಹಿತಿಯನ್ನು ಒದಗಿಸುವ ಮೂಲಕ ಆಯೋಗದೊಂದಿಗೆ ಸಹಕರಿಸುವಂತೆಯೂ ಆದೇಶದಲ್ಲಿ ಸೂಚನೆ ನೀಡಿದೆ.

ಇದಲ್ಲದೆ, ಅಗತ್ಯವಿರುವ ಸೌಲಭ್ಯ ಹಾಗೂ ಸಿಬ್ಬಂದಿಗಳೊಂದಿಗೆ ಆಯೋಗಕ್ಕೆ ಬೆಂಗಳೂರಿನಲ್ಲಿ ಕಚೇರಿ ಒದಗಿಸುವಂತೆಯೂ ಡಿಜಿ & ಐಜಿಪಿಗೆ ಸೂಚನೆ ನೀಡಿದೆ.


545 ಪಿಎಸ್‌ಐಗಳ ನೇಮಕಾತಿಯಲ್ಲಿ ಅಕ್ರಮಗಳು ಮತ್ತು ಭ್ರಷ್ಟಾಚಾರದ ಆರೋಪ ಕುರಿತು ಕಾಂಗ್ರೆಸ್ ಪಕ್ಷ ಬಿಜೆಪಿ ಅಂದಿನ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಚುನಾವಣಾ ಪ್ರಚಾರದ ವೇಳೆಯಲ್ಲಿಯೂ ಈ ವಿಚಾರವನ್ನು ಪ್ರಮುಖ ಅಸ್ತ್ರವಾಗಿ ಬಳಕೆ ಮಾಡಿತ್ತು.

ಪ್ರಕರಣ ಸಂಬಂಧ ಅಂದಿನ ಬಿಜೆಪಿ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಇದರಂತೆ ಆಗಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪಾಲ್ ಸೇರಿದಂತೆ ಹಲವಾರು ಅಧಿಕಾರಿಗಳನ್ನು ಮತ್ತು ಪರೀಕ್ಷೆಗೆ ಹಾಜರಾಗಿದ್ದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳನ್ನು ಬಂಧನಕ್ಕೊಳಪಡಿಸಲಾಗಿತ್ತು. ಈಗಾಗಲೇ ಸರ್ಕಾರ ಪರೀಕ್ಷೆಯ ಫಲಿತಾಂಶಗಳನ್ನು ರದ್ದುಗೊಳಿಸಿದ್ದು, ಮರು ಪರೀಕ್ಷೆ ನಡೆಸಲು ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com