ಮಳೆ ಅವಾಂತರ: ಹಾವೇರಿಯಲ್ಲಿ ಮನೆ ಕುಸಿದು ಗಾಯಗೊಂಡಿದ್ದ ಮಗು ಸಾವು

ನಿರಂತರ ಮಳೆಯಿಂದಾಗಿ ಮನೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ 3 ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕು ಮಾಳಪುರ ಗ್ರಾಮದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾವೇರಿ: ನಿರಂತರ ಮಳೆಯಿಂದಾಗಿ ಮನೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ 3 ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕು ಮಾಳಪುರ ಗ್ರಾಮದಲ್ಲಿ ನಡೆದಿದೆ.

ಮೃತ ಮಗುವನ್ನು ಭಾಗ್ಯ ಚಲಮರದ್ (3) ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ನಿರಂತರ ಮಳೆಯಿಂದಾಗಿ ಮನೆ ಕುಸಿದು ಬಿದ್ದಿತ್ತು. ಘಟನೆ ವೇಳೆ ಮಗು ಗಂಭೀರವಾಗಿ ಗಾಯಗೊಂಡಿತ್ತು.

ಬಳಿಕ ಮಗುವನ್ನು ರಕ್ಷಣೆ ಮಾಡಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಗು ಮೃತಪಟ್ಟಿದೆ. ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ಮತ್ತೊಂದು ಮಗು ಚೇತರಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ಇದೇ ವೇಳೆ ಉಡುಪಿ ಜಿಲ್ಲೆಯ ಕೊಲ್ಲೂರು ಬಳಿಯ ಅರಸಿನಗುಂಡಿ ಜಲಪಾತ ವೀಕ್ಷಿಸುತ್ತಿದ್ದ ವೇಳೆ ಬಂಡೆಯಿಂದ ಜಾರಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ 23 ವರ್ಷದ ಶರತ್ ಕುಮಾರ್ ಮೃತದೇಹಕ್ಕಾಗಿ ಶೋಧ ಕಾರ್ಯಾಚರಣೆಯನ್ನು ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆಗಳು ಮುಂದುವರೆಸಿದ್ದು, ಮೃತದೇಹ ಪತ್ತೆಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ನೀರಿನ ಹರಿವು ತೀವ್ರವಾಗಿರುವ ಕಾರಣ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಭದ್ರಾವತಿ ಮೂಲದ ಶರತ್​ ಸ್ನೇಹಿತರೊಂದಿಗೆ ನಿನ್ನೆ(ಜುಲೈ 24) ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತ ನೋಡಲು ಬಂದಿದ್ದು, ಈ ವೇಳೆ ಬಂಡೆಗಳ ಮೇಲೆ ನಿಂತು ರೀಲ್ಸ್​ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದರು.

ಸ್ಥಳಕ್ಕೆ ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಯುವಕ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು. ಆದರೂ, ಮೃತದೇಹ ಪತ್ತೆಯಾಗಿಲ್ಲ. ಮಳೆ ಹಾಗೂ ನೀರಿನ ಹರಿವು ತೀವ್ರವಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಅಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಳುಗು ತಜ್ಞರು, ಪೊಲೀಸರು ಸ್ಥಳದಿಂದ ವಾಪಸ್​ ಆಗಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಎಲ್ಲಾ ನದಿಗಳು ಮತ್ತು ಜಲಮೂಲಗಳು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಜಲಮೂಲಗಳ ಸಮೀಪಕ್ಕೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com