ಡಿ.ಕೆ ಶಿವಕುಮಾರ್ ಭೇಟಿಯಾದ ಯೋಗೇಶ್ವರ್ ಪುತ್ರಿ ನಿಶಾ: ಏನಿದು 'ಸೈನಿಕ'ನ ಹೊಸ ಗೇಮ್ ಪ್ಲಾನ್!

ಬಿಜೆಪಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಪುತ್ರಿ ನಿಶಾ ಯೋಗೇಶ್ವರ್‌ ಮಂಗಳವಾರ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
ಡಿ.ಕೆ ಶಿವಕುಮಾರ್ ಭೇಟಿಯಾದ ನಿಶಾ ಯೋಗೇಶ್ವರ್
ಡಿ.ಕೆ ಶಿವಕುಮಾರ್ ಭೇಟಿಯಾದ ನಿಶಾ ಯೋಗೇಶ್ವರ್

ಬೆಂಗಳೂರು: ಬಿಜೆಪಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಪುತ್ರಿ ನಿಶಾ ಯೋಗೇಶ್ವರ್‌ ಮಂಗಳವಾರ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಬೆಂಗಳೂರಿನ ಕೆ.ಕೆ ಗೆಸ್ಟ್‌ ಹೌಸ್‌ಗೆ ಆಗಮಿಸಿದ ನಿಶಾ ಅವರು ಡಿ.ಕೆ. ಶಿವಕುಮಾರ್‌ ಭೇಟಿ ಮಾಡಿರುವುದು ರಾಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಇದು ಖಾಸಗಿ ಭೇಟಿನಾ?‌ ನಿಶಾ ಅವರು ತಮ್ಮ ಸಂಸ್ಥೆಯ ವಿಚಾರದ ಬಗ್ಗೆ ಮಾತನಾಡಲು ಬಂದಿದ್ದರಾ? ಅಥವಾ ಇದೊಂದು ರಾಜಕೀಯ ಭೇಟಿಯಾ ಎನ್ನುವ ಕುರಿತು ಊಹಾಪೋಹಗಳು ಎದ್ದಿವೆ. ಡಿ.ಕೆ. ಶಿವಕುಮಾರ್‌ ಅವರ ಮೂಲಗಳ ಪ್ರಕಾರ, ಇದೊಂದು ರಾಜಕೀಯ ಮಾತುಕತೆಗಾಗಿ ನಡೆದ ಭೇಟಿ. ಹಾಗಿದ್ದರೆ ಏನು ರಾಜಕೀಯ ಎನ್ನುವುದು ಸ್ಪಷ್ಟವಾಗಿಲ್ಲ.‌

ನಿಜವೆಂದರೆ, ಸಿ.ಪಿ. ಯೋಗೀಶ್ವರ್‌ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು,  ಬಿಜೆಪಿಯಲ್ಲಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ಸ್ಥಾಪನೆಯಲ್ಲಿ ಸಿ.ಪಿ. ಯೋಗೇಶ್ವರ್‌ ಅವರ ಪಾತ್ರವೂ ದೊಡ್ಡದಿತ್ತು.

ಇದೀಗ ಅದೇ ಸಿ.ಪಿ. ಯೋಗೇಶ್ವರ್‌ ಅವರು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಜತೆಗೆ ರಾಜಕೀಯ ಮೈತ್ರಿಯ ಮಾತುಕತೆ ಶುರು ಮಾಡಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುವ ನಿಟ್ಟಿನ ಮಾತುಕತೆಗೆ ಚಾಲನೆ ನೀಡಿದ್ದು ಯೋಗೇಶ್ವರ್‌ ಎನ್ನಲಾಗುತ್ತಿದೆ. ಅವರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗುವ ಕನಸು ಕಾಣುತ್ತಿದ್ದಾರೆ.

ಇದರ ನಡುವೆಯೇ ಇದೀಗ ನಿಶಾ ಯೋಗೇಶ್ವರ್‌ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. 33 ವರ್ಷದ ನಿಶಾ ಯೋಗೇಶ್ವರ್‌ ಅವರು ಚಿತ್ರನಟಿ ಮತ್ತು ರೂಪದರ್ಶಿಯಾಗಿದ್ದಾರೆ. ಇದರ ಜತೆಗೆ ಕೆಲವು ಉದ್ಯಮಗಳನ್ನೂ ನಡೆಸುತ್ತಿದ್ದಾರೆ. ಮದ್ದೂರಿನಲ್ಲಿ ಅವರಿಗೆ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಇದೆ.

ಈ ಹಿಂದೆ ನಿಶಾ ಯೋಗೀಶ್ವರ್‌ ಅವರು ರಾಜಕೀಯಕ್ಕೆ ಬರುತ್ತಾರೆ, ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹರಡಿತ್ತು. ನಿಶಾ ಅವರಿಗೆ ರಾಜಕೀಯದಲ್ಲಿ ಆಸಕ್ತಿಯೂ ಇದೆ ಎನ್ನಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿರುವುದು ಮತ್ತು ಡಿ.ಕೆ.ಶಿ ಆಪ್ತರು ಇದೊಂದು ರಾಜಕೀಯ ಭೇಟಿ ಎಂದು ಹೇಳುತ್ತಿರುವುದು ಕುತೂಹಲ ಮೂಡಿಸಿದೆ.

ಮೊನ್ನೆಯಷ್ಟೇ ಚನ್ನಪಟ್ಟಣದಲ್ಲಿ ಗೆದ್ದವರು, ಸೋತವರು ಸರ್ಕಾರ ಬೀಳಿಸಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದರು. ಈ ಬೆನ್ನಲ್ಲೇ ಉಪಮುಖ್ಯಮಂತ್ರಿ ಜೊತೆ ನಿಶಾ ಯೋಗೇಶ್ವರ್ ಕಾಣಿಸಿಕೊಂಡಿದ್ದಾರೆ. 2023ರ ವಿಧಾನ‌ಸಭಾ ಚುನಾವಣೆಯಲ್ಲಿ‌ ನಿಶಾ ಯೋಗೇಶ್ವರ್ ಅಪ್ಪನ ಪರ ಪ್ರಚಾರ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com