ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಕೆ: ಇಂದು ಕೂಡ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ಇಂದು ಬುಧವಾರ ಕೂಡ ಭಾರೀ ಮಳೆ ಮುಂದುವರಿದಿದೆ. ಮುಂದಿನ 24 ಗಂಟೆಗಳಲ್ಲಿ ಸಹ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ಇಂದು ಬುಧವಾರ ಕೂಡ ಭಾರೀ ಮಳೆ ಮುಂದುವರಿದಿದೆ. ಮುಂದಿನ 24 ಗಂಟೆಗಳಲ್ಲಿ ಸಹ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. 

ಕೊಡಗು, ಕರಾವಳಿ, ಮಲೆನಾಡು ಸೇರಿ ರಾಜ್ಯದ 14ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ರಾಜ್ಯದ 9ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಹ ಮುಂದುವರಿದಿದೆ. ಇದರಿಂದ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಜಲಾಶಯಗಳು ಭರ್ತಿಯಾಗುತ್ತಿವೆ. 

ಕರಾವಳಿ ಜಿಲ್ಲೆಗಳು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಜೆ ಮುಂದುವರಿಕೆ: ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿರುವ ಕಾರಣ ಮುನ್ನೆಚ್ಚರಿಕೆ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಅಂಗನವಾಡಿ, ಶಾಲಾ ಮತ್ತು ಕಾಲೇಜುಗಳಿಗೆ ಕಳೆದ ಮೂರು ದಿನಗಳಿಂದ ರಜೆ ನೀಡಲಾಗಿದೆ. ಇಂದು ಸಹ ರಜೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಕೊಡಗು, ಉಡುಪಿ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ: ಕೊಡಗು ಜಿಲ್ಲೆಯಲ್ಲಿ ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆ ಹಿನ್ನೆಲೆ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯುಸಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶಿಸಿದ್ದಾರೆ. ಅದೇ ರೀತಿ, ಉಡುಪಿ ಜಿಲ್ಲೆಯಲ್ಲಿ ರಜೆ ಘೋಷಿಸಿ ಜಿಲ್ಲಾಡಳಿತವು ಆದೇಶಿಸಿದೆ. ಇದು ಸತತ ಮೂರನೇ ರಜೆಯಾಗಿದೆ. ಪದವಿ ಕಾಲೇಜು ಸ್ನಾತಕೋತ್ತರ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ.

ಕೊಡಗು ಜಿಲ್ಲೆಯಲ್ಲಿ ಪ್ರವಾಹ ಮುನ್ನೆಚ್ಚರಿಕೆ: ಕೊಡಗಿನ ಹಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಕುಶಾಲನಗರ, ಭಾಗಮಂಡಲ ಮತ್ತು ಕರಡಿಗೋಡು ತಗ್ಗು ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಪ್ರವಾಹ ಎಚ್ಚರಿಕೆ ನೀಡಲು ಅಧಿಕಾರಿಗಳು ಒತ್ತಾಯಿಸಿದ್ದಾರೆ. ಪ್ರವಾಹ ಪೀಡಿತ ವಲಯಗಳಲ್ಲಿ ತುರ್ತು ಬಳಕೆಗಾಗಿ ತೆಪ್ಪಗಳನ್ನು ಸಿದ್ಧಪಡಿಸಲಾಗಿದೆ.

ಭಾಗಮಂಡಲದಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ದೇವಸ್ಥಾನದ ಪಟ್ಟಣದಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಸಿದ್ದಾಪುರದಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ, ಆದರೆ ಹಲವಾರು ನಿವಾಸಿಗಳು ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ. ಹಾರಂಗಿ ಅಣೆಕಟ್ಟಿನಿಂದ 20,000 ಕ್ಯೂಸೆಕ್ ಹೊರಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ಕುಶಾಲನಗರ ಬೆಲ್ಟ್‌ನಾದ್ಯಂತ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಉಡುಪಿ ಜಿಲ್ಲೆಯ ಕೊಟ್ಟಮುಡಿ ಗ್ರಾಮ ಹೊರಜಗತ್ತಿನಿಂದ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.

ಬೇತ್ರಿ ಮತ್ತು ಬಲಮುರಿ ಭಾಗಗಳಲ್ಲಿ ನೀರಿನ ಮಟ್ಟ ವೇಗವಾಗಿ ಏರುತ್ತಿದೆ. ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರಿದರೆ ಬೇತ್ರಿ ಸೇತುವೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.

ಕಾವೇರಿ ನದಿಯಿಂದ ಗ್ರಾಮದ ರಸ್ತೆಗಳು ಜಲಾವೃತಗೊಂಡ ನಂತರ ಮಡಿಕೇರಿ ತಾಲೂಕಿನ ಬೆಂಗೂರು ಗ್ರಾಮ ವ್ಯಾಪ್ತಿಯಲ್ಲಿ ದೋಣಿ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ತುರ್ತು ಸಂದರ್ಭಗಳಲ್ಲಿ ಬೋಟ್ ಸೌಲಭ್ಯವನ್ನು ನಿರ್ವಹಿಸುತ್ತಾರೆ. 2018 ರ ಮಾನ್ಸೂನ್ ಸಮಯದಲ್ಲಿ ಭಾರಿ ಭೂಕುಸಿತ ಕಂಡ ಟೋರಾ ಗ್ರಾಮದ ಭೂಕುಸಿತ ಪೀಡಿತ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ.

ಉತ್ತರ ಕನ್ನಡದ 4 ತಾಲೂಕಿಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ ಹಿನ್ನೆಲೆ ಜಿಲ್ಲೆಯ ನಾಲ್ಕು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರವಾರ, ಜೋಯಿಡಾ, ದಾಂಡೇಲಿ, ಹಳಿಯಾಳ ತಾಲೂಕಿನ ಶಾಲೆ ಮತ್ತು ಪದವಿಪೂರ್ವ ಕಾಲೇಜಿಗೆ ರಜೆ ಘೋಷಿಸಿ ಡಿಸಿ ಪ್ರಭುಲಿಂಗ್ ಕವಲಿಕಟ್ಟಿ ಆದೇಶಿಸಿದ್ದಾರೆ.

ಬೆಳಗಾವಿಯ ಶಾಲೆಗಳಿಗೆ ರಜೆ: ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದ ಹಿನ್ನೆಲೆ ಬೆಳಗಾವಿ ತಾಲೂಕು, ಬೆಳಗಾವಿ ನಗರ, ಖಾನಾಪುರ, ಮೂಡಲಗಿ, ಸವದತ್ತಿ, ಯರಗಟ್ಟಿ, ನಿಪ್ಪಾಣಿ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವ್ಯಾಪಕ ಮಳೆಯಾಗುತ್ತಿರುವ ಜಿಲ್ಲೆಯ ಆರು ತಾಲೂಕಿನ ಪ್ರಾಥಮಿಕ-ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಖಾನಾಪುರ ತಾಲೂಕಿನಲ್ಲಿ ಮಾತ್ರ ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ 2 ದಿನ ರಜೆ ಘೋಷಣೆ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಿರಂತರ ಮಳೆ‌ಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಅಂಗನವಾಡಿ ಕೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ಹೊರಡಿಸಿದ್ದಾರೆ.

ಕಲಬುರಗಿಯಲ್ಲೂ ರಜೆ: ಇನ್ನು ಕಲಬುರಗಿ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿರುವ ಹಿನ್ನೆಲೆಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಕಲಬುರಗಿ ಜಿಲ್ಲಾಧಿಕಾರಿ ಡಿಸಿ ಫೌಜಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ.

ಹಾಸನದ 5 ತಾಲೂಕುಗಳಲ್ಲಿ ರಜೆ: ಹಾಸನ ಜಿಲ್ಲೆಯ 5 ತಾಲೂಕುಗಳ ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ. ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಹಾಗೂ ಹಾಸನ ತಾಲೂಕಿನಾದ್ಯಂತ ಪ್ರಾಥಮಿಕ, ಪ್ರೌಢಶಾಲೆ, ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com