ಕರಾವಳಿ, ಮಲೆನಾಡು ಭಾಗಗಳಲ್ಲಿ ಎಡೆಬಿಡದ ಮಳೆ: ರೆಡ್ ಅಲರ್ಟ್ ಘೋಷಣೆ, ಶಾಲಾ ಕಾಲೇಜುಗಳಿಗೆ ರಜೆ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಷ್ಟೇ ಅಲ್ಲದೆ, ಮುಂದಿನ 24 ಗಂಟೆಗಳ ಕಾಲ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಷ್ಟೇ ಅಲ್ಲದೆ, ಮುಂದಿನ 24 ಗಂಟೆಗಳ ಕಾಲ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಮುಂದಿನ ಎರಡು ದಿನಗಳ ಕಾಲ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ದಕ್ಷಿಣ ಕೊಂಕಣ ಮತ್ತು ಮಧ್ಯ ಮಹಾರಾಷ್ಟ್ರಕ್ಕೆ 'ರೆಡ್' ಅಲರ್ಟ್ ಘೋಷಣೆ ಮಾಡಲಾಗಿದೆ.  

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ 200 ಮಿ.ಮೀ.ಗೂ ಅಧಿಕ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜುಲೈ 29ರವರೆಗೆ ಧಾರಾಕಾರ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದೆ. ಬೆಳಗಾವಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಕ್ಯಾಸಲ್ ರಾಕ್, ಸುಬ್ರಹ್ಮಣ್ಯ, ಗೇರುಸೊಪ್ಪ, ಉಡುಪಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಹೊನ್ನಾವರ, ಲಿಂಗನಮಕ್ಕಿ, ಕುಮಟಾ, ಮಂಚಿಕೆರೆ, ಮಂಕಿ, ಕೊಲ್ಲೂರು, ಕುಂದಾಪುರ, ಕೋಟ, ಮುಲ್ಕಿ, ಸಿದ್ದಾಪುರ, ಬೇಲಿಕೇರಿ, ತಾಳಗುಪ್ಪ, ಕೊಪ್ಪ, ಜಯಪುರ, ಮಂಗಳೂರು, ಮಾಣಿ, ಮಂಗಳೂರು ವಿಮಾನ ನಿಲ್ದಾಣ, ಪಣಂಬೂರು, ಶಿರಾಲಿ, ಲೋಂಡಾ, ಉಪ್ಪಿನಂಗಡಿ, ಕಾರ್ಕಳ, ಕೊಟ್ಟಿಗೆಹಾರ, ಶೃಂಗೇರಿ, ಹುಂದಚಕಟ್ಟೆಯಲ್ಲೂ ಮಳೆಯಾಗಿದೆ.

ಮತ್ತೊಂದೆಡೆ ಅತಿ ಮಳೆಯ ಪರಿಣಾಮ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಕೊಡಗು, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಹಾಸನ, ಶಿವಮೊಗ್ಗ, ಉಡುಪಿ ಮತ್ತು ದಕ್ಷಿಣ ಕನ್ನಡದ ಕೆಲವು ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ಸಹ ರಜೆ ಘೋಷಿಸಲಾಗಿದೆ.

ಹವಾಮಾನ ಇಲಾಖೆಯಿಂದ ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯನ್ನು ನೀಡಲಾಗಿದ್ದು, ಜಲಾವೃತವಾಗಿರುವ ಪ್ರದೇಶಗಳಿಂದ ತೆರವುಗೊಳಿಸುವಂತೆ ಮನವಿ ಮಾಡಲಾಗಿದೆ.

ಸುಬ್ರಹ್ಮಣ್ಯ ಬಳಿಯ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಅಪಾಯದ ಮಟ್ಟ ಮೀರಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸ್ನಾನಘಟ್ಟಕ್ಕೆ ಭೇಟಿ ನೀಡುವ ಭಕ್ತರು ಮಳೆ ಕಡಿಮೆಯಾಗುವವರೆಗೆ ದೇಗುಲಕ್ಕೆ ಭೇಟಿ ನೀಡದಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ ಶೃಂಗೇರಿಯಲ್ಲಿ ತುಂಗಾ ನದಿಯು ಸಹ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಚಿಕ್ಕಮಗಳೂರಿನ ಕಲ್ಲತ್ತಿಗಿರಿ ಜಲಪಾತದಲ್ಲಿ ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಪಾತಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಇನ್ನೊಂದೆಡೆ ದತ್ತಪಾದ ರಸ್ತೆ ಬಳಿ ಭೂಕುಸಿತ ಸಂಭವಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com