ರಾಜ್ಯದಲ್ಲಿ ಮಳೆಯ ಅಬ್ಬರ: ಪರಿಸ್ಥಿತಿ ನಿಭಾಯಿಸುವಲ್ಲಿ ನಿರ್ಲಕ್ಷ್ಯ ತೋರುವಂತಿಲ್ಲ; ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆಯಾಗುವ ಸಾಧ್ಯತೆಗಳಿದ್ದು, ಮಳೆ ಸಂಬಂಧಿತ ಹಾನಿ ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಯಾವುದೇ ನಿರ್ಲಕ್ಷ್ಯ ತೋರುವಂತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಬುಧವಾರ ಎಚ್ಚರಿಕೆ ನೀಡಿದರು.
ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ
ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆಯಾಗುವ ಸಾಧ್ಯತೆಗಳಿದ್ದು, ಮಳೆ ಸಂಬಂಧಿತ ಹಾನಿ ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಯಾವುದೇ ನಿರ್ಲಕ್ಷ್ಯ ತೋರುವಂತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಬುಧವಾರ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗಳು  ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಸಿಇಓ ಅವರೊಂದಿಗೆ ಪ್ರಸಕ್ತ ಸಾಲಿನ ಹವಾಮಾನ ಮತ್ತು ಮಳೆ-ಬೆಳೆಗೆ ಸಂಬಂಧಿಸಿದಂತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ಹವಾಮಾನ ಮುನ್ಸೂಚನೆಯಂತೆ ಗುರುವಾರ ಮತ್ತು ಶುಕ್ರವಾರ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ, ಮುಂದಿನ ಒಂದು ವಾರದವರೆಗೆ, ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಜೂನ್ ತಿಂಗಳಲ್ಲಿ ರಾಜ್ಯವು ಶೇ 56 ರಷ್ಟು ಮಳೆ ಕೊರತೆಯನ್ನು ಎದುರಿಸಿದೆ, ಇದು ಬಿತ್ತನೆ ಕಾರ್ಯಗಳು ಸೇರಿದಂತೆ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಆದರೆ, ಜುಲೈನಲ್ಲಿ 228 ಮಿಮೀ ವಾಡಿಕೆಗಿಂತಲೂ 313 ಮಿಮೀ ಮಳೆಯಾಗಿದೆ, ಇದು ಶೇಕಡಾ 37 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಹೇಳಿದರು.

ಉಡುಪಿ, ಮಂಗಳೂರು, ಉತ್ತರ ಕನ್ನಡ ಮತ್ತು ಕೊಡಗು ನಾಲ್ಕು ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗಿದ್ದು, 21 ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದಂತಹ ಆರು ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ ಎಂದು ತಿಳಿಸಿದರು.

ಅಂಗನವಾಡಿಗಳು, ಶಾಲಾ ಕಟ್ಟಡಗಳು ಮತ್ತು ಆಸ್ಪತ್ರೆಗಳ ದುರಸ್ತಿ ಕುರಿತು ಇರುವ ಅವಶ್ಯಕತೆಗಳನ್ನು ಈಗಾಗಲೇ ಅಧಿಕಾರಿಗಳಿಗೆ ತಿಳಿದಿದೆ. ದುರಸ್ತಿ ಕಾರ್ಯಕ್ಕೆ ಬೇಕಾದಷ್ಟು ಹಣವಿದೆ, ಆದರೂ ಏಕೆ ಕ್ರಮ ಕೈಗೊಂಡಿಲ್ಲ, ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಗರಂ ಆದರು.

ಇದೇ ವೇಳೆ ಭಾರೀ ಮಳೆ ಹಿನ್ನೆಲೆಯಲ್ಲಿ ರಾಜ್ಯ ಎಲ್ಲೆಡೆ ಮುನ್ನೆಚ್ಚರಿಕೆ ವಹಿಸಿ ಪ್ರಾಣಹಾನಿ ಮತ್ತು ಇತರ ಹಾನಿಗಳನ್ನು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾಲ ವಸೂಲಾತಿ ಇಲ್ಲ
ಈ ಅವಧಿಯಲ್ಲಿ ರೈತರಿಂದ ಸಾಲ ವಸೂಲಿ ಮಾಡಬಾರದು, ರೈತರಿಗೆ ಸಾಲ ನೀಡಿ ಭಾರಿ ಬಡ್ಡಿ ವಿಧಿಸುವ ಖಾಸಗಿ ಲೇವಾದೇವಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜೂನ್ 1 ರಿಂದ, ಹವಾಮಾನ ವೈಪರೀತ್ಯದಿಂದಾಗಿ 38 ಜನರು ಸಾವನ್ನಪ್ಪಿದ್ದಾರೆ. ಅವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಮಳೆ ಸಂಬಂಧಿತ ಪ್ರಕರಣಗಳಲ್ಲಿ ಇನ್ನೂ 35 ಮಂದಿ ಗಾಯಗೊಂಡಿದ್ದಾರೆ. 57 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ, 208 ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ ಮತ್ತು 2,862 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಭಾರೀ ಮಳೆಗೆ ಇದುವರೆಗೆ 105 ಜಾನುವಾರುಗಳು ಬಲಿಯಾಗಿವೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಕಾವೇರಿ ಮತ್ತು ಕೃಷ್ಣಾ ನದಿ ಮೂಲದ ಎಲ್ಲಾ ಜಲಾಶಯಗಳು "ಬಹುತೇಕ ತುಂಬಿವೆ". ಒಂದು ವಾರದಲ್ಲಿ, ಜಲಾಶಯದ ಒಳಹರಿವು 227 ಟಿಎಂಸಿಯಷ್ಟಾಗಿದೆ ಎಂದರು.

ಜುಲೈ 31 ರಂದು ಸಿದ್ದರಾಮಯ್ಯ ಅವರು ಮಳೆ ಪೀಡಿತ ಮಂಗಳೂರು, ಉಡುಪಿ, ಉತ್ತರ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com