ಕಲ್ಲು ಗಣಿಗಾರಿಕೆ: ಸಮಿತಿ ರಚಿಸಿ 6105 ಕೋಟಿ ರೂ. ರಾಯಧನ, ದಂಡದ ಹಣ ವಸೂಲಿಗೆ ಸರ್ಕಾರ ಕ್ರಮ!

ಕಲ್ಲು ಗಣಿ ಗುತ್ತಿಗೆಗೆ ಅನುಮತಿ ಪಡೆದಿದ್ದ ಪ್ರದೇಶಕ್ಕಿಂತ ಹೆಚ್ಚು ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ಮಾಡಿರುವ ಕ್ವಾರಿ ಮಾಲೀಕರಿಗೆ ವಿಧಿಸಿರುವ 6105 ಕೋಟಿ ರು. ದಂಡವನ್ನು ಸಮಿತಿ ರಚನೆ ಮಾಡುವ ಮೂಲಕ ವಸೂಲು ಮಾಡಲು ರಾಜ್ಯ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಲ್ಲು ಗಣಿ ಗುತ್ತಿಗೆಗೆ ಅನುಮತಿ ಪಡೆದಿದ್ದ ಪ್ರದೇಶಕ್ಕಿಂತ ಹೆಚ್ಚು ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ಮಾಡಿರುವ ಕ್ವಾರಿ ಮಾಲೀಕರಿಗೆ ವಿಧಿಸಿರುವ 6105 ಕೋಟಿ ರು. ದಂಡವನ್ನು ಸಮಿತಿ ರಚನೆ ಮಾಡುವ ಮೂಲಕ ವಸೂಲು ಮಾಡಲು ರಾಜ್ಯ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಅವರು ಮಾಹಿತಿ ನೀಡಿದರು.

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕ್ವಾರಿಗಳ ಮಾಲೀಕರು ತಾವು ಗುತ್ತಿಗೆ ಪಡೆದಿರುವ ಪ್ರದೇಶಕ್ಕಿಂತ ಹೆಚ್ಚಿನ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಗಣಿಗಾರಿಕೆ ಮಾಡಿ ಸರ್ಕಾರಕ್ಕೆ ರಾಜಧನವನ್ನೂ ಪಾವತಿಸದೆ ಭಾರೀ ಪ್ರಮಾಣದ ಉಪ ಖನಿಜವನ್ನು ಮಾರಾಟ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ರಾಜಧನ ವಂಚನೆಯಾಗಿದೆ. ಹಾಗಾಗಿ ಇಂತಹ ಅಕ್ರಮ ಗಣಿಗಾರಿಕೆ ನಡೆಸಿರುವ ಕ್ವಾರಿ ಮಾಲೀಕರಿಗೆ ಸರ್ಕಾರ ಕಾಲಕಾಲಕ್ಕೆ ದಂಡ ವಿಧಿಸುತ್ತಾ ಬಂದಿದ್ದು, ಇದರ ಒಟ್ಟು ಮೊತ್ತ 6105 ಕೋಟಿ ರು.ಗಳಷ್ಟಾಗಿದೆ. ಈ ಮೊತ್ತ ವಸೂಲಿ ಪ್ರಕ್ರಿಯೆ ಮುಂದೂಡಿಕೆಯಾಗುತ್ತಲೇ ಬಂದಿದೆ. ಇದೀಗ ಆ ಮೊತ್ತವನ್ನು ಒಂದು ಬಾರಿ ಪರಿಹಾರದ ರೂಪದಲ್ಲಿ ವಸೂಲಿ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಬಹಳ ವರ್ಷಗಳಿಂದ ಬಾಕಿ ಇರುವ ಸಾಲ ತೀರುವಳಿಗೆ ಬ್ಯಾಂಕುಗಳಲ್ಲಿ ನೀಡುವ ಒಂದು ಬಾರಿ ಪರಿಹಾರದ ರೂಪದಲ್ಲಿ ಕ್ವಾರಿ ಮಾಲೀಕರಿಗೂ ತಮ್ಮ ದಂಡ ಪಾವತಿಗೆ ಅವಕಾಶ ಸಿಗಲಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಮಧ್ಯಸ್ಥಿತಿಯಲ್ಲಿ ಕ್ವಾರಿ ಮಾಲೀಕರು ತಾವು ಪಾವತಿಸಬೇಕಿರುವ ದಂಡದ ಮೊತ್ತದ ಬಗ್ಗೆ ಮಾತುಕತೆ ಮೂಲಕ ಒಂದಷ್ಟು ರಿಯಾಯಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ರಸ್ತೆ ನಿಯಂತ್ರಣ, ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ
ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಸಚಿವ ಸಂಪುಟ ಸಭೆ ನಿರ್ಣಯಿಸಿದೆ. ಲೋಕೋಪಯೋಗಿ ಇಲಾಖೆಯಡಿ ಕೈಗೊಳ್ಳುವ ಕಾಮಗಾರಿಗಳ ಪೈಕಿ ಪಿಪಿಪಿ ಯೋಜನೆಯಡಿ ಅನುಷ್ಠಾನ ಮಾಡುವ ಯೋಜನೆಗಳಿಗೆ ಮಾತ್ರ ಅನ್ವಯವಾಗುವಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ.

ಈ ಪ್ರಾಧಿಕಾರವು ರಾಜ್ಯದ ಪ್ರಮುಖ ರಸ್ತೆಗಳ ಅಭಿವೃದ್ಧಿ ಯೋಜನೆಯ ಆದ್ಯತಾ ಪಟ್ಟಿಗಳನ್ನು ರಚಿಸಲಿದೆ. ಅಂತಾರಾಜ್ಯ ಸಂರ್ಪಸುವ ಹೆದ್ದಾರಿಗಳು, ಕೈಗಾರಿಕಾ ಕಾರಿಡಾರ್, ಹೆದ್ದಾರಿ ಅಭಿವೃದ್ಧಿ ಯೋಜನೆಗಳಿಗೆ ಯೋಜನಾ ವರದಿ ಹಾಗೂ ಕಾರ್ಯಸಾಧ್ಯತಾ ವರದಿ ತಯಾರಿಸುವುದು, ರಸ್ತೆ ಅಭಿವೃದ್ಧಿಗಾಗಿ ಹೆಚ್ಚಿನ ಖಾಸಗಿ ಬಂಡವಾಳ ಆಕರ್ಷಿಸಲು ಸೂಕ್ತ ಯೋಜನೆ ರಚಿಸುವುದು, ತಾತ್ವಿಕ ಅನುಮೋದನೆ ನೀಡುವುದು ಈ ಪ್ರಾಧಿಕಾರದ ಉದ್ದೇಶಗಳಾಗಿವೆ. ಪಿಪಿಪಿ ಗುತ್ತಿಗೆಗಳ ಸಂಗ್ರಹಣೆ, ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಅತ್ಯುತ್ತಮ ಮಾನದಂಡಗಳ ಅನುಗುಣವಾಗಿ ಮಾರ್ಗಸೂಚಿಗಳನ್ನು ಹಾಗೂ ಸಂಗ್ರಹಣ ವಿಧಾನಗಳನ್ನು ರಚನೆ ಮಾಡಲಿದೆ ಎಂದು ಪಾಟೀಲ್ ಅವರು ತಿಳಿಸಿದರು.

ಸಹಕಾರ ಇಲಾಖೆಯಲ್ಲಿ ಆರ್‌ಐಡಿಎಫ್‌-28 ಯೋಜನೆಯಡಿ ಎಪಿಎಂಸಿಗಳಿಗೆ ರಸ್ತೆ ಮಾಡಲು, ಇತರೆ ಮೂಲಭೂತ ಸೌಲಭ್ಯ ಕಲ್ಪಿಸಲು 130. 40 ಕೋಟಿ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ 6 ತಿಂಗಳಿಂದ 6 ವರ್ಷದ ಒಳಗಿನ ಮಕ್ಕಳು ಹಾಗೂ ಗರ್ಭಿಣಿ, ಬಾಣಂತಿಯರಿಗೆ ಮೊಟ್ಟೆ ವಿತರಣೆ ವಿಚಾರದಲ್ಲಿ ವಿಭಾಗವಾರು ಮೊಟ್ಟೆ ಖರೀದಿಸಿ ವಿತರಿಸಲು ನಿರ್ಣಯಿಸಲಾಗಿದೆ.

ಕೆಟಿಪಿಪಿ ಕಾಯ್ದೆ ಅನ್ವಯ ಈ ಖರೀದಿ ಮಾಡಲಾಗುತ್ತದೆ. ಇದರಿಂದ ಖರೀದಿ ಪಾರದರ್ಶಕವಾಗಿ ನಡೆಯಲಿದೆಯಲ್ಲದೆ, ಖರೀದಿ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯವಾಗಲಿದೆ ಎಂದು ಹೇಳಿದರು. ಈ ಮೊದಲು ತಾಲೂಕು ಮಟ್ಟದಲ್ಲಿ ಖರೀದಿ ಮಾಡಲಾಗುತ್ತಿತ್ತು. ನ್ನು ಕೆಲವು ಕಡೆ ಅಂಗನವಾಡಿ ಕಾರ್ಯಕರ್ತೆಯರೇ ತಮ್ಮ ಸ್ವಂತ ದುಡ್ಡಿನಿಂದ ಖರೀದಿಸುತ್ತಿದ್ದರು. ಅವರಿಗೆ ಸಕಾಲದಲ್ಲಿ ಹಣ ಪಾವತಿ ಆಗುತ್ತಿರಲಿಲ್ಲ. ಅವರು ಮುಂಗಡ ಹಣ ನೀಡುವಂತೆ ಕೇಳಿದ್ದರು. ಅದಕ್ಕೆ ಕಾಯ್ದೆಯಲ್ಲಿ ಅವಕಾಶ ಇಲ್ಲದೇ ಇರುವುದರಿಂದ ವಿಭಾಗವಾರು ಟೆಂಡರ್ ಕರೆದು ಮೊಟ್ಟೆ ವಿತರಣೆಗೆ ತೀರ್ಮಾನ ಮಾಡಲಾಗಿದೆ. ಮೊಟ್ಟೆ ಖರೀದಿಗೆ 297.19 ಕೋಟಿ ರೂ. ಮೀಸಲಿರಿಸಲಾಗಿದೆ. ಮೊಟ್ಟೆಯೊಂದಕ್ಕೆ 6 ರೂ.ಮೀರದಂತೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.

ಕೊಡಗರು ಎಂದಿದ್ದ ಕೊಡವ ಸಮುದಾಯದ ಹೆಸರನ್ನು ಕೊಡವರು ಎಂದು ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ದ್ವಾರಕಾನಾಥ್ ಸಮಿತಿ ನೀಡಿದ್ದ ವರದಿಯಂತೆ, ಹಿಂದುಳಿದ ವರ್ಗದ ಆಯೋಗದ ಶಿಫಾರಸ್ಸಿನಂತೆ ಈ ತಿದ್ದುಪಡಿ ಆದೇಶ ಮಾಡಲಾಗಿದೆ. ಇಂದಿನಿಂದ ಕೊಡಗರು ಎನ್ನುತ್ತಿದ್ದ ಕೊಡವ ಸಮುದಾಯ ಕೊಡವರೆಂದೇ ಕರೆಸಿಕೊಳ್ಳುತ್ತದೆ ಎಂದು ಹೇಳಿದರು.

ಲೋಕಾಯುಕ್ತ ವಿಚಾರಣಾ ನಿಬಂಧಕರಾಗಿ ನಿವೃತ್ತ ನ್ಯಾಯಾಧೀಶ ಸಿ. ರಾಜಶೇಖರ್ ಅವರನ್ನು ನೇಮಕ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.

ಉಳಿದಂತೆ ಅರಣ್ಯ ಮತ್ತು ಜೀವ ಪರಿಸರ ಇಲಾಖೆಯ ರಾಷ್ಟ್ರೀಯ ಹಾಗೂ ವನ್ಯಜೀವಿ ತಾಣವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ನಿರ್ಧಾರ ತೆಗೆದುಕೊಳ್ಳಲು ಅಗತ್ಯ ಇರುವ ಉಪ ಸಮಿತಿ ರಚಿಸಲು ಮುಖ್ಯಮಂತ್ರಿಯವರಿಗೆ ಸಂಪುಟ ಅಧಿಕಾರ ನೀಡಿದೆ ಎಂದರು.

ಚರಕ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ:
ಶಿವಾಜಿನಗರದ ಅಟಲ್ ವೈದ್ಯಕೀಯ ಕಾಲೇಜಿನಲ್ಲಿ ಚರಕ ಆಸ್ಪತ್ರೆ ನಿರ್ವಣಕ್ಕೆ 22.70 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಪ್ರೋ ಯೂರಾಲಜಿ ಸಂಸ್ಥೆಯ ಅನೆಕ್ಸ್ ಕಟ್ಟಡಕ್ಕೆ 26 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ದೊರೆತಿದೆ.

ಈ ಪೈಕಿ 8.50 ಕೋಟಿ ರೂ. ರಾಜ್ಯ ಸರ್ಕಾರದಿಂದ ಹಾಗೂ 17.50 ಕೋಟಿ ರೂ.ಗಳನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಕ್ರೋಡೀಕರಿಸಿ ವಿನಿಯೋಗಿಸಲು ಒಪ್ಪಿಗೆ ಸೂಚಿಸಲಾಗಿದೆ ಎಂದರು. ಮುದ್ದೇನಹಳ್ಳಿ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ವಿಷಯದ ಚರ್ಚೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com