ವಂಶಿಕಾ ಹೆಸರಲ್ಲಿ ವಂಚನೆ ಆರೋಪ ಸುಳ್ಳು, ನನ್ನ ವಿರುದ್ಧ ವ್ಯವಸ್ಥಿತ ಸಂಚು- ನಿಶಾ ನರಸಪ್ಪ

ಮಾಸ್ಟರ್ ಆನಂದ್ ಅವರ ಪುತ್ರಿ, ಬಾಲನಟಿ ವಂಶಿಕಾ ಹೆಸರಿನಲ್ಲಿ ವಂಚನೆ ಆರೋಪ ಸುಳ್ಳು, ಯಶಸ್ವಿನಿ ಸೇರಿದಂತೆ ಎಲ್ಲರೂ ಸೇರಿ ನನ್ನ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ಜೈಲಿಗೆ ಕಳುಹಿಸಿದರು ಎಂದು ಈ ಪ್ರಕರಣದಲ್ಲಿ ಆರೋಪಿ ಆಗಿರುವ ನಿಶಾ ನರಸಪ್ಪ ಹೇಳಿದ್ದಾರೆ.
ವಂಶಿಕಾ, ನಿಶಾ ನರಸಪ್ಪ ಸಾಂದರ್ಭಿಕ ಚಿತ್ರ
ವಂಶಿಕಾ, ನಿಶಾ ನರಸಪ್ಪ ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾಸ್ಟರ್ ಆನಂದ್ ಅವರ ಪುತ್ರಿ, ಬಾಲನಟಿ ವಂಶಿಕಾ ಹೆಸರಿನಲ್ಲಿ ವಂಚನೆ ಆರೋಪ ಸುಳ್ಳು, ಯಶಸ್ವಿನಿ ಸೇರಿದಂತೆ ಎಲ್ಲರೂ ಸೇರಿ ನನ್ನ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ಜೈಲಿಗೆ ಕಳುಹಿಸಿದರು ಎಂದು ಈ ಪ್ರಕರಣದಲ್ಲಿ ಆರೋಪಿ ಆಗಿರುವ ನಿಶಾ ನರಸಪ್ಪ ಹೇಳಿದ್ದಾರೆ.

ಜೈಲಿನಿಂದ ಹೊರಬಂದ ಬಳಿಕ ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಏಳು ವರ್ಷಗಳಿಂದ ಎನ್.ಎನ್‌.ಪ್ರೊಡಕ್ಷನ್ ಅಂತ ಕಂಪನಿ ನಡೆಸುತ್ತಿದ್ದೇನೆ. ಅದರ ಮೂಲಕ ಸಾಕಷ್ಟು ಇವೆಂಟ್ ಮಾಡಿದ್ದು, ನನ್ನ ಕಂಪನಿಗೆ ಒಂದೂ ಕಪ್ಪುಚುಕ್ಕೆ ಇರಲಿಲ್ಲ. ಆದರೆ ಈಗ ಯಶಸ್ವಿನಿಯಿಂದ ಕಂಪನಿಗೆ ಕೆಟ್ಟ ಹೆಸರು ಬಂದಿದೆ. ನನ್ನ ವಿರುದ್ಧ ಸುಳ್ಳು ಸುದ್ದಿ ಹರಡಿದ್ದಾರೆ ಎಂದು ಆರೋಪಿಸಿದರು. 

ಒಂದು ವರ್ಷದಿಂದಲೂ ಯಶಸ್ವಿನಿ ಪರಿಚಯವಿತ್ತು. ಅವರು ಪ್ರಮೋಷನ್​​ಗಾಗಿ ಬರುತ್ತಿದ್ದರು. ಅವರು ಪುಗ್ಸಟ್ಟೆಯಾಗಿ ಯಾವುದೇ ಇವೆಂಟ್​ಗೆ ಬಂದಿರಲಿಲ್ಲ. ಪ್ರತಿಯೊಂದಕ್ಕೂ ಹಣ ಪಡೆದೇ ಬಂದಿದ್ದಾರೆ. ಎಲ್ಲಾ ವಾಹಿನಿಗಳಲ್ಲೂ ಸಂಭಾವನೆ ಪಡೆದೇ ಅವರು ಭಾಗವಹಿಸೋದು. ಅವರಿಗೆ  ರೂ. 20,000 ಹಣ ಮಾತ್ರ ಕೊಡಬೇಕಾಗಿತ್ತು. ಆದರೆ ಪೊಲೀಸ್ ಠಾಣೆಯಲ್ಲಿ ನಾನು ಅವರಿಗೆ ಪರಿಚಯ ಇಲ್ಲ ಅಂತಾ ಹೇಳಿದರು. ನನ್ನ ಪ್ರೊಡಕ್ಷನ್ ಕಂಪನಿಗೆ ಏಳು ವರ್ಷ, ವಂಶಿಕಾಗೆ ಐದು ವರ್ಷ. ನಾನು ಇವರ ಮಗಳಿಂದಲೇನಾ ಬದುಕಿರೋದು? ಅಂತಾ ಪ್ರಶ್ನಿಸಿದ ನಿಶಾ, ನನ್ನನ್ನು ಪರ್ಸನಲ್ ಆಗಿ ಟಾರ್ಗೆಟ್ ಮಾಡಿದವರಿಗೆ ಯಶಸ್ವಿನಿ ಸಹಾಯ ಮಾಡಿದ್ದಾರೆ ಎಂದರು.

ಹರ್ಷಿತಾ ಎಂಬ ಹುಡುಗಿ ಸುಮಾರು ಎರಡು ವರ್ಷ ನನ್ನ ಕಂಪನಿಯಲ್ಲಿ ಕೆಲಸ ಮಾಡಿದರು. ಅವರಿಗೆ ನನ್ನ ಎಲ್ಲ ಬ್ಯಾಂಕ್ ಡಿಟೇಲ್ಸ್​ ಗೊತ್ತಿತ್ತು. ಬಳಿಕ ಅವರು ನನ್ನ ಕಂಪನಿಯಲ್ಲಿ ಶೇರ್ ಕೇಳಿದ್ರು, ಅದಕ್ಕೆ ನಾನು ಒಪ್ಪಲಿಲ್ಲ. ಆಗ ಅವರ ಐಫೋನ್​​ನಲ್ಲಿ ನನ್ನ ಇನ್​ಸ್ಟಾಗ್ರಾಂ ಓಪನ್​ ಮಾಡಿದ್ರು, ಅದನ್ನು ಪ್ರಶ್ನೆ ಮಾಡಿದ ಬಳಿಕ ಕೆಲಸ ಬಿಟ್ಟರು. ಅಲ್ಲಿಂದ  ತೊಂದರೆ  ಶುರುವಾಯ್ತು. ಇವರೆಲ್ಲರೂ ಸೇರಿ ಆರು ತಿಂಗಳೂ ಕಂಪ್ಲೀಟ್ ಪ್ಲ್ಯಾನ್​ ಮಾಡಿ‌ ನನ್ನ ಮೇಲೆ‌ ವ್ಯವಸ್ಥಿತವಾಗಿ ಸಂಚು ಮಾಡಿದ್ದಾರೆ ಎಂದು ನಿಶಾ ಆರೋಪಿಸಿದರು. 

ಇದೇ ವೇಳೆ ಮಾತನಾಡಿದ ನಿಶಾ ನರಸಪ್ಪ ಪರ ವಕೀಲ ಗೋವರ್ಧನ್, ಕಂಪನಿ ಮುಚ್ಚಿಸಲು ಈ ರೀತಿಯ ಆರೋಪ ಮಾಡಲಾಗಿದ್ದು, ಯಶಸ್ವಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com