
ಬೆಂಗಳೂರು: ವಿಧಾನಮಂಡಲ ವಿಶೇಷ ಅಧಿವೇಶನ ಕರೆದು ಎಸ್‌ಸಿಗಳಿಗೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ ನಾರಾಯಣಸ್ವಾಮಿ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮತ್ತ ಬೊಟ್ಟು ಮಾಡುವ ಬದಲು ಒಳಮೀಸಲಾತಿ ಜಾರಿಗೊಳಿಸಿ, ಎಚ್.ಕಾಂತರಾಜು ಆಯೋಗದ ಶಿಫಾರಸ್ಸು ಅಂಗೀಕರಿಸಿ ಎಸ್ಸಿಗಳ ಕಲ್ಯಾಣಕ್ಕೆ ಸಿಎಂ ಬದ್ಧರಾಗಬೇಕು ಎಂದು ಹೇಳಿದರು.
ಒಳ ಮೀಸಲಾತಿಗೆ ಸಂಬಂಧಿಸಿದಂತೆ ನಾನು ರಾಜ್ಯಸಭೆಯಲ್ಲಿ ನೀಡಿದ್ದ ಉತ್ತರವನ್ನು ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲವರು ಟೀಕಿಸಿದ್ದಾರೆ. ಸಂವಿಧಾನದಲ್ಲಿ ಇರುವುದನ್ನು ನಾನು ತಿರುಚಿ ಹೇಳುವಂತಿಲ್ಲ. ಆ ಕೆಲಸವನ್ನು ಮಾಡುವುದೂ ಇಲ್ಲ ಎಂದು ತಿಳಿಸಿದರು.
ಸಂವಿಧಾನದ 341ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದರೆ ಮಾತ್ರ ಒಳ ಮೀಸಲಾತಿ ಸಂವಿಧಾನಬದ್ಧವಾಗುತ್ತದೆ. ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೆ ನಿರ್ಧರಿಸಿದ್ದ ಹಿಂದಿನ ಸರ್ಕಾರ, ಅದಕ್ಕೆ ಪೂರಕವಾಗಿ ಸಂವಿಧಾನ ತಿದ್ದುಪಡಿಗೆ ಕೋರಿಕೆ ಸಲ್ಲಿಸಿತ್ತು. ಆಂಧ್ರಪ್ರದೇಶ, ಪಂಜಾಬ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಇದೇ ಬೇಡಿಕೆ ಸಲ್ಲಿಸಿವೆ. ಕೇಂದ್ರ ಸರ್ಕಾರ ಸಂವಿಧಾನದ 241ನೇ ಪರಿಚ್ಛೇದದ ತಿದ್ದುಪಡಿಗೆ ಪ್ರಕ್ರಿಯೆ ಆರಂಭಿಸಿದೆ.
ಪರಿಶಿಷ್ಟ ಜಾತಿ ಜನ ಸಂಖ್ಯೆ ಇಲ್ಲದಿರುವ ರಾಜ್ಯಗಳು ಈ ಪ್ರಸ್ತಾವಕ್ಕೆ ನಕಾರಾತ್ಮಕ ಉತ್ತರ ನೀಡಿವೆ. ಏಳು ರಾಜ್ಯಗಳು ತಿದ್ದುಪಡಿಯನ್ನು ಬೆಂಬಲಿಸಿವೆ. ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿರುವ ಆಮ್ ಆದ್ಮಿ ಪಕ್ಷದ ಸರ್ಕಾರವಿರುವ ದೆಹಲಿ ಮತ್ತು ಪಂಜಾಬ್ ರಾಜ್ಯಗಳು ವಿರೋಧಿಸಿವೆ. ಕಾಂಗ್ರೆಸ್ ಆಡಳಿತವಿರುವ ಹಿಮಾಚಲಪ್ರದೇಶ ಮತ್ತು ತೃಣಮೂಲ ಕಾಂಗ್ರೆಸ್ ಸರ್ಕಾರವಿರುವ ಪಶ್ಚಿಮ ಬಂಗಾಳ ರಾಜ್ಯಗಳೂ ವಿರೋಧ ವ್ಯಕ್ತಪಡಿಸಿವೆ ಎಂದು ವಿವರಿಸಿದರು.
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸದುದ್ದೇಶದಿಂದ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ನಿರ್ಧಾರ ಮಾಡಿತ್ತು. ಅದಕ್ಕೆ ಪೂರಕವಾದ ಕ್ರಮಗಳನ್ನೂ ಕೈಗೊಂಡಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ಬದ್ಧತೆ ಪ್ರಶ್ನಿಸುತ್ತಿದ್ದಾರೆ. ಅದನ್ನು ಬಿಟ್ಟು ಒಳ ಮೀಸಲಾತಿ ಅನುಷ್ಠಾನ ಹಾಗೂ ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
Advertisement