ಬಿಜೆಪಿಯ ಗೋಹತ್ಯೆ ನಿಷೇಧ ಕಾಯ್ದೆಯನ್ನೂ ಸರ್ಕಾರ ಮರುಪರಿಶೀಲಿಸಲಿದೆ: ಸಚಿವ

ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇದ ಕಾಯ್ದೆಯನ್ನೂ ಕೂಡ ಮರುಪರಿಶೀಲಿಸಬಹುದು ಎಂದು ರಾಜ್ಯ ಸರ್ಕಾರ ಶನಿವಾರ ಹೇಳಿದೆ.
ಸಚಿವ ಕೆ.ವೆಂಕಟೇಶ್
ಸಚಿವ ಕೆ.ವೆಂಕಟೇಶ್
Updated on

ಮೈಸೂರು: ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇದ ಕಾಯ್ದೆಯನ್ನೂ ಕೂಡ ಮರುಪರಿಶೀಲಿಸಬಹುದು ಎಂದು ರಾಜ್ಯ ಸರ್ಕಾರ ಶನಿವಾರ ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರು, ಈಗ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಕೋಣ ಮತ್ತು ಎಮ್ಮೆಗಳ ವಧೆಗೆ ಅವಕಾಶವಿದೆ. ಆದರೆ, ಹಸುವನ್ನು ಕಡಿಯಲು ಅವಕಾಶ ಇಲ್ಲ, ಹಸುವನ್ನು ಯಾಕೆ ಕಡಿಯಬಾರದು? ಈ ಕಾಯ್ದೆಯಿಂದಾಗಿ ರೈತರಿಗೆ ಬಹಳ ತೊಂದರೆ ಆಗುತ್ತಿದೆ ಎಂದು ಹೇಳಿದರು.

ನನ್ನ ಮನೆಯಲ್ಲೂ ಮೂರ್ನಾಲ್ಕು ಹಸುಗಳಿವೆ. ಈ ಪೈಕಿ ಒಂದು ಹಸು ಸತ್ತಾಗ ಗುಂಡಿ ತೋಡಿ ಹೂಳಲು ತುಂಬಾ ಕಷ್ಟ ಪಡಬೇಕಾಯಿತು. 25 ಮಂದಿ ಬಂದರೂ ಸತ್ತ ಹಸುವಿನ ಮೃತದೇಹ ಎತ್ತಲು ಸಾಧ್ಯವಾಗಲಿಲ್ಲ. ಕೊನೆಗೆ ಜೆಸಿಬಿ ತರಿಸಿ ಮೃತ ಹಸುವನ್ನು ಎತ್ತಿಸಿ ಗುಂಡಿತೋಡಿ ಹೂಳಬೇಕಾಯಿತು. ಹೀಗಾಗಿ ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಇಲಾಖೆಯಲ್ಲಿ ಖಾಲಿ ಇರುವ ಶೇ.50ರಷ್ಟು ಹುದ್ದೆಗಳ ಕುರಿತು ಮಾತನಾಡಿದ ಅವರು, ನಮ್ಮ ಇಲಾಖೆಯಲ್ಲಿ ಸಾಕಷ್ಟು ಹಣವಿಲ್ಲ, ಹೀಗಾಗಿ ಶೇ.50ರಷ್ಟು ಹುದ್ದೆಗಳು ಖಾಲಿ ಇವೆ. ‘ರಾಜ್ಯದಲ್ಲಿರುವ 4,234 ಪಶು ಆಸ್ಪತ್ರೆಗಳ ಪೈಕಿ 1,600 ಪಶುವೈದ್ಯಕೀಯ ವೈದ್ಯರಿಲ್ಲ, ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಮೂಲಕ 400 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮೋದನೆ ನೀಡಿದೆ’ ಎಂದರು.

ಅಮುಲ್ ವಿಚಾರ ಕುರಿತು ಮಾತನಾಡಿ, ರಾಜ್ಯಕ್ಕೆ ಅಮುಲ್ ಬಂದಿಲ್ಲ. ಅಮುಲ್ ನಿಂದ ನಂದಿನಿಗೆ ತೊಂದರೆ ಆಗಿಲ್ಲ. ಮುಂದಿನ ದಿನಗಳಲ್ಲಿ ಅಮುಲ್ ಬಂದಾಗ ನೋಡೋಣ. ನಂದಿನಿ ಉತ್ಪನ್ನಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳುತ್ತೇವೆ. ಹಸು ದತ್ತು ಯೋಜನೆ ಏನಾಗಿದೆ ಎಂದು ಪರಿಶೀಲಿಸುತ್ತೇವೆ. ಗೋ ಶಾಲೆಗಳ ನಿರ್ವಹಣೆ ಮಾಡಲು ಹಣದ ಕೊರತೆಯಿಲ್ಲ. ಆದರೆ, ನಿರ್ವಹಣೆ ಸರಿಯಾಗಿ ಆಗಿಲ್ಲ. ಮುಂದೆ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.

‘ರೇಷ್ಮೆ ಬೆಲೆ ಭಾರಿ ಕುಸಿತವಾಗಿರುವ ವಿಷಯವನ್ನು ರೈತರು ನನ್ನ ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ವಿಭಾಗದ ಮೂಲಕ ರೇಷ್ಮೆ ಖರೀದಿಗೆ ಆದೇಶ ನೀಡಲಾಗಿದ್ದು, ಈಗಾಗಲೇ ಖರೀದಿ ಆರಂಭವಾಗಿದೆ. ಸರ್ಕಾರ ಖರೀದಿ ಆರಂಭಿಸಿದ ನಂತರ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com