ಶೇ.90ರಷ್ಟು ಗೃಹಬಳಕೆದಾರರಿಗೆ 'ಗೃಹ ಜ್ಯೋತಿ' ಯೋಜನೆ ಪ್ರಯೋಜನ ನೀಡಲಿದೆ: ಇಂಧನ ಸಚಿವ ಕೆ.ಜೆ.ಜಾರ್ಜ್ (ಸಂದರ್ಶನ)

ರಾಜ್ಯ ನೂತನ ಕಾಂಗ್ರೆಸ್ ಸರ್ಕಾರ 200 ಯೂನಿಟ್ ಗಳ ವರೆಗೆ ಉಚಿತ ವಿದ್ಯುತ್ ನೀಡುತ್ತಿರುವ 'ಗೃಹ ಜ್ಯೋತಿ' ಯೋಜನೆಯು ರಾಜ್ಯದ ಶೇ.90ರಷ್ಟು ಗೃಹಬಳಕೆದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಅವರು ಹೇಳಿದ್ದಾರೆ.
ಇಂಧನ ಸಚಿವ ಕೆಜೆ ಜಾರ್ಜ್
ಇಂಧನ ಸಚಿವ ಕೆಜೆ ಜಾರ್ಜ್

ಬೆಂಗಳೂರು: ರಾಜ್ಯ ನೂತನ ಕಾಂಗ್ರೆಸ್ ಸರ್ಕಾರ 200 ಯೂನಿಟ್ ಗಳ ವರೆಗೆ ಉಚಿತ ವಿದ್ಯುತ್ ನೀಡುತ್ತಿರುವ 'ಗೃಹ ಜ್ಯೋತಿ' ಯೋಜನೆಯು ರಾಜ್ಯದ ಶೇ.90ರಷ್ಟು ಗೃಹಬಳಕೆದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಸಚಿವರು, 'ಗೃಹ ಜ್ಯೋತಿ' ಯೋಜನೆ ಸೇರಿದಂತೆ 5 ಗ್ಯಾರಂಟಿ ಯೋಜನೆಗಳು ಕುರಿತು ಮಾತನಾಡಿದರು. 5 ಗ್ಯಾರಂಟಿ ಯೋಜನೆಗಳು ಫಲಾನುಭವಿಗಳನ್ನು ಸಬಲೀಕರಣಗೊಳಿಸುವುದಲ್ಲದೆ, ಆರ್ಥಿಕತೆಯ ಬೆಳವಣಿಗೆಗೆ ಕೊಡುಗೆ ನೀಡುತ್ತವೆ ಎಂದು ಹೇಳಿದರು.

ಗೃಹ ಜ್ಯೋತಿ ಯೋಜನೆಯ ಜಾರಿಯಿಂದ ಯಾವ ರೀತಿಯ ಸವಾಲುಗಳು ಎದುರಾಗಲಿದೆ?
ಯಾವುದೇ ಸವಾಲುಗಳೂ ಎದುರಾಗುವುದಿಲ್ಲ. ಸರಕುಗಳ ಬೆಲೆ ಏರಿಕೆಯು ಜನರ ಮೇಲೆ ಪರಿಣಾಮ ಬೀರುತ್ತಿದೆ. ಆದಾಗ್ಯೂ, ಹಣದುಬ್ಬರಕ್ಕೆ ಅನುಗುಣವಾಗಿ ಅವರ ವೇತನ ಹೆಚ್ಚಿಸದ ಕಾರಣ ಕಡಿಮೆ ಮತ್ತು ಮಧ್ಯಮ-ಆದಾಯದ ಜನರ ಹೆಚ್ಚು ಪರಿಣಾಮ ಬೀರುವಂತಾಗಿದೆ. ಭಾರತದಲ್ಲಿ ಯುವಕರನ್ನು ಉನ್ನತೀಕರಿಸುವ ಅಗತ್ಯವಿದೆ. ಅದಕ್ಕಾಗಿಯೇ 5 ಗ್ಯಾರಂಟಿ ಯೋಜನೆಗಳ ಜಾರಿಗೆ ತರಲಾಗುತ್ತಿದೆ. ಈ ಯೋಜನೆಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಹಣದ ಚಲಾವಣೆಯನ್ನು ಖಚಿತಪಡಿಸುತ್ತದೆ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಚುನಾವಣೆ ವೇಳೆ ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ 200 ಯೂನಿಟ್ ವಿದ್ಯುತ್ ನೀಡಲಾಗುವುದು ಎಂದು ಹೇಳಲಾಯಿತು?
ಬಹುತೇಕ ಜನರು ಬಳಕೆ ಮಾಡುತ್ತಿರುವ ವಿದ್ಯುತ್'ಗೆ ನಾವು ಪಾವತಿ ಮಾಡುತ್ತೇವೆಂದು ಹೇಳಿದ್ದೆವು. ನಮಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ ರಾಜ್ಯದ ಎಲ್ಲಾ ಮನೆಗಳಲ್ಲಿ 53 ಯೂನಿಟ್‌ಗಳು ಸರಾಸರಿ ಬಳಕೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. 2.16 ಕೋಟಿ ಜನಸಂಖ್ಯೆಯಲ್ಲಿ ಸುಮಾರು ಶೇ.90 ಜನರು ಸರಾಸರಿ 53 ಯೂನಿಟ್‌ಗಳನ್ನು ಬಳಸುತ್ತಾರೆ. ಅವರಿಗೆ ಯೋಜನೆಯ ಲಾಭ ಸಿಗಲಿದೆ. ಉಳಿದ 20 ಲಕ್ಷ ಜನರು ಆರ್ಥಿಕವಾಗಿ ಶ್ರೀಮಂತ ಹಿನ್ನೆಲೆಯುಳ್ಳವರಾಗಿದ್ದಾರೆ. ಅಂತಹವರ ಕೈ ಹಿಡಿಯುವ ಅಗತ್ಯವಿಲ್ಲ. ಹೀಗಾಗಿ 200 ಯೂನಿಟ್‌ಗಳವರೆಗೆ ಎಲ್ಲಾ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಹೇಳಲಾಯಿತು.

ಯೋಜನೆ ಜಾರಿಗೆ ಸಂಬಂಧಿಸಿದಂತೆ ಸವಾಲುಗಳಿವೆಯೇ? ಈಗೇಕೆ ಷರತ್ತುಗಳ ವಿಧಿಸಲಾಗುತ್ತಿದೆ?
ಇಲ್ಲಿಯವರೆಗೆ, ಯಾವುದೇ ಸವಾಲುಗಳು ಎದುರಾಗಿಲ್ಲ, ಆದರೆ, ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದೆ. ಯೋಜನೆಯಿಂದ ಸುಮಾರು 13,000-14,000 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸುವ ನಿರೀಕ್ಷೆಯಿದೆ. ರಾಜ್ಯವು ಹೊರೆಯನ್ನು ಭರಿಸಲಿದೆ. ಎಲ್ಲರಿಗೂ ಪ್ರಯೋಜನವಾಗಬೇಕೆಂಬ ಉದ್ದೇಶದಿಂದ ಹಲವು ಷರತ್ತುಗಳನ್ನು ವಿಧಿಸಿಲ್ಲ. ನೋಂದಣಿಗೆ ಗ್ರಾಹಕರ ಆರ್‌ಆರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆ ಮಾತ್ರ ಅಗತ್ಯವಿದೆ. ನಾಗರೀಕರಿರುವ ವಾಸಸ್ಥ ತಿಳಿಯಲು ವೋಟರ್ ಐಡಿ ಹಾಗೂ ಪಾಸ್ ಪೋರ್ಟ್ ಗಳನ್ನು ಆಧಾರವಾಗಿ ನೀಡುವಂತೆ ಸೂಚಿಸಲಾಗಿದೆ. ಇದಲ್ಲದೆ, ಹೊಸ ಮನೆ ಮಾಲೀಕರು ಮತ್ತು ಬಾಡಿಗೆದಾರರಿಗೆ ಮಾರ್ಗಸೂಚಿಗಳ ಸಿದ್ಧಪಡಿಸಲಾಗುತ್ತಿದ್ದು, ಅದನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಮ್ಸ್) ಖಾಸಗೀಕರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಈಗಾಗಲೇ, ಎಸ್ಕಾಮ್‌ಗಳು ಸರ್ಕಾರಿ ಇಲಾಖೆಗಿಂತ ಹೆಚ್ಚಾಗಿ ಕಾರ್ಪೊರೇಟ್ ಘಟಕಗಳಾಗಿ ಕಾರ್ಯನಿರ್ವಹಿಸುತ್ತಿವೆ. ಸಾಂಸ್ಥಿಕ ವಿಧಾನದ ಕುರಿತು ಪರಿಶೀಲಿಸಬೇಕಿದೆ. ಎಲ್ಲವನ್ನೂ ಖಾಸಗೀಕರಣಗೊಳಿಸಲು ಸಾಧ್ಯವಿಲ್ಲ. ಸಾರ್ವಜನಿಕ ವಲಯದಲ್ಲಿ ಸ್ವಲ್ಪ ನಿಯಂತ್ರಣ ಇರಬೇಕು.

ಗ್ಯಾರಂಟಿ ಯೋಜನೆಗಳು ಬಡ ವರ್ಗಗಳನ್ನು ಕೈ ಹಿಡಿಯುವ ಮೂಲಕ ಸಬಲೀಕರಣಗೊಳಿಸುವ ಬಗ್ಗೆ ಮಾತನಾಡುತ್ತವೆ. ಆದಾಗ್ಯೂ, ಇತರರಿಗೆ ಶುಲ್ಕವನ್ನು ದ್ವಿಗುಣಗೊಳಿಸಲಾಗಿದೆ. ಇದರರ್ಥ ಇತರರು ಈ ಯೋಜನೆಗಳಿಗೆ ಹೆಚ್ಚು ಪಾವತಿಸಬೇಕೆಂದು ಒತ್ತಾಯಿಸಲಾಗುತ್ತಿದೆಯೇ? ಶ್ರೀಮಂತರು ಬಡವರಾಗಲು ಇದು ಕೊಡುಗೆ ನೀಡುವುದಿಲ್ಲವೇ?
ಯಾರ ಮೇಲೂ ಒತ್ತಡ ಹೇರಬೇಕೆಂಬುದನ್ನು ನಾವು ಬಯಸುವುದಿಲ್ಲ. ನಾನೂ ಕೂಡ ಆದಾಯ ತೆರಿಗೆ ಪಾವತಿದಾರನಾಗಿದ್ದೇನೆ. ಬೆಲೆ ಹೆಚ್ಚಾಗಿದೆ, ನನ್ನ ಖರ್ಚೂ ಹೆಚ್ಚಾದಂತೆಯೇ. ನನ್ನ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಸಂಖ್ಯೆಯ ಗ್ರಾಹಕರ ಸರಾಸರಿ ವಿದ್ಯುತ್ ಬಳಕೆಯನ್ನು ಆಧರಿಸಿ ಯೋಜನೆಯನ್ನು ಲೆಕ್ಕಹಾಕಲಾಗಿದೆ. ಅವರಿಗೆ ಸಹಾಯ ಮಾಡಿದ್ದೇ ಆದರೆ, ಸ್ವಲ್ಪ ಪ್ರಮಾಣದ ಹಣವನ್ನು ಉಳಿಸಲು ಸಮರ್ಥರಾಗುತ್ತಾರೆ. ನೋಟು ನಿಷೇಧ ಹಾಗೂ ಕೋವಿಡ್ ಸಾಂಕ್ರಾಮಿಕ ರೋಗ ಸೇರಿದಂತೆ ಹಲವಾರು ಅಂಶಗಳಿಂದ ಜನರು ಹೋರಾಡುತ್ತಿದ್ದಾರೆ. ಇಂತಹವರು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇಂತಹವರ ಆರ್ಥಿಕ ಯೋಗಕ್ಷೇಮವನ್ನು ಖಾತರಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಗ್ಯಾರಂಟಿ ಯೋಜನೆಗಳ ಪಡೆಯುವ ಜನರು ಸ್ವಾಭಿಮಾನವನ್ನು ಹೊಂದಿದ್ದಾರೆ. ಯೋಜನೆಗಳ ಪ್ರಯೋಜನಗಳನ್ನು ಪಡೆಯುವವರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಸರ್ಕಾರ ಸಣ್ಣ ಸಹಾಯ ಮಾಡಿದರೂ, ಅದು ಎಲ್ಲಿಗೋ ತಲುಪುತ್ತದೆ.

ಕರ್ನಾಟಕದಲ್ಲಿ ವಿದ್ಯುತ್ ಮೂಲಸೌಕರ್ಯವು ಉತ್ತಮವಾಗಿಲ್ಲ. ಇದನ್ನು ಸುಧಾರಿಸಲು ಯಾವುದಾದರೂ ಯೋಜನೆ ಇದೆಯೇ?
ವಿದ್ಯುತ್ ಮೂಲಸೌಕರ್ಯವನ್ನು ಸುಧಾರಿಸಲು ಈಗಾಗಲೇ ಯೋಜನೆ ಇದೆ. ಆದರೆ, ನಾನು ನೂತನ ಸಚಿವ. ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಸೇರಿದಂತೆ ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಬೇಕಾಗಿದೆ. ಆರು ತಿಂಗಳ ಬಳಿಕ ಈ ನಿಟ್ಟಿನಲ್ಲಿ ಸ್ಪಷ್ಟ ಚಿತ್ರಣಗಳು ಸಿಗಲಿವೆ.

ಐದು ಉಚಿತ ಗ್ಯಾರಂಟಿಗಳನ್ನು ಪ್ರಾರಂಭಿಸುವ ಮೊದಲು ನೀವು ಅರ್ಥಶಾಸ್ತ್ರಜ್ಞರನ್ನು ಸಂಪರ್ಕಿಸಿದ್ದೀರಾ? ಅಥವಾ ಇದು ಕೇವಲ ಚುನಾವಣಾ ತಂತ್ರವೇ?
ಕಾಂಗ್ರೆಸ್ ಮೊದಲ ಬಾರಿಗೆ ಈ ತಂತ್ರವನ್ನು ನಿರ್ಧರಿಸಿದೆ.

ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆಗಳ ಜಾರಿಗೆ ತರಲಾಗಿದೆ. ಆದರೆ, ಇದಕ್ಕೆ ಇಷ್ಟೊಂದು ಷರತ್ತುಗಳೇಕೆ?
ಹೆಚ್ಚಿನ ಷರತ್ತುಗಳೇನೂ ಇಲ್ಲ. ಒಂದೇ ಷರತ್ತು ಎಂದರೆ ಸರಾಸರಿ ವಿದ್ಯುತ್ ಬಳಕೆಯು 200 ಯೂನಿಟ್‌ಗಳಿಗಿಂತ ಕಡಿಮೆಯಿರಬೇಕೆಂಬುದು. ಇದಕ್ಕಾಗಿ 12 ತಿಂಗಳವರೆಗೆ ಸರಾಸರಿ ಬಳಕೆಯ ವಿದ್ಯುತ್'ನ್ನು ನೋಡಲಾಗುತ್ತದೆ.

ಇತರೆ ರಾಜ್ಯಗಳಲ್ಲೂ ಗೇಮ್ ಚೇಂಜರ್ ಉಚಿತ ವಿದ್ಯುತ್'ನ್ನು ಬಳಕೆ ಮಾಡುತ್ತೀರಾ?
ಮೊದಲ ಬಾರಿಗೆ ಘೋಷಣೆಯಾಗಿರುವುದಲ್ಲ. ಉಚಿತ ಯೋಜನೆಗಳ ಘೋಷಣೆಯಾದ ಎರಡನೇ ರಾಜ್ಯ ಕರ್ನಾಟಕವಾಗಿದೆ. ಈ ಹಿಂದೆ ಅನ್ನ ಭಾಗ್ಯವನ್ನು ಆರಂಭಿಸಿದ್ದೆವು. ಯೋಜನೆ ಘೋಷಣೆ ಮಾಡಲಾಗಿದ್ದು, ಕಾದು ನೋಡಬೇಕಿದೆ ಹಾಗೂ ನಿರ್ವಹಿಸಬೇಕಿದೆ. ಪ್ರತಿಯೊಂದು ರಾಜ್ಯದಲ್ಲೂ ವಿಭಿನ್ನ ಸಮಸ್ಯೆಗಳಿವೆ.

ಯೋಜನೆಯು ನಿಮ್ಮ ಗುರಿಗಳಿಂದ ನಿಮ್ಮನ್ನು ದೂರವಿಡುತ್ತದೆಯೇ?
ರಾಜ್ಯದಲ್ಲಿ ನವೀಕರಿಸಬಹುದಾದ ಮೂಲಗಳನ್ನು ಉತ್ತೇಜಿಸಲಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ನವೀಕರಿಸಬಹುದಾದ ಇಂಧನವನ್ನು ಬಳಸುತ್ತಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ. ವಿದ್ಯುತ್‌ಗಾಗಿ ನಾವು ಶೇ.60 ನವೀಕರಿಸಲಾಗದ ಮತ್ತು ಶೇ.40 ನವೀಕರಿಸಬಹುದಾದ ಇಂಧನ ಕಡೆಗೆ ಸಾಗುತ್ತಿದ್ದೇವೆ. ಜಾಗತಿಕ ತಾಪಮಾನವನ್ನು ಗಮನಿಸಿದರೆ, ನಾವು ಹೆಚ್ಚು ನವೀಕರಿಸಬಹುದಾದ ಶಕ್ತಿಯನ್ನು ಉತ್ತೇಜಿಸಲು ಬಯಸುತ್ತೇವೆ. ಜನರು ಕೂಡ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ಈ ಅವಕಾಶಗಳನ್ನು ಬಳಸಿಕೊಳ್ಳುತ್ತೇವೆ. ಯೋಜನೆಗಳ ಅನುಷ್ಠಾನವು ಬೇರೆ ಇತರೆ ಕಾರ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ. ನಮಗೆ ಕೆಲವು ನವೀಕರಿಸಬಹುದಾದ ಇಂಧನ ಮೂಲಗಳೂ ಬೇಕು. ವಿದ್ಯುತ್ ಅನ್ನು ಸಂಗ್ರಹಿಸಬಹುದು ಎಂಬುದನ್ನು ತಿಳಿದುಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಜಲಾಶಯಗಳಲ್ಲಿ ಕಾರ್ಯಗಳು ನಡೆಯುತ್ತಿವೆ.

ರೈತರು ಎದುರಿಸುತ್ತಿರುವ ಟ್ರಾನ್ಸ್‌ಫಾರ್ಮರ್‌ಗಳ ಕೊರತೆ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತೀರಿ?
ಸದ್ಯಕ್ಕೆ ಟ್ರಾನ್ಸ್‌ಫಾರ್ಮರ್‌ಗಳ ಕೊರತೆ ಇಲ್ಲ. ದಾಸ್ತಾನುಗಳಿರುವ ಮಾಹಿತಿಗಳಿವೆ. ಆದರೆ, ಅದನ್ನು ಜನರಿಗೆ ತಲುಪಿಸಲು ಹೆಚ್ಚಿನ ಪ್ರಯತ್ನ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ನಿಮ್ಮ ಇಲಾಖೆಯಲ್ಲಿ ತನಿಖೆ ನಡೆಸುವ ಹಿಂದಿನ ಸರ್ಕಾರದ ಯಾವುದಾದರೂ ಹಗರಣಗಳಿವೆಯೇ?
ಹಿಂದಿನ ಸರ್ಕಾರದಿಂದಾಗಲಿ ಅಥವಾ ಈ ಸರ್ಕಾರದಿಂದಾಗಲಿ ಯಾವುದೇ ಹಗರಣಗಳು ಕಂಡು ಬಂದರೂ ನಾವು ತನಿಖೆ ನಡೆಸುತ್ತೇವೆ. ಇಲಾಖೆಯಲ್ಲಿ ಕೆಲಸ ಮಾಡುವವರ ಮೇಲೆ ಅವಲಂಬಿತರಾಗಿರಬೇಕಾಗುತ್ತದೆ. ಆದರೆ, ಹಗರಣಗಳು ಕಂಡು ಬಂದಾಗ ತನಿಖೆ ನಡೆಸುತ್ತೇವೆ.

ಏಷ್ಯಾದಲ್ಲೇ ಮೊಟ್ಟಮೊದಲ ಭೂಗತ ಟ್ರಾನ್ಸ್‌ಫಾರ್ಮರ್ ಬೆಂಗಳೂರಿನಲ್ಲಿದೆ. ರಾಜ್ಯದಲ್ಲಿ ಭೂಗತ ಕೇಬಲ್‌ಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳನ್ನು ಹಾಕಲು ಮಾರ್ಗಸೂಚಿ ಇದೆಯೇ?
ಈ ನಿಟ್ಟಿನಲ್ಲಿ ಕೆಲಸಗಳು ಪ್ರಾರಂಭವಾಗಿದೆ. ಈಗಾಗಲೇ ಭೂಗತ ಕೇಬಲ್ಗಳನ್ನು ಹಾಕಲಾಗುತ್ತಿದೆ. ಕೇಬಲ್‌ಗಳನ್ನು ಹಾಕುವಾಗ ಕಾರ್ಮಿಕರು ಭೂಗತ ಚರಂಡಿಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮಗಿರುವ ಸಮಸ್ಯೆಯೆಂದರೆ ಇದೇ...

ರಾಜ್ಯದಲ್ಲಿ ಎರಡು ಏಜೆನ್ಸಿಗಳು ಒಟ್ಟಿಗೆ ಕೆಲಸ ಮಾಡದ ಕಾರಣ ಇದು ಸಮಸ್ಯೆ ಅಲ್ಲವೇ?
ಬಹಳ ಕಷ್ಟಕರವಾದದ್ದು. ನಾನು ನಗರಾಭಿವೃದ್ಧಿ ಸಚಿವನಾಗಿದ್ದ ಅವಧಿಯಲ್ಲಿ ಇದೇ ಸಮಸ್ಯೆ ಎದುರಿಸಿದ್ದೆ. ಬೆಂಗಳೂರಿಗೆ ನಮ್ಮ ಹಂಚಿಕೆಯನ್ನು ನಿರಂತರವಾಗಿ ಕಡಿತಗೊಳಿಸಲಾಯಿತು. ಇದಲ್ಲದೆ, ಇತರ ಸಮಸ್ಯೆಗಳಿವೆ. ಈ ಸಮಸ್ಯೆಗಳು ಸಾಮಾನ್ಯವಾಗಿವೆ.

ಈ ಹಿಂದೆ ಕಾಂಗ್ರೆಸ್ ಪಕ್ಷವೇ ಉದಾರೀಕರಣಕ್ಕೆ ಮುಂದಾಗಿತ್ತು.. ಸರ್ಕಾರವನ್ನು ವ್ಯವಹಾರದಿಂದ ಹಿಂದೆ ಸರಿಯುವಂತೆ ಮಾಡಿತು, ಉದ್ದಿಮೆಗಳ ಪರವಾನಗಿ ರಾಜ್ ಅನ್ನು ತೆಗೆದುಹಾಕಿತು ಮತ್ತು ಬೆಳವಣಿಗೆಯ ಮೂಲಕ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಒಟ್ಟಾರೆ ಮ್ಯಾಟ್ರಿಕ್ಸ್, ಆರ್ಥಿಕ ರಚನೆ ಹೀಗಿರಬೇಕಾದರೆ, ಈಗ, ಬಿಟ್ಟಿ ಸಂಸ್ಕೃತಿಯನ್ನು ಕಲ್ಯಾಣ ಮತ್ತು ಸಬಲೀಕರಣ ರಾಜಕೀಯ ಎಂದು ಕರೆಯಲಾಗುತ್ತದೆ. ಇಂದಿರಾ ಗಾಂಧಿಯವರ 20 ಅಂಶಗಳ ಗ್ಯಾರಂಟಿ, ಉದಾರೀಕರಣವನ್ನು ಕೈಬಿಟ್ಟು.. ಕಾಂಗ್ರೆಸ್ 70ರ ದಶಕಕ್ಕೆ ಮರಳುತ್ತಿದೆಯೇ?

ತೆರಿಗೆ ಕಟ್ಟುವವರು ಮಾತ್ರ ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ಜನರು ಭಾವಿಸುತ್ತಿದ್ದಾರೆ. ಆದರೆ, ಹಣ ನೀಡಿ ಯಾವುದೇ ವಸ್ತು ಖರೀದಿ ಮಾಡುತ್ತಿರುವ ವ್ಯಕ್ತಿ ಕೂಡ ತೆರಿಗೆದಾರನೇ ಆಗಿದ್ದಾನೆ. ಆದರೆ, ಶೇ.10ರಷ್ಟು ಜನರನ್ನು ಮಾತ್ರ ನಾವು ಪ್ರೋತ್ಸಾಹಿಸುತ್ತೇವೆ. ಎಲ್ಲರನ್ನೂ ಒಟ್ಟಿಗೆ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿದೆ. ಸರ್ಕಾರ ಎಲ್ಲರ ಬಗ್ಗೆಯೂ ಚಿಂತಿಸಬೇಕಿದೆ. ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಬಳಸುವಂತೆ ಮಾಡಲಾಗಿದೆ. ನಾವು ಜನರನ್ನು ಸಬಲೀಕರಣಗೊಳಿಸಬೇಕು. ಅವರಿಂದ ಹಣ ಬರುತ್ತಿದೆ. ಅವರ ಮನೆಯಲ್ಲಿ ಯಾರೂ ಸೋಮಾರಿಯಾಗಿ ಕುಳಿತಿಲ್ಲ. ಪ್ರತಿಯೊಬ್ಬರೂ ಕೆಲಸ ಮಾಡಲು ಬಯಸುತ್ತಿದ್ದಾರೆ. ಒಂದೊಮ್ಮೆ ನಾನು ಅಲ್ಜೀರಿಯಾಕ್ಕೆ ಹೋಗಿದ್ದೆ. ಅಲ್ಲಿನ ಜನರು ಕೆಲಸ ಮಾಡಲು ಬಯಸುವುದಿಲ್ಲ. ನಾವು ನಮ್ಮ ಜನರನ್ನು ಸಬಲೀಕರಣಗೊಳಿಸಬೇಕಿದೆ.

ಸರ್ಕಾರವು ಹಾಲಿನ ದರ ಮತ್ತು ಬಸ್ ದರ ಹೆಚ್ಚಾಗಬಹುದು ಎಂಬ ಆತಂಕವಿದೆ. ಇಂಧನ ಸಂಪನ್ಮೂಲದಲ್ಲೂ ಬೆಲೆ ಏರಿಕೆಯಾಗಲಿದೆಯೇ?
ಇಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಆದೇಶವಿದೆ, ಅಲ್ಲಿ ಅವರು ಆಮದು ಮಾಡಿದ ಕಲ್ಲಿದ್ದಲನ್ನು ಸ್ಥಳೀಯ ಕಲ್ಲಿದ್ದಲಿನೊಂದಿಗೆ ಮಿಶ್ರಣ ಮಾಡುವಂತೆ ಸೂಚಿಸಿದ್ದಾರೆ. ಅಂತಹ ಆದೇಶಗಳನ್ನು ಜಾರಿಗೊಳಿಸಿದಾಗ, ಅಂತಿಮವಾಗಿ ಗ್ರಾಹಕರು ಅದನ್ನು ಪಾವತಿಸಬೇಕಾಗುತ್ತದೆ. ಕಾಂಗ್ರೆಸ್ ಇಂಧನ ಬೆಲೆಗಳನ್ನು ಏರಿಸಿದೆ ಎಂದು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ, ಆದರೆ, ಅವರ ಸರ್ಕಾರದ ಅವಧಿಯಲ್ಲಿಯೂ ಬೆಲೆ ಏರಿಕೆಯಾಗಿದೆ. ಅದನ್ನು ಜಾರಿಗೆ ತರಲು ಬಿಜೆಪಿ ತಲೆಕೆಡಿಸಿಕೊಂಡಿಲ್ಲ, ಹೀಗಾಗಿ ನಮ್ಮ ಅಧಿಕಾರಾವಧಿಯಲ್ಲಿಯೇ ಇದನ್ನು ಜಾರಿಗೊಳಿಸಬೇಕಿದೆ. ಜನರು ಉಚಿತ ವಿದ್ಯುತ್ ಬಳಸುತ್ತಾರೆ ಮತ್ತು ಆ ಹೊರೆಯನ್ನು ರಾಜ್ಯ ಸರ್ಕಾರ ಭರಿಸಲಿದೆ. ನಾವು ಕೇಳಿದ್ದು ಇಷ್ಟೇ, ಹಿಂದಿನ ಬಾಕಿ ಬಿಲ್ ಗಳನ್ನು ಪಾವತಿ ಮಾಡುವಂತೆ. ಜನರನ್ನು ದಂಡಿಸಲು ಬಯಸುವುದಿಲ್ಲ.

1990 ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಿರಿ. ನಮ್ಮ ನಗರಗಳಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ನೀವು ಯಾವ ವ್ಯತ್ಯಾಸವನ್ನು ನೋಡುತ್ತೀರಿ?
ಆಗ ಬೆಂಗಳೂರಿನ ಜನಸಂಖ್ಯೆ 20 ಲಕ್ಷ ಇಚ್ಚುಯ ನಗರವನ್ನು ಪಿಂಚಣಿದಾರರ ಸ್ವರ್ಗ ಎಂದು ಕರೆಯಲಾಗುತ್ತಿತ್ತು. ರಾಜ್ಯ ಬಜೆಟ್ ಗಾತ್ರ 3,000 ಕೋಟಿ ರೂ.ಗಳಾಗಿರುವುದರಿಂದ ನಮಗೂ ಆರ್ಥಿಕ ಮಿತಿಗಳಿದ್ದವು. ಈಗ ಬೆಂಗಳೂರು ಸುಮಾರು 1.5 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೊಡ್ಡ ನಗರವಾಗಿ ಬೆಳೆದಿದೆ. ಬೆಂಗಳೂರು ನಗರವು ನಾಡಪ್ರಭು ಕೆಂಪೇಗೌಡರು ಗುರುತಿಸಿದ ಗಡಿಗಳನ್ನು ದಾಟಿದೆ. ಯೋಜಿತ ನಗರವಾಗದೇ ಇರುವುದು ದುರಾಷ್ಟಕರವಾದದ್ದು. ಇದಕ್ಕೆ ನಾವು ಬೆಲೆ ಕಟ್ಟುತ್ತಿದ್ದೇವೆ. ಅದರಲ್ಲಿ ಟ್ರಾಫಿಕ್ ಸಮಸ್ಯೆ ಕೂಡ ಒಂದಾಗಿದೆ. ಸಮಸ್ಯೆಗಳ ಬಗೆಹರಿಸಲು ನಾವು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನಮ್ಮ ಮೆಟ್ರೋ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ.

ಯೋಜನೆಯು 2006 ರಲ್ಲಿ ಪ್ರಾರಂಭವಾದರೂ, 2013 ರ ವೇಳೆಗೆ ಕಾರ್ಯಾಚರಣೆಯ ಜಾಲವು ಕೇವಲ 6 ಕಿ.ಮೀ ತಲುಪಿತ್ತು. ನಾವು ಯೋಜನೆಯ ವೇಗವನ್ನು ಹೆಚ್ಚಿಸಿದ್ದೇವೆ. ಇದೀಗ ಉತ್ತಮ ಪರಿಸ್ಥಿತಿಯಲ್ಲಿದ್ದೇವೆ. ಆದರೂ, ನಗರ ಬೆಳೆದಂತೆ ಮೆಟ್ರೋ ನಿರ್ಮಾಣ ಮಾಡುವುದು ನಿರಂತರ ಪ್ರಕ್ರಿಯೆಯಾಗಿದೆ. ಆದರೆ, ಕೊನೆಯ ಮೈಲಿ ಸಂಪರ್ಕ ಸಮಸ್ಯೆಯನ್ನೂ ಪರಿಹರಿಸಬೇಕಾಗಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದು, ಅಭಿವೃದ್ಧಿಯನ್ನು ತ್ವರಿತಗತಿಯಲ್ಲಿ ಇರಿಸಲಾಗುವುದು ಎಂದು ಆಶಿಸಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com