ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂಬ ಟೀಕೆಗಳು ವ್ಯಕ್ತವಾಗಿವೆ. ಇಂತಹ ಟೀಕೆಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
ನಮ್ಮ ಐದೂ ಗ್ಯಾರೆಂಟಿಗಳ ಜಾರಿಗೆ 59,000 ಕೋಟಿ ರೂ.ಗಳ ಅಗತ್ಯವಿದೆ. ಎಷ್ಟು ಹಣ ಖರ್ಚು ಮಾಡುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ, ಯಾರಿಗೆ ನೀಡುತ್ತಿದ್ದೇವೆ ಎನ್ನುವುದು ಮುಖ್ಯ ಎಂದು ಹೇಳುವ ಮೂಲಕ ಸರ್ಕಾರದ ನಡೆಯುನ್ನು ಸಮರ್ಥಿಸಿಕೊಂಡಿದ್ದಾರೆ.
10 ಕೆಜಿ ಆಹಾರಧಾನ್ಯವನ್ನು ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ನೀಡುವ ಭರವಸೆ ನೀಡಿದ್ದೇವೆ. ಇದಕ್ಕೆ 10,100 ಕೋಟಿ ರೂ.ಗಳ ಅಗತ್ಯವಿದೆ. ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಲೇಬೇಕು. ಹಸಿವಿನ ಕಷ್ಟ ಊಟವಿಲ್ಲದವರಿಗೆ ತಿಳಿಯುತ್ತದೆ. ಹೊಟ್ಟೆ ತುಂಬಿ ಅಜೀರ್ಣ ಮಾಡಿಕೊಂಡವರಿಗೆ ತಿಳಿದಿರುವುದಿಲ್ಲ ಎಂದಿದ್ದಾರೆ.
ಅನೇಕ ಮುಂದುವರೆದ ದೇಶಗಳಲ್ಲಿ ಮಹಿಳೆಯರ ಪಾಳ್ಗೊಳ್ಳುವಿಕೆ ಪ್ರಮಾಣ ಭಾರತಕ್ಕಿಂತ ಸಾಕಷ್ಟು ಹೆಚ್ಚಿದೆ, ಅಮೆರಿಕಾದಲ್ಲಿ ಶೇ 53% ರಷ್ಟು, ಚೈನಾ ದಲ್ಲಿ ಶೇ 54 ರಷ್ಟು, ಆಸ್ಟ್ರೇಲಿಯಾದಲ್ಲಿ ಶೇ 57, ಇಂಡೋನೇಶಿಯಾದಲ್ಲಿ ಶೇ 57 ರಷ್ಟು, ಬಾಂಗ್ಲಾದೇಶದಲ್ಲಿ ಶೇ 30 ರಷ್ಟು ಮಹಿಳೆಯರು ಸಾರ್ವಜನಿಕ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಭಾರತದಲ್ಲಿ ಕೇವಲ 24 ರಷ್ಟು ಮಹಿಳೆಯರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ಯಾವ ದೇಶಗಳಲ್ಲಿ ಹೆಚ್ಚು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಆ ದೇಶ ಅಭಿವೃದ್ಧಿಯಾಗುತ್ತದೆ. ಮಹಿಳೆಯರಿಗೆ ಶಕ್ತಿ ತುಂಬಿದಾಗ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳನ್ನು ಕ್ರಮೇಣ ಅಳಿಸಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಗೃಹ ಜ್ಯೋತಿ ಯೋಜನೆ ಜುಲೈ 1 ರಿಂದ ಜಾರಿಗೆ ಬರುತ್ತಿದೆ. ಎಲ್ಲಾ ಜಾತಿ ಮತ್ತು ಧರ್ಮದ ಬಡವರಿಗೆ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ನಮಗೆ ಯಾವುದೇ ಜಾತಿ ಧರ್ಮ ಇಲ್ಲ. ನಾವು ಹಿಂದೆ ನುಡಿದಂತೆ ನಡೆದಿದ್ದೇವೆ. ಹಿಂದಿನ ಬಾರಿ 165 ರಲ್ಲಿ 158 ಭರವಸೆಗಳನ್ನು ಈಡೇರಿಸಿ ಕೊಟ್ಟ ಮಾತಿನಂತೆ ನಡೆದಿದ್ದೇವೆ ಎಂದು ಅವರು ಹೇಳಿದ್ದಾರೆ.
Advertisement