ಬೆಂಗಳೂರು: ಇಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ನಗರದ ಎಂ.ಜಿ ರಸ್ತೆಯ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಆಯೋಜಿಸಿದ ಜಾಗೃತಿ ಜಾಥಾಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಬಾಲ ಕಾರ್ಮಿಕರ ನೇಮಕಾತಿ ಶಿಕ್ಷಾರ್ಹ ಅಪರಾಧವಾಗಿದ್ದು ಈ ಕುರಿತು ಸಾರ್ವಜನಿಕರು, ಪೋಷಕರು ಹಾಗೂ ಉದ್ದಿಮೆದಾರರಿಗೆ ಈ ಕುರಿತ ಜಾಗೃತಿ ಅಗತ್ಯ ಎಂದರು.
ಪೋಷಕರು, ಮಾತ್ರವಲ್ಲದೆ ಉದ್ಯಮ ನಡೆಸುವವರೂ ಈ ಬಗ್ಗೆ ಜಾಗೃತರಾಗಬೇಕು. ಈ ನಿಟ್ಟಿನಲ್ಲಿ ಪ್ರಮಾಣವಚನ ಬೋಧನೆ ಮಾಡಲಾಗಿದೆ. ಮಕ್ಕಳು ಕಲಿಯುವ ವಯಸ್ಸಿನಲ್ಲಿ ದುಡಿಮೆ ಮಾಡಿದರೆ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ. ಎಲ್ಲರೂ ವಿದ್ಯೆ ಕಲಿಯಬೇಕು ಅದು ಮೂಲಭೂತ ಹಕ್ಕು ಎಂದು ಸಂವಿಧಾನ ಹೇಳುತ್ತದೆ ಎಂದು ಮುಖ್ಯಮಂತ್ರಿ ನುಡಿದರು.
18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳಬಾರದು. ಒಂದು ವೇಳೆ ಕೆಲಸ ಕ್ಕೆ ತೆಗೆದುಕೊಂಡರೆ ಅದು ಕಾನೂನಿಗೆ ವಿರುದ್ಧ. ಅವರ ಮೇಲೆ ಕಾನೂನಿನ ಕ್ರಮ ತೆಗೆದುಕೊಳ್ಳಬಹುದು. ಜಾಗೃತಿ ಮೂಡಿಸುವುದು ಹಾಗೂ ದುರುದ್ದೇಶದಿಂದ ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
Advertisement