ಬೆಂಗಳೂರು: ಗ್ಯಾಸ್ ಗೀಸರ್ ಸೋರಿಕೆ; ಜೊತೆಯಾಗಿ ಸ್ನಾನ ಮಾಡಲು ಹೋಗಿದ್ದ ಭಾವಿ ದಂಪತಿ ಸಾವು!
ಬೆಂಗಳೂರು: ಸ್ನಾನಕ್ಕೆಂದು ಒಟ್ಟಿಗೆ ಹೋಗಿದ್ದಾಗ ಬಾತ್ರೂಮ್ನಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವಕ-ಯುವತಿ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಚಿಕ್ಕಜಾಲದ ತರಬನಹಳ್ಳಿಯಲ್ಲಿ ನಡೆದಿದೆ.
ಗುಂಡ್ಲುಪೇಟೆ ಮೂಲದ ಚಂದ್ರಶೇಖರ್ ಹಾಗೂ ಗೋಕಾಕ್ನ ಸುಧಾರಾಣಿ ಮೃತ ದುರ್ವೈವಿಗಳು. ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಈ ಜೋಡಿ ದುರಂತ ಅಂತ್ಯ ಕಂಡಿದೆ. ಜೂನ್ 10ರಂದು ಈ ದುರ್ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹತ್ತನೇ ತಾರೀಕು ಸಂಜೆ ಚಿಕ್ಕಜಾಲದ ತರಬನಹಳ್ಳಿ ಈ ಘಟನೆ ನಡೆದಿದ್ದು ರಾತ್ರಿ 09-10 ಗಂಟೆ ಸುಮಾರಿಗೆ ಸುಮಾರಿಗೆ ಗ್ಯಾಸ್ ಗೀಸರ್ ಆನ್ ಮಾಡಿಕೊಂಡು ಬಾತ್ ರೂಮ್ ಗೆ ಸ್ನಾನಕ್ಕೆಂದು ಇಬ್ಬರೂ ಹೋಗಿದ್ದರು. ಬಾತ್ ರೂಮ್ ನ ಕಿಟಕಿ ಹಾಗೂ ಬಾಗಿಲು ಸಂಪೂರ್ಣವಾಗಿ ಲಾಕ್ ಮಾಡಿ ಇಬ್ಬರು ಸ್ನಾನ ಮಾಡಿದ್ದರು. ಈ ಸಂದರ್ಭದಲ್ಲಿ ಬಾತ್ ರೂಂನಲ್ಲಿ ಕಾರ್ಬನ್ ಮೊನಾಕ್ಸೈಡ್ ಸೋರಿಕೆಯಾಗಿದ್ದು ಸ್ನಾನ ಮಾಡುತ್ತಲೇ ಇಬ್ಬರೂ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ನಂತರ ಬೆಳಗ್ಗೆ ಮಾಲೀಕರು ಅನುಮಾನಗೊಂಡು ಮನೆಯನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಅವರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಬಾಗಿಲು ಮುರಿದು ಮೃತದೇಹಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ತರಬನಹಳ್ಳಿಯಲ್ಲಿ ಚಂದ್ರಶೇಖರ್ ಮನೆ ಮಾಡಿಕೊಂಡಿದ್ದ, ಶುಕ್ರವಾರ ಸಂಜೆ ಸುಧಾರಾಣಿ ಮನೆಗೆ ಬಂದಿದ್ದರು ಎನ್ನಲಾಗಿದೆ. ಇಬ್ಬರೂ ನಂದಿಹಿಲ್ಸ್ ಬಳಿಯ ಗಾಲ್ಪ್ ಹೋಟೆಲ್ ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದು ಮದುವೆಯಾಗಲು ತಯಾರಿ ನಡೆಸುತ್ತಿದ್ದರು. ಆದರೆ ಇದೇ ಸಂದರ್ಭದಲ್ಲಿ ನಡೆಯಬಾರದಾಗಿದ್ದ ದುರಂತ ನಡೆದಿದ್ದು, ಜೋಡಿ ಮದುವೆಗೆ ಮುಂಚೆಯೇ ಮಸಣ ಸೇರಿದೆ. ಸದ್ಯ ಮೃತದೇಹಗಳನ್ನ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ