
ಮೈಸೂರು: ಕರ್ನಾಟಕದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಿಂಕೆಯೊಂದರ ಕೊಂಬಿಗೆ ಮೀನು ಹಿಡಿಯುವ ಬಲೆ ಸಿಲುಕಿರುವ ಫೊಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಿರ್ಬಂಧಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ.
ವನ್ಯಜೀವಿ ಕಾರ್ಯಕರ್ತರು ಈ ಅಕ್ರಮಗಳ ವಿರುದ್ಧ ಕಿಡಿಕಾರಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ಮತ್ತು ಜಿಂಕೆಯನ್ನು ಪತ್ತೆ ಮಾಡಿ ಅದರ ಕೊಂಬಿಗೆ ಸಿಲುಕಿರುವ ಮೀನುಗಾರಿಕೆ ಬಲೆ ತೆಗೆಯುವಂತೆ ಒತ್ತಾಯಿಸಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಾಕನಕೋಟೆ ಪ್ರದೇಶದಲ್ಲಿ ಜಂಗಲ್ ಸಫಾರಿಗೆ ತೆರಳಿದ್ದ ಪ್ರವಾಸಿಗರೊಬ್ಬರು ಜಿಂಕೆ ಕೊಂಬಿಗೆ ಸಿಲುಕಿರುವ ಬಲೆಯನ್ನು ಬಿಡಿಸಿಕೊಳ್ಳಲು ಜಿಂಕೆ ಪರದಾಡುತ್ತಿರುವುದನ್ನು ಗಮನಿಸಿ ಫೊಟೋ ಕ್ಲಿಕ್ಕಿಸಿದ್ದಾರೆ. ಈ ಫೊಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಬಿನಿ ಹಿನ್ನೀರಿನ ಸಮೀಪದಲ್ಲಿರುವ ಡಿ.ಬಿ ಕುಪ್ಪೆ ಅರಣ್ಯದ ಬಳಿ ಜಿಂಕೆ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಬಂಡೀಪುರ ಮತ್ತು ನಾಗರಹೊಳೆ ಅರಣ್ಯದ ಸಮೀಪ ವಾಸಿಸುವ ಮೀನುಗಾರರು ಹೆಚ್ಚಾಗಿ ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಬಲೆಗಳನ್ನು ಬೀಸುತ್ತಿದ್ದರು. ಕೆಲವೊಮ್ಮೆ, ಆ ಮೀನುಗಾರಿಕೆ ಬಲೆಗಳು ನೀರಿನಲ್ಲಿ ಉಳಿಯುತ್ತವೆ ಮತ್ತು ದಡಗಳಿಗೆ ಬಂದು ಸೇರುತ್ತವೆ.
ಎಲ್ಲಾ ರೀತಿಯ ಕಾಡು ಪ್ರಾಣಿಗಳು ನೀರು ಕುಡಿಯಲು ಹಿನ್ನೀರಿಗೆ ಹೋಗುತ್ತವೆ ಮತ್ತು ಈ ಮೀನುಗಾರಿಕೆ ಬಲೆಗಳು ಅವುಗಳಿಗೆ ಮಾರಕವಾಗಿವೆ. ಅವು ಪ್ರಾಣಿಗಳ ಕಾಲುಗಳು, ಕುತ್ತಿಗೆಗಳು ಮತ್ತು ಕೊಂಬುಗಳಿಗೆ ಸಿಲುಕಿಕೊಳ್ಳುತ್ತವೆ. ಕೆಲವೊಮ್ಮೆ ಆನೆಗಳು ಕೂಡ ಈ ಮೀನುಗಾರಿಕೆ ಬಲೆಗಳನ್ನು ಬಿಡಿಸಿಕೊಳ್ಳಲು ಹರಸಾಹಸ ಪಡುತ್ತವೆ.
2021ರಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಮೀನುಗಾರಿಕೆ ಬಲೆಯಲ್ಲಿ ಸಿಲುಕಿ ನೀರಿನಿಂದ ಹೊರಬರಲು ಸಾಧ್ಯವಾಗದ ಆನೆಯನ್ನು ರಕ್ಷಿಸಿದ್ದರು.
ಹಿನ್ನೀರು ಮತ್ತು ಜಲಮೂಲಗಳಲ್ಲಿ ಮೀನುಗಾರಿಕಾ ಬಲೆಗಳನ್ನು ಹುಡುಕಲು ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕು ಎಂದು ವನ್ಯಜೀವಿ ಕಾರ್ಯಕರ್ತರು ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ ಚಿಕ್ಕನರಗುಂದ ತಿಳಿಸಿದ್ದಾರೆ.
Advertisement