ಅನ್ನಭಾಗ್ಯ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿಗೆ ನಿರಾಕರಣೆ; ತೆಲಂಗಾಣಕ್ಕೆ ಸಚಿವ ಕೆಎಚ್ ಮುನಿಯಪ್ಪ ದೌಡು

ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನ್ನಭಾಗ್ಯಕ್ಕೆ ಅಕ್ಕಿ ಕೊರತೆ ಉಂಟಾಗಿರುವ ಹಿನ್ನಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಇಂದು ನೆರೆಯ ತೆಲಂಗಾಣಕ್ಕೆ ತೆರಳಿದ್ದಾರೆ.
ಕೆಎಚ್ ಮುನಿಯಪ್ಪ
ಕೆಎಚ್ ಮುನಿಯಪ್ಪ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನ್ನಭಾಗ್ಯಕ್ಕೆ ಅಕ್ಕಿ ಕೊರತೆ ಉಂಟಾಗಿರುವ ಹಿನ್ನಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಇಂದು ನೆರೆಯ ತೆಲಂಗಾಣಕ್ಕೆ ತೆರಳಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ನೀಡಬೇಕಾಗಿದ್ದ ಹೆಚ್ಚುವರಿ 5 ಕೆಜಿ ಅಕ್ಕಿಗೆ ಕೊಕ್ಕೆ ಹಾಕಿರುವ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೆ ಉಂಟಾಗಿರುವ ಅಕ್ಕಿ ಕೊರತೆ ನೀಗಿಸಲು ರಾಜ್ಯಸರ್ಕಾರ ಅನ್ಯ ರಾಜ್ಯಗಳತ್ತ ಮುಖ ಮಾಡಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಕಿಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ ಎಂದು ಆರೋಪಿಸಿದ್ದ ಬೆನ್ನಲ್ಲೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ, ಸಚಿವ ಸಂಪುಟ ಸಭೆ ಮುಗಿದ ಬಳಿಕ ತೆಲಂಗಾಣ ರಾಜ್ಯಕ್ಕೆ ತೆರಳಿದ್ದಾರೆ.

ಮುಖ್ಯಮಂತ್ರಿ ಸೂಚನೆ ಮೇರೆಗೆ ಮುನಿಯಪ್ಪರವರು ತೆಲಂಗಾಣಕ್ಕೆ ತೆರಳಿದ್ದು, ಈ ವೇಳೆ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರರಾವ್, ಆಹಾರ ಸಚಿವರನ್ನು ಭೇಟಿ ಮಾಡಿ ಹೆಚ್ಚುವರಿ ಅಕ್ಕಿ ದಾಸ್ತಾನು ಇದ್ದರೆ ಅದನ್ನು ಖರೀದಿ ಮಾಡುತ್ತೇವೆ ಎಂದು ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. 

ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಈಗ ಈ ಯೋಜನೆ ಜಾರಿಗೆ ತೆಲಂಗಾಣ ಸೇರಿದಂತೆ ಅನ್ಯ ರಾಜ್ಯದಿಂದ ಅಕ್ಕಿ ಖರೀದಿಗೆ ರಾಜ್ಯಸರ್ಕಾರ ಮುಂದಾಗಿದೆ. ತೆಲಂಗಾಣ ಮಾತ್ರವಲ್ಲದೇ ಛತ್ತೀಸ್‌ಗಢ ರಾಜ್ಯದಿಂದಲೂ ಲಭ್ಯವಿರುವ ಅಕ್ಕಿಯ ಮಾಹಿತಿ ಇಂದು ಸಂಜೆಯೊಳಗೆ ಲಭಿಸಲಿದೆ. ನಾಳೆ ಸಂಜೆಯೊಳಗೆ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com