
ಬೆಂಗಳೂರು: ಬಹುನಿರೀಕ್ಷಿತ ರಾಜ್ಯ ಬಜೆಟ್ ಜುಲೈ 7 ರಂದು ಮಂಡನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ತಯಾರಿಯಲ್ಲಿ ಕಾರ್ಯಮಗ್ನರಾಗಿದ್ದಾರೆ.
ನಿನ್ನೆಯಿಂದ ಮುಖ್ಯಮಂತ್ರಿಗಳು ಬಜೆಟ್ ತಯಾರಿ ಆರಂಭಿಸಿದ್ದು, ಇದರಂತೆ 14 ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಮುಖ್ಯಸ್ಥರೊಂದಿಗೆ ಸರಣಿ ಸಭೆಗಳನ್ನು ನಡೆಸಿದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ, ಸಹಕಾರ, ಪರಿಸರ ಮತ್ತು ಜೀವಶಾಸ್ತ್ರ, ಜಲಸಂಪನ್ಮೂಲ, ಸಣ್ಣ ನೀರಾವರಿ, ಅರಣ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಸಿಬ್ಬಂದಿ, ಆಡಳಿತ ಸುಧಾರಣೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆಗಳ ಜತೆ ನಿನ್ನೆ ಸಭೆಗಳನ್ನು ನಡೆಸಿದರು.
ಈ ವೇಳೆ ರಾಜ್ಯ ಸರ್ಕಾರದ ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ಕೇಂದ್ರದ ಯೋಜನೆಗಳ ಬಗ್ಗೆ ಮಾಹಿತಿ ಮಾಹಿತಿ ಪಡೆದುಕೊಂಡರು. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹಣವನ್ನು ಯಾವ ರೀತಿಯಲ್ಲಿ ಉಳಿತಾಯ ಮಾಡಬಹುದು ಎಂಬುದನ್ನೂ ಚರ್ಚೆ ನಡೆಸಿದರು.
ಮುಖ್ಯವಾಗಿ ಹಳೆಯ ಯೋಜನೆಗಳನ್ನು ಮುಂದುವರಿಸಲು ವಿವಿಧ ಮೂಲಗಳಿಂದ ಆದಾಯವನ್ನು ಗಳಿಸುವುದು ಮತ್ತು ಐದು ಗ್ಯಾರಂಟಿ ಯೋಜನೆಗಳ ಕಾರ್ಯಗತಗೊಳಿಸುವ ಕುರಿತಂತೆಯೂ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಇಂದು ಸಂಪನ್ಮೂಲ ಕ್ರೋಡೀಕರಣ ಇಲಾಖೆಗಳಾದ ಸಾರಿಗೆ, ಕಂದಾಯ, ಕೈಗಾರಿಕೆ, ವಾಣಿಜ್ಯ ತೆರಿಗೆ, ಸಹಕಾರ, ಸೇರಿದಂತೆ ಇತರ ಇಲಾಖೆಗಳ ಜತೆ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಬಜೆಟ್ ಬಹುನಿರೀಕ್ಷೆ ಹುಟ್ಟಿಸಿದ್ದು, ಕಾಂಗ್ರೆಸ್ ಸರ್ಕಾರದ ಪಂಚ ಯೋಜನೆಗಳ ಜತೆ ಸಂಪನ್ಮೂಲ ಕ್ರೋಡೀಕರಣ ಹಾಗೂ ಆಯವ್ಯಯದ ಸವಾಲಿಗೆ ಉತ್ತರ ನೀಡುವ ಅನಿವಾರ್ಯತೆ ಇದೆ ಎದುರಾಗಿದೆ.
Advertisement