ಪ್ರಯಾಣಿಕರ ಸೋಗಿನಲ್ಲಿದ್ದ ಕಳ್ಳನನ್ನು ಹಿಡಿದು, 5 ಲಕ್ಷ ರೂ. ದರೋಡೆ ಯತ್ನ ವಿಫಲಗೊಳಿಸಿದ ಕೆಎಸ್ಆರ್ ಟಿಸಿ ಚಾಲಕ!

ಕೆಎಸ್‌ಆರ್‌ಟಿಸಿ ಚಾಲಕ ಕಮ್ ಕಂಡಕ್ಟರ್ ಒಬ್ಬರು, ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿದ ಕಳ್ಳರನ್ನು ಹಿಡಿದು, ಸಹ ಪ್ರಯಾಣಿಕರೊಬ್ಬರ 5 ಲಕ್ಷ ರೂಪಾಯಿ ದರೋಡೆ ಯತ್ನವನ್ನು ವಿಫಲಗೊಳಿಸಿದ್ದಾರೆ.
ಕೆಎಸ್ ಆರ್ ಟಿಸಿ ಬಸ್
ಕೆಎಸ್ ಆರ್ ಟಿಸಿ ಬಸ್

ಬೆಂಗಳೂರು: ಕೆಎಸ್‌ಆರ್‌ಟಿಸಿ ಚಾಲಕ ಕಮ್ ಕಂಡಕ್ಟರ್ ಒಬ್ಬರು, ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿದ ಕಳ್ಳರನ್ನು ಹಿಡಿದು, ಸಹ ಪ್ರಯಾಣಿಕರೊಬ್ಬರ 5 ಲಕ್ಷ ರೂಪಾಯಿ ದರೋಡೆ ಯತ್ನವನ್ನು ವಿಫಲಗೊಳಿಸಿದ್ದಾರೆ.

ಮಂಗಳವಾರ ಸಂಜೆ 7 ಗಂಟೆಗೆ ತಮಿಳುನಾಡಿನ ತಿರುನಲ್ಲಾರ್‌ನಿಂದ ಬೆಂಗಳೂರಿಗೆ ತೆರಳುವ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್ ಚಿದಂಬರಂ ತಲುಪಿದಾಗ, ಇಬ್ಬರು ವ್ಯಕ್ತಿಗಳು(ಅವರಲ್ಲಿ ಒಬ್ಬರು ಅಸ್ಲಂ ಎಂದು ಗುರುತಿಸಲಾಗಿದೆ) ಬಸ್‌ ಹತ್ತಿದರು. ಡ್ರೈವರ್-ಕಮ್-ಕಂಡಕ್ಟರ್ ಸೋಮಪ್ಪ ಅವರು ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದಾರೆ. ಇದಕ್ಕೆ ಅವರು ಮೆಜೆಸ್ಟಿಕ್ ಬಸ್ ನಿಲ್ದಾಣ ಎಂದು ಹಿಂದಿಯಲ್ಲಿ ಉತ್ತರಿಸಿದ್ದಾರೆ.

ಈ ಮಧ್ಯೆ ನೆಯ್ವೇಲಿಯಿಂದ ಸಾಫ್ಟ್‌ವೇರ್ ಉದ್ಯಮಿ ತಿರುಮುರುಗನ್ ಮತ್ತು ಅವರ ಸ್ನೇಹಿತ ಬಸ್ ಹತ್ತಿದ್ದಾರೆ. ಬಸ್ ಎಲೆಕ್ಟ್ರಾನಿಕ್ ಸಿಟಿ ಬಳಿ ಬಂದಾಗ, ಅಸ್ಲಂ ಮತ್ತು ಆತನ ಸಹಚರ ತಮ್ಮ ಸಾಮಾನುಗಳನ್ನು ಹಿಡಿದುಕೊಂಡು ತಾವು ಇಲ್ಲಿಯೇ ಇಳಿಬೇಕು ಎಂದು ಚಾಲಕನಿಗೆ ಹೇಳಿದ್ದಾರೆ. ಬಸ್ ಹತ್ತುವಾಗ ಹಿಂದಿಯಲ್ಲಿ ಮಾತನಾಡಿ ಮೆಜೆಸ್ಟಿಕ್ ಎಂದಿದ್ದ ಅವರು ಈಗ ಕನ್ನಡದಲ್ಲಿ ಮಾತನಾಡುತ್ತ ಇಳಿಯಲು ಆತುರ ತೋರುತ್ತಿದ್ದಂತೆ ಸೋಮಪ್ಪ ಅವರಿಗೆ ಅನುಮಾನ ಬಂದಿದೆ.

ಸೋಮಪ್ಪ ಬಸ್ ನಿಲ್ಲಿಸಲು ತಡಮಾಡಿ, ಲ್ಯಾಪ್‌ಟಾಪ್‌ನಂತಹ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಅವರ ಬ್ಯಾಗ್‌ಗಳನ್ನು ಎಚ್ಚರಿಕೆಯಿಂದ ಗಮನಿಸಿದ್ದಾರೆ. ಆದಾಗ್ಯೂ, ಸುಮಾರು 10 ನಿಮಿಷಗಳ ನಂತರ ಆ ಇಬ್ಬರನ್ನು ಹೊರಗೆ ಬಿಟ್ಟಿದ್ದಾರೆ.

ಸ್ವಲ್ಪ ಸಮಯದ ನಂತರ ತಿರುಮುರುಗನ್ ತನ್ನ ಹಣ ಕಳ್ಳತನವಾಗಿದೆ ಎಂದು ಕೂಗುತ್ತಾ ಚಾಲಕನ ಕ್ಯಾಬಿನ್ ಕಡೆಗೆ ಧಾವಿಸಿದ್ದಾನೆ. ಸೋಮಪ್ಪ ಅವರಿಗೆ ಸಹಜವಾಗಿಯೇ ಇಬ್ಬರ ಮೇಲಿನ ಅನುಮಾನ ಹೆಚ್ಚಾಗಿದ್ದು, ಅವರನ್ನು ಬೆನ್ನಟ್ಟಿ ಅಸ್ಲಾಂನನ್ನು ಹಿಡಿದಿದ್ದಾರೆ. ಇನ್ನೊಬ್ಬ ಚೀಲಗಳನ್ನು ಬಿಟ್ಟು ಪರಾರಿಯಾಗಿದ್ದಾನೆ,

"ನಾವು ಬ್ಯಾಗ್‌ಗಳನ್ನು ಪರಿಶೀಲಿಸಿದಾಗ, ಅದರಲ್ಲಿ ತಿರುಮುರುಗನ್ ಅವರ 5 ಲಕ್ಷ ರೂ. ನಗದು ಪತ್ತೆಯಾಗಿದೆ. ನಾನು ನನ್ನ ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದೆ. ನಂತರ ಹತ್ತಿರದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿ ಅಸ್ಲಂನನ್ನು ಒಪ್ಪಿಸಿದೆ" ಎಂದು ಸೋಮಪ್ಪ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ತಿರುಮುರುಗನ್ ಅವರು ತಮ್ಮ ಹಣ ವಾಪಸ್ ಪಡೆದಿದ್ದು, ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕೆಎಸ್‌ಆರ್‌ಟಿಸಿ ಎಂಡಿ ಅನ್ಬು ಕುಮಾರ್ ಅವರು ಕೆಚ್ಚೆದೆಯ ಕಾರ್ಯಕ್ಕಾಗಿ ಚಾಲಕನನ್ನು ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com