
ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸರಳೀಕೃತ ಮಾಡುವ ನಿಟ್ಟಿನಲ್ಲಿ ಈಗಾಗಲೇ 249 ಉಪ ನೋಂದಣಿ ಕಚೇರಿಯಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, 256 ಉಪ ನೋಂದಣಿ ಕಚೇರಿಯಲ್ಲಿ ಈ ತಂತ್ರಾಂಶ ಅಳವಡಿಸಲಾಗುತ್ತಿದೆ. ಇದರಿಂದ ಕಡಿಮೆ ಸಮಯದಲ್ಲಿ ಸುಗಮವಾಗಿ ನೋಂದಣಿ ಪ್ರಕ್ರಿಯೆ ನಡೆಯುತ್ತದೆ. ಆನ್ ಲೈನ್ ನಲ್ಲಿ ದಾಖಲೆ ಸಲ್ಲಿಕೆ, ಪರಿಶೀಲನೆ ನಡೆಯಲಿದ್ದು, ಹತ್ತರಿಂದ ಹದಿನೈದು ನಿಮಿಷನಲ್ಲಿ ನೋಂದಣಿ ಕಾರ್ಯ ಮುಗಿಸಲು ಅವಕಾಶ ಇದೆ ಎಂದು ವಿವರಿಸಿದರು.
ಆನ್ ಲೈನ್ ನೋಂದಣಿಯಿಂದ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ. ಕಾವೇರಿ 2 ಜಾರಿಗೊಂಡ ಬಳಿಕ ದೊಡ್ಡಬಳ್ಳಾಪುರದಲ್ಲಿ ದಿನಕ್ಕೆ 65 ನೋಂದಣಿ ಆಗುತ್ತದೆ. ಬಳ್ಳಾರಿ ಒಂದೇ ದಿನದಲ್ಲಿ 146 ದಾಖಲೆಗಳು ನೋಂದಣಿ ಆಗಿವೆ. ಚಾಮರಾಜನಗರದಲ್ಲಿ ಒಂದು ದಿನಕ್ಕೆ 33, ಚಿಕ್ಕಬಳ್ಳಾಪುರ 49,ಗುಲಬರ್ಗಾ ದಲ್ಲಿ ಒಂದು ದಿನಕ್ಕೆ 91 ದಾಖಲೆ ನೋಂದಣಿ ಆಗಿವೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ವರ್ಷ ನೋಂದಣಿಯಿಂದ ಸರ್ಕಾರಕ್ಕೆ ರೂ.1, 224 ಕೋಟಿ ಆದಾಯ ಬಂದಿದೆ. ಈ ವರ್ಷ ಚುನಾವಣೆ ಇದ್ದರೂ 1,352 ಕೋಟಿ ಆದಾಯ ಬಂದಿದೆ. ಜೂನ್ ತಿಂಗಳಲ್ಲಿ 800 ಕೋಟಿ ಆದಾಯ ಬಂದಿದೆ.ಏಪ್ರಿಲ್ ತಿಂಗಳಿಂದ ಕಾವೇರಿ 2 ಸರಳೀಕೃತ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ತಿಳಿಸಿದರು.
ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ: ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆಯಾಗದ ಕಾರಣ ರೈತರಿಗೂ ಅನ್ಯಾಯವಾಗುತ್ತಿದೆ. ಆಸ್ತಿಗಳ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ಮಾರ್ಗಸೂಚಿ ದರ ಬದಲಾವಣೆ ಮಾಡಲಾಗುವುದು ಎಂದರು.
ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಅತಿ ಕಡಿಮೆ ಇದ್ದರೆ ಕಪ್ಪು ಹಣದ ವಹಿವಾಟು ಹೆಚ್ಚಾಗುತ್ತಿದೆ. ಈ ಹಿಂದೆ ಪ್ರತಿ ಎರಡು ವರ್ಷಗಳಿಗೊಮ್ಮೆ ದರ ಪರಿಷ್ಕರಿಸಲಾಗುತಿತ್ತು. ಆದರೆ, ಕೋವಿಡ್ ಮತ್ತಿತರ ಕಾರಣಗಳಿಂದ ಪರಿಷ್ಕರಿಸಿಲ್ಲ, ಈ ಬಾರಿಯೂ ಮಾರ್ಗಸೂಚಿ ದರ ಏಕರೂಪವಾಗಿರುವುದಿಲ್ಲಎಂದು ಅವರು ತಿಳಿಸಿದರು.
Advertisement