ತಾತ್ಕಾಲಿಕ ಶಿಕ್ಷಕರ ಸೇವೆ ವಿಸ್ತರಿಸಿದ ಬಿಬಿಎಂಪಿ

ಬೋಧನಾ ಸೇವೆ ನೀಡುವ ಅಲ್ಪಾವಧಿ ಟೆಂಡರ್‌ಗಳಿಗೆ ಯಾವುದೇ ಗುತ್ತಿಗೆದಾರರು ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಶಿಕ್ಷಕರ ಸೇವೆಯನ್ನೇ ಬಿಬಿಎಂಪಿ ವಿಸ್ತರಣೆ ಮಾಡಿದೆ ಎದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೋಧನಾ ಸೇವೆ ನೀಡುವ ಅಲ್ಪಾವಧಿ ಟೆಂಡರ್‌ಗಳಿಗೆ ಯಾವುದೇ ಗುತ್ತಿಗೆದಾರರು ಆಸಕ್ತಿ ತೋರಿಸದ ಹಿನ್ನೆಲೆಯಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಶಿಕ್ಷಕರ ಸೇವೆಯನ್ನೇ ಬಿಬಿಎಂಪಿ ವಿಸ್ತರಣೆ ಮಾಡಿದೆ ಎದು ತಿಳಿದುಬಂದಿದೆ.

ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ 16 ಪ್ರಾಥಮಿಕ ಶಾಲೆಗಳು, 33 ಪ್ರೌಢಶಾಲೆಗಳು ಮತ್ತು 16 ಪದವಿ ಪೂರ್ವ ಕಾಲೇಜುಗಳಿಗೆ 725 ಶಿಕ್ಷಕರನ್ನು ನೇಮಿಸಿಕೊಳ್ಳಲು ಬಿಬಿಎಂಪಿ ಮುಂದಾಗಿತ್ತು.

ಪಾಲಿಕೆಯ ಅಧೀನದಲ್ಲಿರುವ ಶಿಕ್ಷಣ ಇಲಾಖೆಯಲ್ಲಿ 478 ಹುದ್ದೆಗಳು ಖಾಲಿಯಿದ್ದು, ಆದರೆ, ಈ ಪೈಕಿ ಕೇವಲ 193 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಹೀಗಾಗಿ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ಭರ್ತಿ ಮಾಡಲು ಟೆಂಡರ್ ಕರೆಯಲಾಗಿತ್ತು. ಮೇ.22 ರಂದು ಟೆಂಡರ್ ಕರೆಯಲಾಗಿದ್ದು, ಜುಲೈ ಆರಂಭದೊಳಗೆ ನೇಮಕಾತಿ ಪೂರ್ಣಗೊಳ್ಳಬೇಕಿತ್ತು. ಆದರೆ, ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಗುತ್ತಿಗೆದಾರರು ಮುಂದೆ ಬಾರದ ಕಾರಣ ಅಸ್ತಿತ್ವದಲ್ಲಿರುವ ಶಿಕ್ಷಕರ ಸೇವೆ ವಿಸ್ತರಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

2022-23ರ ರಾಜ್ಯ ಪರೀಕ್ಷೆಗಳಲ್ಲಿ ಬಿಬಿಎಂಪಿಗೆ ಸೇರಿದ ಶಾಲೆಗಳ ಕಳಪೆ ಫಲಿತಾಂಶಕ್ಕೆ ಅನರ್ಹ ಶಿಕ್ಷಕರೇ ಕಾರಣ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಲು ವಿಶೇಷ ಆಯುಕ್ತರಾದ (ಶಿಕ್ಷಣ) ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು 80 ಶಿಕ್ಷಕರಿಗೆ ಬೋಧಿಸುವ ಅರ್ಹತೆಯೇ ಇಲ್ಲ, ಅವರನ್ನು ಬದಲಾಯಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್ ಕರೆಯಲಾಗಿತ್ತು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.

ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಗುತ್ತಿಗೆದಾರರು ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಶಿಕ್ಷಕರ ಗುತ್ತಿಗೆಯನ್ನೇ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com