ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ (Idgah Maidan ) ಇಂದು ಗುರುವಾರ ಮುಸ್ಲಿಂ ಬಾಂಧವರು ಬಕ್ರೀದ್ ಆಚರಿಸಲು ಯಾವುದೇ ಸಮಸ್ಯೆಗಳಿಲ್ಲ. ಕಳೆದ ವರ್ಷ ಈದ್ಗಾ ಮೈದಾನದ ಮಾಲೀಕತ್ವ ವಿವಾದ ತೀವ್ರವಾಗಿ ತಲೆದೋರಿತ್ತು.
ಆದರೆ ಈ ಬಾರಿ ಚಾಮರಾಜಪೇಟೆಯ ಶಾಸಕ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ಸಂಪುಟದಲ್ಲಿ ಸಚಿವರಾಗಿರುವುದರಿಂದ ಇಂದು ಸರಾಗವಾಗಿ ಬಕ್ರೀದ್ ಆಚರಿಸಲು ಅನುಕೂಲತೆಗಳಿದ್ದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವ ನಿರೀಕ್ಷೆಯಿದೆ.
ಕಳೆದ ವರ್ಷ ಏನಾಗಿತ್ತು?: ಚಾಮರಾಜಪೇಟೆಯ ಈದ್ಗಾ ಜಮೀನಿನ ಮಾಲೀಕತ್ವದ ವಿವಾದವು ಕಳೆದ ವರ್ಷ ಉದ್ವಿಗ್ನತೆಗೆ ಕಾರಣವಾಗಿತ್ತು, ಹಿಂದೂಪರ ಗುಂಪುಗಳು ವಕ್ಫ್ ಬೋರ್ಡ್‌ಗೆ ಬೀಗ ಜಡಿದು ಇತರ ಧರ್ಮದವರಿಗೆ ಮೈದಾನದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡುವಂತೆ ಕೋರಿದ್ದವು. ಈ ಜಮೀನು ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಜಂಟಿ ಆಯುಕ್ತರು ವರದಿ ನೀಡಿದ ಬೆನ್ನಲ್ಲೇ ಹಿಂದೂಪರ ಸಂಘಟನೆಗಳ ಬೇಡಿಕೆಗಳಿಗೆ ಮತ್ತಷ್ಟು ಬಲಬಂದಿತ್ತು. ಅಹಿತಕರ ಘಟನೆಗಳು ನಡೆಯದಂತೆ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬಿಗಿ ಪೊಲೀಸ್ ನಿಯೋಜನೆ ಮಧ್ಯೆ ಬಕ್ರೀದ್ ಆಚರಣೆ ನಡೆದಿತ್ತು.
ಈ ಬಾರಿ ಪರಿಸ್ಥಿತಿ ಭಿನ್ನ: ಇದೀಗ ರಾಜ್ಯದಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಸಚಿವರಾಗಿರುವುದರಿಂದ ಬಕ್ರೀದ್ ಪ್ರಾರ್ಥನೆಗೆ ಸಿದ್ಧತೆ ಭರದಿಂದ ಸಾಗಿದೆ. ಸಂಭ್ರಮಾಚರಣೆಯ ಅಂಗವಾಗಿ ಕುರಿ ವ್ಯಾಪಾರವನ್ನು ಸಿರ್ಸಿ ವೃತ್ತ ಮತ್ತು ಮೈಸೂರು ರಸ್ತೆಗೆ ಸ್ಥಳಾಂತರ ಮಾಡಲಾಗಿದ್ದು, ಬಿಬಿಎಂಪಿಯು ಗ್ಯಾಂಗ್‌ಮೆನ್ ಮತ್ತು ಗ್ರೂಪ್ 'ಡಿ' ನೌಕರರನ್ನು ಭೂಮಿಯನ್ನು ಸ್ವಚ್ಛಗೊಳಿಸಲು ಮತ್ತು ಸಮತಟ್ಟು ಮಾಡಲು ನಿಯೋಜಿಸಿದೆ. ಮೌಲ್ವಿಗಳ ಇಸ್ಲಾಂ ಧರ್ಮೋಪದೇಶಕ್ಕಾಗಿ ಈದ್ಗಾ ಗೋಡೆ ಬಳಿ ಟೆಂಟ್ ಗಳನ್ನು ನಿರ್ಮಿಸಲಾಗುತ್ತಿದೆ.
ಭದ್ರತೆ ಹೇಗಿದೆ?: ಕೆಎಸ್‌ಆರ್‌ಪಿ ತುಕಡಿಗಳಲ್ಲದೆ ಡಿಸಿಪಿಗಳು, ಎಸಿಪಿಗಳು ಸೇರಿದಂತೆ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಶಾಂತಿಯುತ ಈದ್ ಪ್ರಾರ್ಥನೆ ನಡೆಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದಾರೆ. ಸೌಂಡ್ ಸಿಸ್ಟಂ ಕೂಡ ಅಳವಡಿಸಲಾಗುವುದು. ಈ ನಿಟ್ಟಿನಲ್ಲಿ ವಿಶೇಷ ಅನುಮತಿ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಗೆ ಪ್ರಾರ್ಥನೆ ಆರಂಭವಾಗಲಿದ್ದು, 10.30ಕ್ಕೆ ಮುಕ್ತಾಯವಾಗುವ ನಿರೀಕ್ಷೆಯಿದೆ.
Advertisement