ಚುನಾವಣೆ ಹತ್ತಿರಬರುತ್ತಿದ್ದಂತೆಯೇ ನಂದಿಬೆಟ್ಟ ರೋಪ್ ವೇ ನಿರ್ಮಾಣಕ್ಕೆ ಕೂಡಿಬಂತು ಕಾಲ: 15 ದಿನಗಳಲ್ಲಿ ಯೋಜನೆಗೆ ಸಿಎಂ ಚಾಲನೆ

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದಂತೆಯೇ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಜ್ಯದ ಪ್ರಮುಖ ನೈಸರ್ಗಿಕ ಪ್ರವಾಸಿ ತಾಣವಾದ ನಂದಿಬೆಟ್ಟದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಇನ್ನೆರಡು ವಾರಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯೋಜನೆಗೆ ಚಾಲನೆ ನೀಡಲಿದ್ದಾರೆಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದಂತೆಯೇ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಜ್ಯದ ಪ್ರಮುಖ ನೈಸರ್ಗಿಕ ಪ್ರವಾಸಿ ತಾಣವಾದ ನಂದಿಬೆಟ್ಟದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಇನ್ನೆರಡು ವಾರಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯೋಜನೆಗೆ ಚಾಲನೆ ನೀಡಲಿದ್ದಾರೆಂದು ತಿಳಿದುಬಂದಿದೆ.

ವಿಧಾನಸಭೆ ಚುನಾವಣೆ ಕುರಿತು ಚುನಾವಣಾ ಆಯೋಗದ (ಇಸಿ) ಅಧಿಸೂಚನೆಗೆ ಮುನ್ನ ಸಿಎಂ ಬೊಮ್ಮಾಯಿ  ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆಂದು ಹೇಳಲಾಗುತ್ತಿದೆ.

ಚುನಾವಣಾ ಆಯೋಗದ ಅಧಿಸೂಚನೆಯೊಂದಿಗೆ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಗೆ ಬರುವುದರಿಂದ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಆದಷ್ಟು ಬೇಗ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದಿನಾಂಕಗಳನ್ನು ಕೋರಿದ್ದಾರೆಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಆನಂದ್ ಸಿಂಗ್ ಅವರು, ನಂದಿಬೆಟ್ಟದಲ್ಲಿ ಮಾರ್ಚ್ 15ರೊಳಗೆ ರೋಪ್ ವೇ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದೇವೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರವೇ ದಿನಾಂಕ ಘೋಷಣೆ ಮಾಡುತ್ತೇವೆ. ಒಟ್ಟು 96 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ಮಾಣ ಮಾಡಲಾಗುತ್ತಿದೆ. ಜೊತೆಗೆ, ಶೀಘ್ರದಲ್ಲಿಯೇ ದೇಶದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿಯೂ ರೋಪ್‌ವೇ ನಿರ್ಮಾಣ ಕಾರ್ಯ ಆರಂಭ ಮಾಡಲಾಗುತ್ತದೆ. ಈಗ ಅಲ್ಲಿ ವಸತಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡ ಪೂರಕ ಕ್ರಮದಿಂದಾಗಿ ಕೋವಿಡ್ ಬಳಿಕ ಚೇತರಿಸಿಕೊಂಡ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜೆಎಲ್‌ಆರ್) ಪ್ರಸಕ್ತ ಸಾಲಿನಲ್ಲಿ 15 ಕೋಟಿ ರೂ.ಲಾಭ ಗಳಿಸಿದೆ. ಕೋವಿಡ್‌ನಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿತ್ತು. ಪ್ರವಾಸೋದ್ಯಮ ಇಲಾಖೆಯಿಂದ ಕೋವಿಡ್ ಸುರಕ್ಷಿತ ಕ್ರಮ ಕೈಗೊಂಡು ಪ್ರವಾಸಿಗರಲ್ಲಿ ವಿಶ್ವಾಸ ಮೂಡಿಸಲಾಗಿತ್ತು. ಪರಿಣಾಮ ಜೆಎಲ್‌ಆರ್ ಸಂಸ್ಥೆ ಪುನಃ ಲಾಭದತ್ತ ಮರಳಿದೆ. 2022-23ನೇ ಸಾಲಿನಲ್ಲಿ ಜೆಎಲ್‌ಆರ್ ಸಂಸ್ಥೆ 98.20 ಕೋಟಿ ರೂ. ವಹಿವಾಟು ನಡೆಸಿದ್ದು, 15 ಕೋಟಿ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.

ಸಂಸ್ಥೆ ವತಿಯಿಂದ ಹೊಸದಾಗಿ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಿರ್ಮಿಸಲು ಉದ್ದೇಶಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಸಿಹಿತ್ಲು ಕಡಲತೀರದಲ್ಲಿ ಅಂದಾಜು 7.50 ಕೋಟಿ ರೂ.ವೆಚ್ಚದಲ್ಲಿ ಸರ್ಫಿಂಗ್ ಸ್ಕೂಲ್, ರೆಸಾರ್ಟ್, ವಾಟರ್ ಸ್ಪೋರ್ಟ್ಸ್ ಮತ್ತು ರೆಸ್ಟೋರೆಂಟ್, 2.08 ಕೋಟಿ ವೆಚ್ಚದಲ್ಲಿ ಕಲ್ಬುರ್ಗಿಯ ಚಿಂಚೋಳಿ ವನ್ಯಜೀವಿ ಅಭಯಾರಣ್ಯದಲ್ಲಿ ರೆಸಾರ್ಟ್, ವಾಟರ್ ಸ್ಪೋರ್ಟ್ಸ್, ಟ್ರೆಕ್ಕಿಂಗ್, 17.13 ಕೋಟಿ ರೂ.ವೆಚ್ಚದಲ್ಲಿ ಶಿವಮೊಗ್ಗ ಸಕ್ರೆಬೈಲಿನಲ್ಲಿ ಜೈವಿಕ ಉದ್ಯಾನವ ಅಭಿವೃದ್ಧಿ, ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಒತ್ತಿನ್ನಾಣಿಯಲ್ಲಿ ಕಾಟೇಜ್‌ಗಳ ನಿರ್ಮಾಣ ಹಾಗೂ ರಾಮನಗರದ ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದ ಬಳಿ 10 ಎಕರೆ ಜಾಗದಲ್ಲಿ ಸಂಸ್ಥೆಯಿಂದ ಕಾಟೇಜ್, ವಾಟರ್ ಸ್ಪೋರ್ಟ್ಸ್, ರೆಸ್ಟೋರೆಂಟ್, ಟ್ರೆಕ್ಕಿಂಗ್, ಮೌಂಟನ್ ಕ್ಲೈಂಬಿಂಗ್ ಮತ್ತು ರಾಕ್ ಕ್ಲೈಂಬಿಂಗ್ ನಿರ್ಮಿಸಲಾಗುತ್ತದೆ ಎಂದರು.

ಇನ್ನು ಪ್ರಸ್ತುತ ಪ್ರವಾಸೋದ್ಯಮ ಇಲಾಖೆ, ಕೆಎಸ್‌ಟಿಡಿಸಿ ಹಾಗೂ ಜೆಎಲ್‌ಆರ್ ಸಂಸ್ಥೆಗಳು ಸ್ವಂತ ಕಟ್ಟಡ ಹೊಂದಿಲ್ಲದ ಕಾರಣ ಪ್ರತಿ ವರ್ಷ ಆರು ಕೋಟಿ ಕಟ್ಟಡಕ್ಕೆ ಬಾಡಿಗೆ ಪಾವತಿಸಲಾಗುತ್ತಿದೆ. ಇದನ್ನು ತಡೆಯುವ ಸಲುವಾಗಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಹಲಸೂರಿನಲ್ಲಿ 12.36 ಕೋಟಿ ವೆಚ್ಚದಲ್ಲಿ ಜಾಗ ಖರೀಸಲಾಗಿದ್ದು, ‘ಪ್ರವಾಸಿ ಸೌಧ’ ನಿರ್ಮಿಸಲಾಗುವುದು. ಈ ಮೂಲಕ ಪ್ರವಾಸೋದ್ಯಮ ನಿರ್ದೇಶನಾಲಯ, ಕೆಎಸ್‌ಟಿಡಿಸಿ, ಕೆಟಿಐಎಲ್ ಮತ್ತು ಜೆ.ಎಲ್.ಆರ್ ಕಚೇರಿಗಳನ್ನು ಒಂದೇ ಸೂರಿನಡಿ ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು. ಅಲ್ಲದೆ, ಸದರಿ ಕಟ್ಟಡದಲ್ಲಿ ರಾಜ್ಯದ ಪ್ರವಾಸಕ್ಕಾಗಿ ಆಗಮಿಸುವ ಪ್ರವಾಸಿಗರಿಗೆ ಕೈಮಗ್ಗ ನೇಕಾರರು ತಯಾರಿಸಿದ ವಸ್ತುಗಳು, ಮೈಸೂರು ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಷನ್ ಮತ್ತು ಕರಕುಶಲ ನಿಗಮದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ಸಚಿವರು ವಿವರಿಸಿದರು.

ಸಂಸ್ಥೆಯ ರೆಸಾರ್ಟ್ಸ್ ಗಳಿಗೆ ಭೇಟಿ ನೀಡುವ ಅತಿಥಿಗಳಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣದ ಸೇವೆ ಒದಗಿಸಲು ಮೆ.ಫ್ಲೈ ಬ್ಲೇಡ್ ಸಂಸ್ಥೆಯೊಂದಿಗೆ ಎರಡು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಜೆಎಲ್‌ಆರ್‌ನಲ್ಲಿ ವಾಸ್ತವ್ಯ ಹೂಡುವ ಹೆಲಿಕಾಪ್ಟರ್ ಸೇವೆ ಪಡೆಯುವ ಅತಿಥಿಗಳಿಗೆ ಸಂಸ್ಥೆ ಪ್ರಯಾಣ ದರದಲ್ಲಿ ರಿಯಾಯಿತಿ ಸಿಗಲಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com