ರಾಜ್ಯದಲ್ಲಿ ಆಪಲ್ ಫೋನ್ ತಯಾರಿಕಾ ಘಟಕ ಸ್ಥಾಪನೆಗೆ ಸ್ಥಳ ವೀಕ್ಷಣೆ; ಫಾಕ್ಸ್ ಕಾನ್ ನಿಯೋಗದೊಂದಿಗೆ ಅಶ್ವತ್ಥ ನಾರಾಯಣ ಮಾತುಕತೆ

ಫಾಕ್ಸ್‌ಕಾನ್‌ ಸಮೂಹದ ಸಿಇಒ ಮತ್ತು ಅಧ್ಯಕ್ಷ ಯಂಗ್‌ ಲಿಯು ನೇತೃತ್ವದ ಉನ್ನತ ಮಟ್ಟದ ನಿಯೋಗವು ರಾಜ್ಯದಲ್ಲಿ ಆಪಲ್‌ ಫೋನ್‌ ತಯಾರಿಕಾ ಘಟಕ ಸ್ಥಾಪಿಸುವ ಸಂಬಂಧ ಸ್ಥಳ ವೀಕ್ಷಣೆಗೆ ಆಗಮಿಸಿದ್ದು, ಐಟಿ-ಬಿಟಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರೊಂದಿಗೆ ಶುಕ್ರವಾರ ಮೊದಲ ಸುತ್ತಿನ ಚರ್ಚೆ ನಡೆಸಿತು.
ಫಾಕ್ಸ್ ಕಾನ್ ನಿಯೋಗದೊಂದಿಗೆ ಅಶ್ವತ್ಥ ನಾರಾಯಣ
ಫಾಕ್ಸ್ ಕಾನ್ ನಿಯೋಗದೊಂದಿಗೆ ಅಶ್ವತ್ಥ ನಾರಾಯಣ
Updated on

ಬೆಂಗಳೂರು: ಜಗತ್ತಿನ ಮುಂಚೂಣಿ ಕಂಪನಿಗಳಲ್ಲಿ ಒಂದಾಗಿರುವ ತೈವಾನ್‌ ಮೂಲದ ಫಾಕ್ಸ್‌ಕಾನ್‌ ಸಮೂಹದ ಸಿಇಒ ಮತ್ತು ಅಧ್ಯಕ್ಷ ಯಂಗ್‌ ಲಿಯು ನೇತೃತ್ವದ ಉನ್ನತ ಮಟ್ಟದ ನಿಯೋಗವು ರಾಜ್ಯದಲ್ಲಿ ಆಪಲ್‌ ಫೋನ್‌ ತಯಾರಿಕಾ ಘಟಕ ಸ್ಥಾಪಿಸುವ ಸಂಬಂಧ ಸ್ಥಳ ವೀಕ್ಷಣೆಗೆ ಆಗಮಿಸಿದ್ದು, ಐಟಿ-ಬಿಟಿ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರೊಂದಿಗೆ ಶುಕ್ರವಾರ ಮೊದಲ ಸುತ್ತಿನ ಚರ್ಚೆ ನಡೆಸಿತು. ಈ ನಿಯೋಗದಲ್ಲಿ ಕಂಪನಿಯ 17 ಉನ್ನತಾಧಿಕಾರಿಗಳು ಇದ್ದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಿಯೋಗವನ್ನು ಬರಮಾಡಿಕೊಂಡ ಸಚಿವರು, ರಾಜ್ಯದಲ್ಲಿ ಐಟಿ, ತಾಂತ್ರಿಕ ಶಿಕ್ಷಣ, ಕೌಶಲ್ಯಾಭಿವೃದ್ಧಿ, ನುರಿತ ಮಾನವ ಸಂಪನ್ಮೂಲ, ಉದ್ಯಮಗಳು ನೀಡುತ್ತಿರುವ ಸಹಭಾಗಿತ್ವ ಮತ್ತು ಇಲ್ಲಿರುವ ಅತ್ಯುತ್ತಮ ಕಾರ್ಯ ಪರಿಸರ ಕುರಿತು ಮನದಟ್ಟು ಮಾಡಿಕೊಟ್ಟರು.

ಆಪಲ್ ಫೋನ್‌ ತಯಾರಿಕೆಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಫಾಕ್ಸ್‌ಕಾನ್‌ ಕಂಪನಿಯು ರಾಜ್ಯದಲ್ಲಿ ವಿಮಾನ ನಿಲ್ದಾಣದ ಸಮೀಪವೇ  ಘಟಕ ತೆರೆಯುವ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಕಂಪನಿಗೆ ದೊಡ್ಡಬಳ್ಳಾಪುರದ ಕೆಐಎಡಿಬಿ ಪ್ರದೇಶದಲ್ಲಿ 300 ಎಕರೆ ಜಾಗ ತೋರಿಸಲಾಗುವುದು. ಕಂಪನಿಯು ಇಲ್ಲಿ ಹೂಡಿಕೆ ಮಾಡಿದರೆ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಜೊತೆಗೆ, ಕಂಪನಿಗೂ ಇಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಐಟಿಐ, ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಪಠ್ಯಕ್ರಮಗಳನ್ನು ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಇಡಿಯಾಗಿ ಪರಿಷ್ಕರಿಸಲಾಗಿದೆ. ನಮ್ಮಲ್ಲಿ 270 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಇವುಗಳಿಂದ ಪ್ರತೀವರ್ಷ 1.50 ಲಕ್ಷ ಪದವೀಧರರು ಹೊರಬರುತ್ತಿದ್ದಾರೆ. ಇದಲ್ಲದೆ ಜಿಟಿಟಿಸಿ, ಕೆಜಿಟಿಟಿಐ ತರಹದ ಸಂಸ್ಥೆಗಳ ಮೂಲಕ ಯುವಜನರಿಗೆ ಕೌಶಲ್ಯ ತರಬೇತಿ ಕಡ್ಡಾಯಗೊಳಿಸಲಾಗಿದೆ. ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 25 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದು, ನಮ್ಮಲ್ಲಿ ಒಟ್ಟು 100 ವಿ.ವಿ.ಗಳಿವೆ ಎನ್ನುವ ಅಂಶಗಳನ್ನು ಲಿಯು ಅವರಿಗೆ ಸಚಿವರು ಒದಗಿಸಿದರು.

ಇದಕ್ಕೆ ಸ್ಪಂದಿಸಿದ ಲಿಯು ಅವರು, ಐಟಿ ಮತ್ತಿತರ ತಂತ್ರಜ್ಞಾನ ವಲಯಗಳಲ್ಲಿ ಹಾಗೂ ಬಂಡವಾಳ ಆಕರ್ಷಣೆಯಲ್ಲಿ ಬೆಂಗಳೂರು ಪ್ರಶಸ್ತ ತಾಣವಾಗಿದೆ. ಹಾಗೆಯೇ ಉದ್ಯೋಗಾವಕಾಶಗಳು ಮತ್ತು ಸಂಶೋಧನೆಯ ದೃಷ್ಟಿಯಿಂದಲೂ ಈ ನಗರವು ಎಲ್ಲರನ್ನೂ ಸೆಳೆಯುತ್ತಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಫಾಕ್ಸ್‌ಕಾನ್‌ ಕಂಪನಿಯು ಚೀನಾ, ಭಾರತ, ಜಪಾನ್‌, ವಿಯಟ್ನಾಂ, ಮಲೇಷ್ಯಾ, ಝೆಕ್‌ ರಿಪಬ್ಲಿಕ್‌, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸಂಶೋಧನಾ ಕೇಂದ್ರ ಮತ್ತು ಉತ್ಪಾದನಾ ಘಟಕಗಳನ್ನು ಹೊಂದಿದ್ದು, 54 ಸಾವಿರಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಪಡೆದುಕೊಂಡಿದೆ. ಗುಣಮಟ್ಟಕ್ಕೆ ಹೆಸರಾಗಿರುವ ಕಂಪನಿಯು 2021ರಲ್ಲಿ 206 ಬಿಲಿಯನ್‌ ಡಾಲರ್ ಆದಾಯ ದಾಖಲಿಸಿದೆ ಎಂದು ಅವರು ನುಡಿದರು.

ಕಂಪನಿಯು ಮೊಬೈಲ್‌ ತಯಾರಿಕೆ ಜತೆಗೆ ವಿದ್ಯುಚ್ಚಾಲಿತ ವಾಹನ, ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್, ಡಿಜಿಟಲ್ ಆರೋಗ್ಯ ಮತ್ತು ರೋಬೋಟಿಕ್ಸ್‌ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಮುಖ್ಯವಾಗಿ ಆಧುನಿಕ ಎಲೆಕ್ಟ್ರಾನಿಕ್ ಸಾಧನಗಳು, ಕ್ಲೌಡ್‌, ನೆಟ್‌ವರ್ಕಿಂಗ್‌ಗಳಲ್ಲಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದೆ ಎಂದು ಅವರು ಸಚಿವರಿಗೆ ವಿವರಿಸಿದರು.

ಬಳಿಕ ಬಿಐಎಎಲ್‌ ಪ್ರತಿನಿಧಿಗಳು ಇತ್ತೀಚೆಗೆ ಲೋಕಾರ್ಪಣೆಯಾದ ವಿಮಾನ ನಿಲ್ದಾಣದ ಟರ್ಮಿನಲ್‌-2ನ್ನು ನಿಯೋಗಕ್ಕೆ ತೋರಿಸಿ, ಅದರ ವೈಶಿಷ್ಟ್ಯ ಮತ್ತು ಸಾಮರ್ಥ್ಯಗಳನ್ನು ವಿವರಿಸಿದರು. ಜತೆಗೆ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಿರ್ವಹಿಸುತ್ತಿರುವ ಸರಕು ಸಾಗಣೆ (ಕಾರ್ಗೋ) ವಿಭಾಗದ ಬಗ್ಗೆಯೂ ಮಾಹಿತಿ ನೀಡಲಾಯಿತು.

ರಾಜ್ಯ ಸರಕಾರದ ಪರವಾಗಿ ಐಟಿ ಬಿಟಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‍‌, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್‌ ಕೃಷ್ಣ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com