ವಿಧಾನಸಭಾ ಚುನಾವಣೆ: ಕುರುಬ ಸಮುದಾಯಕ್ಕೆ 40 ಸೀಟು ಮೀಸಲಿಡುವಂತೆ ಆಗ್ರಹ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಕ್ಷತ್ರಿಯ ಸಮಾಜದ ಬೇಡಿಕೆಗಳ ಬಳಿಕ ಇದೀಗ ಕರ್ನಾಟಕ ಪ್ರದೇಶ ಕುರುಬರ ಸಂಘವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯಕ್ಕೆ 40 ಸೀಟುಗಳನ್ನು ಮೀಸಲಿಡುವಂತೆ ಆಗ್ರಹಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಕ್ಷತ್ರಿಯ ಸಮಾಜದ ಬೇಡಿಕೆಗಳ ಬಳಿಕ ಇದೀಗ ಕರ್ನಾಟಕ ಪ್ರದೇಶ ಕುರುಬರ ಸಂಘವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯಕ್ಕೆ 40 ಸೀಟುಗಳನ್ನು ಮೀಸಲಿಡುವಂತೆ ಆಗ್ರಹಿಸಿದೆ.

ಬುಧವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಪ್ರಭಾರ ಅಧ್ಯಕ್ಷ ಬಿ.ಸುಬ್ರಮಣ್ಯ, ರಾಜ್ಯದಲ್ಲಿ 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕುರುಬ ಸಮಾಜದ ಅಭ್ಯರ್ಥಿಗಳು ಗೆಲ್ಲುವ ಸಾಮರ್ಥ್ಯವಿದ್ದರೂ ಹಲವು ದಶಕಗಳಿಂದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸೂಕ್ತ ಪ್ರಾತಿನಿಧ್ಯ ನೀಡದೇ ಸಮಾಜವನ್ನು ಕೇವಲ ಮತದಾನಕ್ಕಾಗಿ ಉಪಯೋಗಿಸಿಕೊಳ್ಳುತ್ತಿವೆ ಎಂದು ಹೇಳಿದರು.

ರಾಜ್ಯದಲ್ಲಿ ಕುರುಬ ಸಮುದಾಯವು ಮೂರನೇ ಪ್ರಬಲ ಜಾತಿಯಾಗಿದ್ದು, ಸುಮಾರು 75 ಲಕ್ಷ ಜನಸಂಖ್ಯೆ ಇದೆ. ರಾಜ್ಯದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಯಾವುದೇ ಪಕ್ಷಕ್ಕೆ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಹೀಗಾಗಿ ಸಮುದಾಯಕ್ಕೆ 40 ಸೀಟುಗಳನ್ನು ಮೀಸಲಿಡುವಂತೆ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

“ಕುರುಬ ಸಮುದಾಯದ ಅಭ್ಯರ್ಥಿಗಳು 40 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದರೂ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಚುನಾವಣೆ ಗೆಲ್ಲಲು ಮಾತ್ರ ಸಮುದಾಯವನ್ನು ಬಳಸಿಕೊಳ್ಳುತ್ತಿವೆ. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಕನಿಷ್ಠ 40 ಕುರುಬರನ್ನು ತಮ್ಮ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 20 ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಜೆಡಿಎಸ್ 11 ಅಭ್ಯರ್ಥಿಗಳಿಗೆ ಮತ್ತು ಬಿಜೆಪಿ ಐವರಿಗೆ ಟಿಕೆಟ್ ನೀಡಿದೆ. ಇದರಿಂದ ಸಮುದಾಯಕ್ಕೆ ನೋವಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಪಕ್ಷಗಳು ಕನಿಷ್ಠ 40 ಸೀಟುಗಳನ್ನು ಸಮುದಾಯಕ್ಕೆ ನೀಡಬೇಕು ಎಂದು ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com