ಹಳೆಯ ಪಿಂಚಣಿ ಯೋಜನೆ: ಅಧ್ಯಯನ ನಡೆಸಲು ಶೀಘ್ರದಲ್ಲೇ ರಾಜಸ್ಥಾನಕ್ಕೆ ಸಮಿತಿ ರವಾನಿಸಲು ಸರ್ಕಾರ ಸಿದ್ಧತೆ!

ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಪುನರ್ ಸ್ಥಾಪಿಸುವ ವಿಚಾರ ಸಂಬಂಧ ಅಧ್ಯಯನ ನಡೆಸಲು ರಾಜಸ್ಥಾನ ರಾಜ್ಯಕ್ಕೆ ಸಮಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರವಾನಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ
Updated on

ಬೆಂಗಳೂರು: ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಪುನರ್ ಸ್ಥಾಪಿಸುವ ವಿಚಾರ ಸಂಬಂಧ ಅಧ್ಯಯನ ನಡೆಸಲು ರಾಜಸ್ಥಾನ ರಾಜ್ಯಕ್ಕೆ ಸಮಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರವಾನಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ರಾಜ್ಯದಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಲಿದ್ದು, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿಯೂ ಚುನಾವಣೆ ನಡೆಯಲಿದೆ. ಹೀಗಾಗಿ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತಿರುವ ಬಿಜೆಪಿ, ಯಾವುದೇ ರೀತಿಯಲ್ಲೂ ಎಡವಂತೆ ನಿರ್ಧಾರಗಳನ್ನು ಕೈಗೊಳ್ಳಲು ಮುಂದಾಗಿದೆ.

ಒಂದು ವೇಳೆ ಒಪಿಎಸ್ ಬಗ್ಗೆ ಸರ್ಕಾರ ತದ್ವಿರುದ್ಧವಾಗಿ ನಿರ್ಧಾರ ತೆಗೆದುಕೊಂಡಿದ್ದೇ ಆದರೆ, ಅದು ಕೇವಲ ವಿಧಾನಸಭಾ ಚುನಾವಣೆಗಳಷ್ಟೇ ಅಲ್ಲ, ಮುಂದಿನ ಲೋಕಸಭಾ ಚುನಾವಣೆಯ ಮೇಲೂ ದೊಡ್ಡ ಪರಿಣಾಮ ಬೀರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈಗಾಗಲೇ ರಾಜ್ಯ ಸರ್ಕಾರಿ ನೌಕರರು ಒಪಿಎಸ್ ಪುನರ್ ಸ್ಥಾಪನೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಸಮಸ್ಯೆಯನ್ನು ಪರಿಶೀಲಿಸಲು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿಯನ್ನು ರಚನೆ ಮಾಡಿದ್ದಾರೆ.

ಸಮಿತಿಯಲ್ಲಿ ಮೂವರು ಐಎಎಸ್ ಅಧಿಕಾರಿಗಳನ್ನೂ ಕೂಡ ಸದಸ್ಯರನ್ನಾಗಿ ಮಾಡಲಾಗಿದೆ. ಈ ಸಮಿತಿ ಶೀಘ್ರದಲ್ಲೇ ರಾಜಸ್ಥಾನಕ್ಕೆ ಭೇಟಿ ನೀಡಲಿದೆ. ರಾಜಸ್ಥಾನದ ನಂತರ ಈ ಸಮಿತಿ ಛತ್ತೀಸ್‌ಗಢಕ್ಕೆ ಭೇಟಿ ನೀಡಲಿದೆ. ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ ಒಪಿಎಸ್ ಘೋಷಿಸಿದೆ. ನಂತರ ರಾಜ್ಯದ ಸಮಿತಿಯು ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಾರ್ಖಂಡ್ ಗೆ ಭೇಟಿ ನೀಡಲಿದೆ.

ರಾಜಸ್ಥಾನದ ಅಧಿಕೃತ ಮೂಲಗಳ ಪ್ರಕಾರ, ಸಮಿತಿಯು ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅಖಿಲ್ ಅರೋರಾ, ಸಿಎಂ ಪ್ರಧಾನ ಕಾರ್ಯದರ್ಶಿ ಕುಲದೀಪ್ ರಾಂಕಾ ಅವರನ್ನು ಭೇಟಿ ಮಾಡಲಿದೆ ಎಂದು ತಿಳಿದುಬಂದಿದೆ. ಸಮಿತಿಯು ಏಪ್ರಿಲ್ 30 ರೊಳಗೆ ರಾಜ್ಯ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಬೇಕಾಗಿದೆ.

ಹಳೆಯ ಪಿಂಚಣಿ ಯೋಜನೆಯು ವಿವಾದದ ಪ್ರಮುಖ ಅಂಶವಾಗಿ ಮಾರ್ಪಟ್ಟಿದ್ದು, ಕೇಂದ್ರದ ಬಿಜೆಪಿ ಆಡಳಿತ ಮತ್ತು ರಾಜಸ್ಥಾನ ಸರ್ಕಾರದ ನಡುವೆ ಬಿಕ್ಕಟ್ಟನ್ನು ಸೃಷ್ಟಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಮಾರ್ಚ್-2022ರಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜಸ್ಥಾನದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದ್ದರು. ಇವತ್ತಲ್ಲದಿದ್ದರೆ ನಾಳೆ ಪ್ರಧಾನಿ ಮೋದಿ ಅವರು ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿಯೂ ಒಪಿಎಸ್ ಅನ್ನು ಜಾರಿಗೆ ತರಲೇಬೇಕಾಗುತ್ತದೆ ಎಂದು ಗೆಹ್ಲೋಟ್ ಅವರು ಹಲವು ಬಾರಿ ಬಿಜೆಪಿಗೆ ಸವಾಲು ಹಾಕುತ್ತಲೇ ಇದ್ದಾರೆ. ಆದರೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪಿಎಸ್ ಆರ್ಥಿಕತೆಗೆ ಮಾರಕ ಎಂದು ಬಣ್ಣಿಸಿದ್ದಾರೆ.

ಕಳೆದ ತಿಂಗಳು ಜೈಪುರದಲ್ಲಿ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮಾತನಾಡಿದ್ದ ನಿರ್ಮಲಾ ಸೀತಾರಾಮನ್ ಅವರು, ಹೊಸ ಪಿಂಚಣಿ ಯೋಜನೆಗಳ (ಎನ್‌ಪಿಎಸ್) ಅಡಿಯಲ್ಲಿ ಕೇಂದ್ರದ ಟ್ರಸ್ಟ್‌ನಲ್ಲಿ ಠೇವಣಿ ಇಟ್ಟಿರುವ 45,000 ಕೋಟಿ ರೂ.ಗಳಲ್ಲಿ ರಾಜಸ್ಥಾನಕ್ಕೆ ಹಣವನ್ನು ನೀಡುವುದಿಲ್ಲ ಎಂದು ಹೇಳಿದ್ದರು.  

ಸೀತಾರಾಮನ್ ಅವರ ಹೇಳಿಕೆಯು ಎನ್‌ಪಿಎಸ್ ಅನ್ನು ರದ್ದುಗೊಳಿಸುವ ಮತ್ತು ಒಪಿಎಸ್ ಅನ್ನು ಜಾರಿಗೊಳಿಸುವ ಗೆಹ್ಲೋಟ್ ಅವರ ಮಹತ್ವಾಕಾಂಕ್ಷೆಯ ಯೋಜನೆಗೆ ದೊಡ್ಡ ಹಿನ್ನಡೆಯುಂಟಾದಂತಾಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com