ಸಂದರ್ಶನ: ಸಿಬ್ಬಂದಿಗಳ ಕೊರತೆ ಸರ್ಕಾರಿ ನೌಕರರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ;  ಸಿ.ಎಸ್.ಷಡಕ್ಷರಿ

7ನೇ ವೇತನ ಆಯೋಗದ ವರದಿಯ ಜಾರಿಯು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರ ಘೋಷಿಸಬೇಕು ಹಾಗೂ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲೇಬೇಕೆಂದು ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿ, ಮೊದಲ ಹಂತದಲ್ಲಿ ಸರ್ಕಾರಿ ನೌಕರರು ಯಶಸ್ಸು ಗಳಿಸಿದರು,
ಸಿಎಸ್ ಷಡಕ್ಷರಿ.
ಸಿಎಸ್ ಷಡಕ್ಷರಿ.

7ನೇ ವೇತನ ಆಯೋಗದ ವರದಿಯ ಜಾರಿಯು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಂತರ ಪರಿಹಾರ ಘೋಷಿಸಬೇಕು ಹಾಗೂ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲೇಬೇಕೆಂದು ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಿ, ಮೊದಲ ಹಂತದಲ್ಲಿ ಸರ್ಕಾರಿ ನೌಕರರು ಯಶಸ್ಸು ಗಳಿಸಿದರು, ಈ ಯಶಸ್ಸಿಗೆ  ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್‌. ಷಡಾಕ್ಷರಿ ಅವರು ಪ್ರಮುಖ ಕಾರಣಕರ್ತರಾಗಿದ್ದಾರೆ.

ಪ್ರತಿಭಟನೆಯ ನೇತೃತ್ವವನ್ನು ಷಡಾಕ್ಷರಿ ಅವರು ವಹಿಸಿದ್ದರು. ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ಷಡಾಕ್ಷರಿಯವರು ಯಶಸ್ಸಾಗಿದ್ದರು. ನೌಕರರ ಮುಷ್ಕರಕ್ಕೆ ಮಣಿದ ಸರ್ಕಾರ ಸರ್ಕಾರಿ ನೌಕರರ ವೇತನವನ್ನು ಶೇ.17ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು.

ಮುಷ್ಕರ ಹಾಗೂ ಸರ್ಕಾರಿ ನೌಕರರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಷಡಕ್ಷರಿಯವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಪ್ರತಿಭಟನೆ ನಡೆಸಿ ಸರಕಾರವನ್ನು ಸ್ತಬ್ಧಗೊಳಿಸುವ ಅಗತ್ಯ ಏನಿತ್ತು?
ಇತರ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಹೋಲಿಸಿದರೆ ನಾವು ಕಡಿಮೆ ಸಂಬಳ ಪಡೆಯುತ್ತಿದ್ದೇವೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿ, ಮನವಿ ಮಾಡಿಕೊಂಡಿದ್ದೆವು, ಆದರೆ, ಅವರು ನಮ್ಮನ್ನು ನಿರ್ಲಕ್ಷಿಸಿದ್ದರು. ಬೇರೆ ದಾರಿಯಿಲ್ಲದೆ ಪ್ರತಿಭಟನೆ ನಡೆಸಬೇಕಾಯಿತು.

ಶೇಕಡಾ 25 ರಷ್ಟು ವೇತನ ಹೆಚ್ಚಳವನ್ನು ನಿರೀಕ್ಷಿಸಿದ್ದರೂ, ಸರ್ಕಾರವು ಅವರ ಮೂಲ ವೇತನದಲ್ಲಿ ಶೇ.17 ಹೆಚ್ಚಳವನ್ನು ಘೋಷಿಸಿದೆ. ಆದರೂ ನಮ್ಮ ನೌಕರರು ತೃಪ್ತಿ ವ್ಯಕ್ತಪಡಿಸಿದ್ದಾರೆ. ನಮ್ಮ ಮುಷ್ಕರ ಮುಂದುವರಿದಿದ್ದರೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಿಗೆ ತೊಂದರೆಯಾಗುತ್ತಿತ್ತು ಮತ್ತು ವೈದ್ಯಕೀಯ ಸೇವೆಗಳಿಗೆ ತೊಂದರೆಯಾಗುತ್ತಿತ್ತು. ಹೀಗಾಗಿ ಮುಷ್ಕರವನ್ನು ಹಿಂಪಡೆದುಕೊಂಡೆವು. ನಮಗೂ ಕುಟುಂಬಗಳಿರುವುದರಿಂದ ಅವರ ಹಿತಾಸಕ್ತಿಗಳೂ ಮುಖ್ಯವಾಗಿರುವುದರಿಂದ ಸಂಧಾನಕ್ಕೆ ಒಪ್ಪಿಕೊಂಡೆವು.

ಪ್ರತಿಭಟನೆ ಚಿಂತನೆಗಳು ಸರ್ಕಾರಕ್ಕೆ ತಿಳಿದಿರಲಿಲ್ಲವೇ?
ಮುಖ್ಯಮಂತ್ರಿಗಳಿಗೂ ಕೂಡ ಫೆಬ್ರವರಿ 28ರಂದೇ ಮಾಹಿತಿ ತಿಳಿದುಬಂದಿತ್ತು. ಅದೂ ಕೂಡ ಗುಪ್ತಚರಗಳಿಂದ. ಮುಖ್ಯಮಂತ್ರಿಗಳು ಪ್ರವಾಸದಲ್ಲಿದ್ದರು. ಪ್ರತಿಭಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಬೆಂಗಳೂರಿಗೆ ಬಂದು ರಾತ್ರಿ 9.30ಕ್ಕೆ ಮೊದಲ ಸಭೆ ನಡೆಸಿದ್ದರು. ಈ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಸರಕಾರ ಮತ್ತು ಸರಕಾರಿ ನೌಕರರ ನಡುವೆ ಘರ್ಷಣೆ ನಡೆದರೆ ಆರೋಗ್ಯ ಸೇವೆ ಸೇರಿದಂತೆ ಸಾರ್ವಜನಿಕ ಸೇವೆಗಳು ಅಸ್ತವ್ಯಸ್ತಗೊಂಡು ಆದಾಯ ಸಂಗ್ರಹಕ್ಕೆ ತೊಂದರೆಯಾಗುತ್ತದೆ. ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಆ ಸಭೆಯ ನಂತರ, ನಾವು ನಮ್ಮ ಪದಾಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆಯನ್ನು ಪ್ರಾರಂಭಿಸಿದ್ದೆವು. ಮರುದಿನ (ಮಾರ್ಚ್ 1) ಬೆಳಗ್ಗೆ 11.30ಕ್ಕೆ ಶೇ.17ರಷ್ಟು ಮಧ್ಯಂತರ ಹೆಚ್ಚಳ ಮಾಡಿ ಸರ್ಕಾರಿ ಆದೇಶ ಹೊರಡಿಸಿತು.

ರಾಜ್ಯ ಸರ್ಕಾರದ ಹುದ್ದೆಗಳು ಎಷ್ಟು ಖಾಲಿ ಇವೆ? ಇತರ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳಿಗೆ ಹೋಲಿಸಿದರೆ ವೇತನದಲ್ಲಿರುವ ವ್ಯತ್ಯಾಸವೇನು?
ಕರ್ನಾಟಕ ಸರ್ಕಾರಿ ವಲಯದಲ್ಲಿ ಶೇ.39ರಷ್ಟು ಸಿಬ್ಬಂದಿಗಳ ಕೊರತೆಯಿದೆ, ಇದು ಸುಮಾರು 2.55 ಲಕ್ಷ ಹುದ್ದೆಗಳಿಗೆ ಕೆಲಸ ಮಾಡುತ್ತದೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಉದ್ಯೋಗಿಗಳು ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗಿಂತ ನಮ್ಮ ವೇತನವು ಶೇ.14ರಷ್ಟು ಕಡಿಮೆಯಿದೆ, ಆದರೆ, ಕೇರಳ ಸರ್ಕಾರಿ ನೌಕರರು ಕೇಂದ್ರ ಸರ್ಕಾರಿ ನೌಕರರಿಗಿಂತ ಹೆಚ್ಚಿನ ವೇತನವನ್ನು ಪಡೆದುಕೊಳ್ಳತ್ತಿದ್ದಾರೆ. ಈ ವ್ಯತ್ಯಾಸವನ್ನು ಕಡಿಮೆ ಮಾಡಬೇಕೆಂಬುದು ನಮ್ಮ ಬೇಡಿಕೆ.

ಸರ್ಕಾರಿ ನೌಕರರ ಸಂಘವು ವಾರದಲ್ಲಿ ಐದು ದಿನಗಳ ಕೆಲಸವನ್ನೇಕೆ ಒತ್ತಾಯಿಸುತ್ತಿದೆ?
ಕೇಂದ್ರ ಸರ್ಕಾರದಂತೆ ಪ್ರತಿದಿನ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಿ ಶನಿವಾರ ಮತ್ತು ಭಾನುವಾರ ರಜೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೇಳುತ್ತಲೇ ಬಂದಿದ್ದೇವೆ. ಇದರಲ್ಲಿ ಹಲವು ಪ್ರಯೋಜನಗಳಿವೆ. ಇದು ವಾರಾಂತ್ಯದಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತದೆ, ಸರ್ಕಾರಿ ಕಾರುಗಳಲ್ಲಿ ಇಂಧನವನ್ನು ಕಡಿಮೆ ಮಾಡುತ್ತದೆ, ಒಂದು ದಿನದ ವಿದ್ಯುತ್ ಬಳಕೆಯನ್ನೂ ಕಡಿಮೆ ಮಾಡುತ್ತದೆ. ಇದರಿಂದ ಆದಾಯವೂ ಉಳಿತಾಯವಾಗಲಿದೆ.

ಹಳೆಯ ಪಿಂಚಣಿ ಯೋಜನೆಗೆ ಬೇಡಿಕೆ ಏಕೆ?
ನೌಕರರು ಮತ್ತು ಉದ್ಯೋಗದಾತರು ನೀಡುವ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಠೇವಣಿ ಮಾಡಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ ಮತ್ತು ಷೇರುಗಳಿಂದ ಬರುವ ಲಾಭವನ್ನು ಪಿಂಚಣಿಯಾಗಿ ಪಾವತಿಸಲಾಗುತ್ತದೆ.

ಒಂದು ಕಾಲದಲ್ಲಿ ಕೇಂದ್ರ ಪಿಂಚಣಿ ನೀಡದಿರಲು ನಿರ್ಧರಿಸಿತ್ತು. ಅನೇಕ ರಾಜ್ಯಗಳು ಇದನ್ನು ಅಳವಡಿಸಿಕೊಂಡವು ಮತ್ತು ಕರ್ನಾಟಕವು 2006 ರಲ್ಲಿ ಅಳವಡಿಸಿಕೊಂಡಿತ್ತು.. ಇದರೊಂದಿಗೆ 2006 ರ ಮೊದಲು ಕೆಲಸಕ್ಕೆ ಸೇರಿದವರಿಗೆ ಹಳೆಯ ಪಿಂಚಣಿ ಸಿಗುತ್ತದೆ, ಆದರೆ 2006 ರ ನಂತರ ಸೇರಿದವರಿಗೆ ಹೊಸ ಯೋಜನೆಯಡಿ ಪಿಂಚಣಿ ಸಿಗುತ್ತಿದೆ. 2006 ರ ಮೊದಲು ಮತ್ತು ನಂತರ ಸೇರಿದವರ ಪಿಂಚಣಿ ಪ್ರಯೋಜನಗಳ ನಡುವೆ ದೊಡ್ಡ ಅಂತರವಿದೆ. ಹೀಗಾಗಿ ನಮ್ಮ ಸಂಘವು ಈ ಕುರಿತು ಧ್ವನಿ ಎತ್ತಲು ಪ್ರಾರಂಭಿಸಿತು.

ಜಾರ್ಖಂಡ್, ಛತ್ತೀಸ್‌ಗಢ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನಗಳು ಹೊಸ ಯೋಜನೆಯನ್ನು ಹಿಂದಕ್ಕೆ ಪಡೆದಿವೆ. ಇದನ್ನೂ ಒತ್ತಾಯಿಸುತ್ತಿದ್ದೇವೆ, ಆದರೆ, ಸರಕಾರ ಇದಕ್ಕೆ ಕಿವಿಗೊಡಲಿಲ್ಲ. ನಾವು ಪ್ರತಿಭಟನೆ ನಡೆಸಿದ ನಂತರವೇ ಈಗ ಸಮಿತಿ ರಚಿಸಿದೆ. ಈ ಸಮಿತಿ ಎರಡು ತಿಂಗಳೊಳಗೆ ವರದಿ ಸಲ್ಲಿಸಲಿದೆ. ಪರಿಶೀಲನೆಗೆ ನಮ್ಮ ತಂಡವನ್ನೂ ಕಳುಹಿಸುತ್ತಿದ್ದೇವೆ. ಎನ್‌ಪಿಎಸ್ ಅನ್ನು ಒಪಿಎಸ್‌ಗೆ ಹಿಂತಿರುಗಿಸಬೇಕು ಎಂಬುದು ನಮ್ಮ ಆಗ್ರಹ.

ಒಂದೇ ವರ್ಷದಲ್ಲಿ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಸಿಎಂ ಘೋಷಣೆಯ ಬಗ್ಗೆ ನಿಮ್ಮ ಅಭಿಪ್ರಾಯ?
ಸಿಬ್ಬಂದಿ ಕೊರತೆ ಹಾಗೂ ಕೆಲಸದ ಒತ್ತಡದಿಂದ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಉದಾಹರಣೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಮೂರು ಗ್ರಾಮ ಪಂಚಾಯಿತಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಎಲ್ಲ ಸೇವೆಗಳನ್ನು ಪರಿಣಾಮಕಾರಿಯಾಗಿ ಮಾಡುವುದು ಕಷ್ಟವಾಗಿದೆ. ಸರ್ಕಾರಿ ನೌಕರರು ಯಂತ್ರಗಳಲ್ಲ. ಕಂದಾಯ ಇಲಾಖೆಯಲ್ಲಿಯೂ ಇದೇ ಪರಿಸ್ಥಿತಿ ಇದ್ದು, ಹಲವು ನೌಕರರು ರಕ್ತದೊತ್ತಡ, ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ.

ಈಗಿರುವ ಸಿಬ್ಬಂದಿಯಿಂದಲೇ ನಿರ್ವಹಣೆ ಮಾಡಲು ಸರಕಾರ ಪ್ರಯತ್ನಿಸುತ್ತಿದ್ದು, ಕ್ಷೇತ್ರ ಸಿಬ್ಬಂದಿಯನ್ನು ನೇಮಿಸುವಂತೆ ಮನವಿ ಮಾಡುತ್ತಿದ್ದೇವೆ. ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಸರ್ಕಾರಕ್ಕೆ ಖರ್ಚು ವೆಚ್ಚಗಳು ಮತ್ತು ನ್ಯಾಯಾಲಯಗಳಲ್ಲಿ ಪ್ರಕರಣಗಳು ಸೇರಿದಂತೆ ಅಡೆತಡೆಗಳಿವೆ. ಈ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸುವಂತೆ ನಾವು ನ್ಯಾಯಾಲಯಗಳಿಗೆ ಮನವಿ ಮಾಡುತ್ತೇವೆ. ಈ ನಡುವೆ ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸಮಗ್ರ ವೈದ್ಯಕೀಯ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ. ಇದರಿಂದ ನೌಕರರು ಒಂದು ರೂಪಾಯಿ ಪಾವತಿಸದೆ ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.

ಕೆಲಸದ ಸಮಯದಲ್ಲಿ ಸಿಬ್ಬಂದಿ ಲಭ್ಯವಿಲ್ಲ ಮತ್ತು ಕಡತಗಳು ಬಾಕಿ ಉಳಿದಿವೆ ಎಂಬ ದೂರುಗಳಿವೆ?
ಹಲವಾರು ಸೇವೆಗಳನ್ನು ‘ಸಕಾಲ’ ವ್ಯವಸ್ಥೆಯಡಿ ತರಲಾಗಿದ್ದು, ವಿಳಂಬಕ್ಕೆ ಕಾರಣರಾದ ನೌಕರರು ದಂಡ ತೆರಬೇಕಾಗಿರುವುದರಿಂದ ವಿಳಂಬಕ್ಕೆ ಯಾವುದೇ ಅವಕಾಶವಿಲ್ಲ. ಕಡತಗಳನ್ನು ತೆರವುಗೊಳಿಸುವಂತೆ ಹಿರಿಯ ಅಧಿಕಾರಿಗಳಿಂದಲೂ ಒತ್ತಡವಿದೆ. ಹೆಚ್ಚಿನ ಸೇವೆಗಳು ಆನ್‌ಲೈನ್ ಆಗಿರುವುದರಿಂದ, ಸರ್ಕಾರಿ ನೌಕರರು ಕಚೇರಿ ಸಮಯದ ನಂತರವೂ ಮನೆಯಿಂದಲೇ ಕೆಲಸ ಮಾಡುವುದನ್ನು ಮುಂದುವರಿಸುತ್ತಿದ್ದಾರೆ. ಕಡತಗಳು ಬಾಕಿ ಉಳಿಯುವ ಪ್ರಶ್ನೆಗಳೇ ಇಲ್ಲ. ಪಠ್ಯಕ್ರಮಗಳನ್ನು ಪೂರ್ಣಗೊಳಿಸದಿದ್ದರೆ ವಿದ್ಯಾರ್ಥಿಗಳೇ ಸಹ ಶಿಕ್ಷಕರನ್ನು ಪ್ರಶ್ನಿಸುತ್ತಾರೆ. ಅಲ್ಲದೆ, ಸಂವಹನವು ಎಷ್ಟು ವೇಗವಾಗಿದೆ ಎಂದರೆ ಜನರು ನೇರವಾಗಿ ಹಿರಿಯ ಅಧಿಕಾರಿಗಳು ಅಥವಾ ಚುನಾಯಿತ ಪ್ರತಿನಿಧಿಗಳನ್ನು ಫೋನ್ ಅಥವಾ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕಿಸುತ್ತಾರೆ. ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಬದಲು ಬೇಗ ಕಡತಗಳನ್ನು ತೆರವುಗೊಳಿಸುವ ಮನಸ್ಸು ಸರ್ಕಾರಿ ನೌಕರರಿಗೆ ಇದೆ. ನೀವು ಗಮನಿಸಿದರೆ, ವಿಧಾನಸೌಧದಲ್ಲಿ ಕೆಲಸ ಮಾಡುವ ಅನೇಕರು ಕಚೇರಿಯಿಂದ ಹೊರಡುವಾಗ ಬ್ಯಾಗ್ ತೆಗೆದುಕೊಂಡು ಹೋಗುತ್ತಾರೆ. ಅದರಲ್ಲಿ ನಗದಿನ ಬದಲಿಗೆ ಕಡತಗಳಿರುವುದು ಕಂಡು ಬರುತ್ತದೆ. ಮನೆಗೆ ಹೋದ ಬಳಿಕವೂ ಅವರು ಒಂದರಿಂದ ಎರಡು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ವಿಧಾನಸೌಧದಲ್ಲಿ ಪ್ರತಿದಿನ ರಾತ್ರಿ 8.30-9ರವರೆಗೆ ಹಲವರು ಕೆಲಸ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಒತ್ತಡ ತುಂಬಾ ಹೆಚ್ಚಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂಬ ಆರೋಪವಿದೆ. ಈ ಚಿತ್ರಣವನ್ನು ಬದಲಾಯಿಸಲು ನಿಮ್ಮ ಯೋಜನೆಗಳೇನು?
ಭ್ರಷ್ಟಾಚಾರವೇ ಇಲ್ಲ ಎಂದು ನಾನು ಹೇಳುವುದಿಲ್ಲ. ಭ್ರಷ್ಟಾಚಾರ ಸರ್ವವ್ಯಾಪಿ. ಆದರೆ ಕೆಲವರ ತಪ್ಪುಗಳಿಗೆ ಇಡೀ ನೌಕರರನ್ನು ದೂರುವುದು ಸರಿಯಲ್ಲ. ‘ಶೇ. 40 ಕಮಿಷನ್’ ಎಂಬ ಇತ್ತೀಚಿನ ಆರೋಪವನ್ನು ರಾಜಕೀಯಗೊಳಿಸಲಾಗಿದ್ದು, ಇದರಲ್ಲಿ ಸರ್ಕಾರಿ ನೌಕರರ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನೀವು ಲಂಚ ಏಕೆ ನೀಡುತ್ತೀರಿ ಎಂದು ನಾನು ಸಾರ್ವಜನಿಕರನ್ನು ಕೇಳಲು ಬಯಸುತ್ತೇನೆ. ಸಕಾಲ, ಆರ್ ಟಿಐ ಸೇರಿದಂತೆ ಹಲವು ಸೌಲಭ್ಯಗಳಿದ್ದು, ಜನರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ನಿಮ್ಮ ಕೆಲಸ ಆಗದಿದ್ದರೆ ಹಿರಿಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಅಥವಾ ಸಚಿವರನ್ನು ಸಂಪರ್ಕಿಸಿ. ಲೋಕಾಯುಕ್ತಕ್ಕೂ ದೂರು ಸಲ್ಲಿಸಬಹುದು.

ಸರ್ಕಾರಿ ನೌಕರರಲ್ಲೂ ಜಾಗೃತಿ ಮೂಡಿಸುತ್ತಿದ್ದೇವೆ. ನಾನು ಸಾವಿರಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದೇನೆ ಮತ್ತು ಸರ್ಕಾರಿ ನೌಕರರಿಗೆ ಸಮಾಜದಲ್ಲಿ ಗೌರವವಿದೆ ಮತ್ತು ಸಂಬಳವನ್ನು ಖಾತರಿಪಡಿಸುತ್ತದೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ವಿದ್ಯಾವಂತ ನೌಕರರನ್ನು ಮನವಿ ಮಾಡಿಕೊಳ್ಳುತ್ತೇನೆ.

ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಳ್ಳುವುದರಿಂದ ಉಂಟಾಗುವ ಪರಿಣಾಮಗಳು, ಅವರ ಕುಟುಂಬ ಸದಸ್ಯರು ಎದುರಿಸಬೇಕಾದ ಅವಮಾನ ಮತ್ತು ಅವರು ತಮ್ಮ ಉದ್ಯೋಗ ಮತ್ತು ನಿವೃತ್ತಿ ಪ್ರಯೋಜನಗಳನ್ನು ಕಳೆದುಕೊಳ್ಳಬಹುದು. ನಮ್ಮ ಸಭೆಗಳಲ್ಲಿ ಭಾಗವಹಿಸಲು ಮತ್ತು ಸರ್ಕಾರಿ ನೌಕರರಿಗೆ ಶಿಕ್ಷಣ ನೀಡಲು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರನ್ನೂ ಸಂಪರ್ಕಿಸಿದ್ದೇನೆ.

ಉದ್ಯೋಗಿಗಳ ಕೌಶಲ್ಯಗಳನ್ನು ನವೀಕರಿಸಲು ಖಾಸಗಿ ಕಂಪನಿಗಳಲ್ಲಿ ತರಬೇತಿ ಇರುತ್ತದೆ. ಸರ್ಕಾರಿ ಸಿಬ್ಬಂದಿಗೆ ಇದು ಅಗತ್ಯವಿದೆ ಎಂದು ನೀವು ಭಾವಿಸುವುದಿಲ್ಲವೇ?
ಶೇ.39 ರಷ್ಟು ಹುದ್ದೆ ಖಾಲಿ ಇರುವುದರಿಂದ ನೇಮಕಾತಿ ಆದೇಶ ಪಡೆದವರಿಗೆ ಮೊದಲ ದಿನವೇ ಕೆಲಸಕ್ಕೆ ಬರುವಂತೆ ಸೂಚಿಸಲಾಗುತ್ತದೆ. ಪೊಲೀಸ್ ಇಲಾಖೆ ಹೊರತುಪಡಿಸಿ ಯಾವುದೇ ಇಲಾಖೆಯಲ್ಲಿಯೂ ತರಬೇತಿ ನೀಡಲಾಗುತ್ತಿಲ್ಲ. ನೇಮಕಗೊಂಡವರಿಗೆ ಎರಡು ತಿಂಗಳ ತರಬೇತಿ ನೀಡಬೇಕು ಎಂಬ ನಿಯಮವಿದ್ದರೂ ಅದು ಪಾಲನೆಯಾಗುತ್ತಿಲ್ಲ. ಜಿಲ್ಲಾ ತರಬೇತಿ ಸಂಸ್ಥೆಗಳಿವೆ, ಆದರೆ, ಅಲ್ಲಿ ಉಪನ್ಯಾಸಗಳಿಲ್ಲ. ಮೈಸೂರಿನಲ್ಲಿರುವ ಆಡಳಿತ ತರಬೇತಿ ಸಂಸ್ಥೆಯ ಮಾದರಿಯಲ್ಲಿ ಅವರನ್ನು ಮೇಲ್ದರ್ಜೆಗೇರಿಸಲು ಮತ್ತು ಎಲ್ಲಾ ನೇಮಕಾತಿಗಳಿಗೆ ಎರಡು ತಿಂಗಳ ವಸತಿ ತರಬೇತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈ ಬಗ್ಗೆ ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ ಎಂದು ಆಶಿಸುತ್ತೇನೆ.

ಸರಕಾರ ಕೆಲವು ಕಾಮಗಾರಿಗಳನ್ನು ಹೊರಗುತ್ತಿಗೆ ನೀಡುತ್ತಿದೆ. ಇದು ಭ್ರಷ್ಟಾಚಾರಕ್ಕೆ ಕಾರಣವಾಗುವುದಿಲ್ಲವೇ?
ಹೊರಗುತ್ತಿಗೆ ಆರ್ಥಿಕವಾಗಿ ಲಾಭದಾಯಕವಾಗಿರುವುದರಿಂದ ಚಾಲಕರು, ಡೇಟಾ ಎಂಟ್ರಿ ಆಪರೇಟರ್‌ಗಳು ಮತ್ತು ಗ್ರೂಪ್ ಡಿ ಕೆಲಸಗಾರರಂತಹ ಕೆಲವು ಉದ್ಯೋಗಗಳನ್ನು ಸರ್ಕಾರ ಹೊರಗುತ್ತಿಗೆ ನೀಡಿದೆ. ದುರದೃಷ್ಟವಶಾತ್, ಟೆಂಡರ್ ಪಡೆದ ಮತ್ತು ಮಾನವಶಕ್ತಿಯನ್ನು ಪೂರೈಸುವ ಕಂಪನಿಗಳು ಕಾರ್ಮಿಕರಿಗೆ ಇಎಸ್‌ಐ, ಇಪಿಎಫ್ ಮತ್ತು ಅಪಘಾತ ಪರಿಹಾರದಂತಹ ಪ್ರಯೋಜನಗಳನ್ನು ಪಾವತಿಸದೆ ಶೋಷಣೆ ಮಾಡುತ್ತಿವೆ. 11 ತಿಂಗಳಿಗೊಮ್ಮೆ ಗುತ್ತಿಗೆ ನವೀಕರಣ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟ ಆದೇಶವಿದ್ದರೂ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲು ಅವಕಾಶವಿಲ್ಲ ಎಂದು ಕೆಲ ಕಂಪನಿಗಳು ಕಾರ್ಮಿಕರಿಗೆ ಸರಕಾರದಲ್ಲಿ ಕಾಯಂ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಹಣ ವಸೂಲಿ ಮಾಡುತ್ತಿವೆ.

ವೇತನವನ್ನು ಶೇ.40 ಹೆಚ್ಚಳಕ್ಕೆ ಒತ್ತಾಯಿಸಿದ ನಿಮ್ಮ ಸಂಘ ಮತ್ತು ಕರ್ನಾಟಕ ಸರ್ಕಾರಿ ಸಚಿವಾಲಯದ ನೌಕರರ ಸಂಘದ ನಡುವೆ ಮನಸ್ಥಾಪಗಳಿವೆ ಎಂದು ಹೇಳಲಾಗುತ್ತಿದೆ?
ವಾಸ್ತವವಾಗಿ, ನಮ್ಮ ಬೇಡಿಕೆಯೂ ಶೇ.40 ಹೆಚ್ಚಳಕ್ಕಾಗಿಯೇ ಆಗಿದೆ. ಆದರೆ ಮಧ್ಯಂತರ ವರದಿಯನ್ನು ಸಲ್ಲಿಸಲು ಕನಿಷ್ಠ 45 ದಿನಗಳು ತೆಗೆದುಕೊಳ್ಳುತ್ತದೆ ಎಂದು ವೇತನ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು 30 ದಿನಗಳಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಲಿರುವುದರಿಂದ ಸರ್ಕಾರ ಏನೂ ಮಾಡುವ ಸ್ಥಿತಿಯಲ್ಲಿರದೆ ಸಂಪೂರ್ಣ ಪ್ರಕ್ರಿಯೆ ವಿಳಂಬವಾಗಲಿದೆ. ನಾವು ಮಧ್ಯಂತರ ಪರಿಹಾರಕ್ಕಾಗಿ ನಿರ್ಧರಿಸಿದ್ದೇವೆ. ನಾವು ಕನಿಷ್ಠ ಶೇ.25 ಹೆಚ್ಚಳಕ್ಕೆ ಒತ್ತಾಯಿಸಿದ್ದೇವೆ, ಆದರೆ ಹಣಕಾಸು ಕಾರ್ಯದರ್ಶಿ ಸರ್ಕಾರವು ಶೇ.7 ಕ್ಕಿಂತ ಹೆಚ್ಚು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಹಲವು ಸುತ್ತಿನ ಚರ್ಚೆ ನಡೆಸಿದ ಬಳಿಕ ಮುಖ್ಯಮಂತ್ರಿಗಳು ಶೇ.15ಕ್ಕೆ ಒಪ್ಪಿಗೆ ಸೂಚಿಸಿದರು. ನಂತರ ಶೇ.20ಕ್ಕೆ ಬೇಡಿಕೆ ಇಟ್ಟೆವು. ಮಖ್ಯಮಂತ್ರಿಗಳು ನಮ್ಮ ಮಾತನ್ನು ಗೌರವಿಸಿ ಶೇ.17ಕ್ಕೆ ಇತ್ಯರ್ಥಪಡಿಸಿದರು. ನಾವು 200 ಅಂಗಸಂಸ್ಥೆಗಳನ್ನು ಹೊಂದಿದ್ದೇವೆ. ನಮ್ಮದು ಸರ್ವಾನುಮತದ ನಿರ್ಧಾರವಾಗಿದೆ. ಇದಕ್ಕೆ ಸೆಕ್ರೆಟರಿಯೇಟ್‌ ನೌಕರರ ಸಂಘವೂ ಒಪ್ಪಿಗೆ ನೀಡಿದೆ. ಅಲ್ಲದೆ, ಕಳೆದ ಆರು ವರ್ಷಗಳಿಂದ ಚುನಾವಣೆ ನಡೆಯದ ಕಾರಣ ಆ ಸಂಘದ ಹಾಲಿ ಅಧ್ಯಕ್ಷ (ಪಿ.ಗುರುಮೂರ್ತಿ) ಆಯ್ಕೆಯಾಗದೆ ಸಂಘದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

2022ರಲ್ಲೇ ವೇತನ ಆಯೋಗ ಸ್ಥಾಪನೆಯಾಗಿರುವಾಗ ನೀವೇಕೆ 2023ರಲ್ಲಿ ಮುಷ್ಕರಕ್ಕೆ ಕಾಲಿಟ್ಟಿರಿ?
ನಾವು ಆಗ ಮುಖ್ಯಮಂತ್ರಿಯವರೊಂದಿಗೆ ಸಭೆಗಳನ್ನು ನಡೆಸಿದ್ದೇವೆ ಮತ್ತು ಅವರು ಆಯೋಗವನ್ನು ರಚಿಸುವುದಾಗಿ ಭರವಸೆ ನೀಡಿದ್ದರು. ಬಿ ಎಸ್ ಯಡಿಯೂರಪ್ಪ ಅವರು ನಮ್ಮ ಮನವಿಗಳಿಗೆ ಸ್ಪಂದಿಸುತ್ತಾರೆಂದು ನಂಬಿದ್ದೆವು. ಬೊಮ್ಮಾಯಿ ಅವರೂ ಬಜೆಟ್‌ಗೆ ಕೇವಲ ಹದಿನೈದು ದಿನಗಳ ಮೊದಲು ಭರವಸೆ ನೀಡಿದ್ದರು, ಆದರೆ. ಈ ಬಗ್ಗೆ ಯಾವುದೇ ಪ್ರಸ್ತಾಪಗಳಾಗಲಿಲ್ಲ. ಇದು ನಮಗೆ ಆಘಾತವನ್ನು ತಂದಿತ್ತು. ನಂತರ ಯಡಿಯೂರಪ್ಪ ಕೂಡ ಬೊಮ್ಮಾಯಿ ಅವರಿಗೆ ಸಹಾಯ ಮಾಡುವಂತೆ ಕೋರಿದ್ದಾರೆ. ಜುಲೈ 2022 ರಿಂದ ವೇತನ ಆಯೋಗವನ್ನು ಸ್ಥಾಪಿಸಲಾಗಿದೆ.

ಕೋವಿಡ್ ಸಮಯದಲ್ಲಿಯೂ ಸರ್ಕಾರಿ ನೌಕರರು ಸಂಬಳ ಪಡೆಯುತ್ತಿದ್ದರು. ಅವರು ಕೃತಜ್ಞರಾಗಿರಬೇಕಲ್ಲವೇ?
ನೀವು ಹೇಳಿದ್ದು ಸರಿ, 2021 ರಲ್ಲಿ ಕೋವಿಡ್ ಆರ್ಭಟಿಸಿತ್ತು. ಆದರೆ, 2022 ರಲ್ಲಿ ಆದರೂ ಸರ್ಕಾರವು ಆಯೋಗವನ್ನು ಸ್ಥಾಪಿಸಬೇಕಾಗಿತ್ತು. 2021 ರಲ್ಲಿ ನಾವು ಪ್ರತಿಭಟನೆಯನ್ನು ಪ್ರಾರಂಭಿಸಬೇಕಾಗಿತ್ತು, ಆದರೆ, ಕೋವಿಡ್‌ನಿಂದಾಗಿ ಮಾಡಲಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ನಂತರವೇ ಹೋರಾಟ ಆರಂಭಿಸಿದ್ದೇವೆ.

ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಬಹಿರಂಗವಾಗಿ ಕಿತ್ತಾಡುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ?
ಅದು ಖಂಡನೀಯ. ಇದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ. ಕೌಟುಂಬಿಕ ಸಮಸ್ಯೆಗಳು ಸಾರ್ವಜನಿಕವಾಗಿ ಬರುವುದು ಮತ್ತು ಮಾಧ್ಯಮಗಳಲ್ಲಿ ಅದನ್ನು ವೈಭವೀಕರಿಸುವುದು ಒಳ್ಳೆಯದಲ್ಲ. ಉನ್ನತ ಅಧಿಕಾರಿಗಳ ಹಿನ್ನೆಲೆ ತಿಳಿದಿರುವುದರಿಂದ ನಮ್ಮ ಉದ್ಯೋಗಿಗಳ ಮೇಲೆ ಅದರಿಂದ ಯಾವುದೇ ಪರಿಣಾಮ ಬೀರಿಲ್ಲ.

ಸಿಬ್ಬಂದಿಯ ವರ್ತನೆಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬಾರದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳ ಚಿತ್ರಣವಗಳೂ ಬದಲಾಗಿಲ್ಲ. ಇದನ್ನು ಬದಲಾಯಿಸಲು ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದ್ದೀರಿ?
ಯಾವುದೇ ಸಾರ್ವಜನಿಕ ಕಚೇರಿಯಲ್ಲಿ ಸಾರ್ವಜನಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂಬ ಸರ್ಕಾರಿ ಆದೇಶವಿದೆ. ಕುಂದುಕೊರತೆ ಕೇಂದ್ರಗಳನ್ನು ಸ್ಥಾಪಿಸುವಂತೆ ಸೂಚಿಸಿದ್ದೆವು, ಆದರೆ ಶೇ.39ರಷ್ಟು ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಉದ್ಯೋಗಿಗಳ ವಿಷಯಕ್ಕೆ ಬಂದರೆ ಅವರೂ ಮನುಷ್ಯರೇ ಹೊರತು ಯಂತ್ರಗಳಲ್ಲ. ಕೆಎಟಿ ಸೇರಿದಂತೆ 10,000 ಪ್ರಕರಣಗಳು ಬಾಕಿ ಇರುವುದರಿಂದ ಅಧಿಕಾರಿಗಳ ಸಭೆ ಮತ್ತು ನ್ಯಾಯಾಲಯಗಳಿಗೆ ಹಾಜರಾಗಬೇಕಾಗಿರುವುದರಿಂದ ಅವರ ಕೆಲಸವು ಅಧಿಕವಾಗಿರುತ್ತವೆ.

ಮಾಹಿತಿ ಹಕ್ಕಿಗೆ ಸಂಬಂಧಿಸಿದ ಅರ್ಜಿಗಳನ್ನು ಸಹ ಪರಿಹರಿಸಬೇಕು. 100 ಅರ್ಜಿಗಳೊಂದಿಗೆ ಮಾಹಿತಿ ಪಡೆಯುವುದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಕೆಲ ಆರ್‌ಟಿಐ ಕಾರ್ಯಕರ್ತರು ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಇವು ನಮ್ಮ ಆಡಳಿತಾತ್ಮಕ ಸಮಸ್ಯೆಗಳು. ಆದರೆ ನಾವು ಸುಧಾರಣೆಗಳ ಪರವಾಗಿದ್ದೇವೆ ಮತ್ತು ಶಾಸಕಾಂಗವು ನಿರ್ಧಾರ ತೆಗೆದುಕೊಳ್ಳಬೇಕು. ದಕ್ಷ ನೌಕರರಿಗೆ ಪ್ರೋತ್ಸಾಹಧನ ನೀಡಬೇಕು. ಖಾಸಗಿ ವಲಯದಲ್ಲಿ ಹಲವು ಅಡೆತಡೆಗಳಿರುವುದರಿಂದ ಇದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಆದರೆ, ಸರಕಾರ ಇಚ್ಛಾಶಕ್ತಿ ತೋರಿದರೆ ಕಾರ್ಪೊರೇಟ್ ವಲಯದ ಉದ್ಯೋಗಿಗಳಿಗೆ ಸರಿಸಮನಾಗಿ ಕೆಲಸ ಮಾಡಲು ನಾವೂ ಸಿದ್ಧ. ನಾವು ನಮ್ಮ ಉದ್ಯೋಗಿಗಳಿಗೆ ಶಿಕ್ಷಣ ನೀಡುತ್ತೇವೆ.

ಕೆಲವು ಕಾರ್ಯಕರ್ತರು ಸರ್ಕಾರಿ ಕಚೇರಿಗಳಿಗೆ ಬಲವಂತವಾಗಿ ನುಗ್ಗುತ್ತಿದ್ದಾರೆ...
ಅವರು ಕಚೇರಿಗಳಿಗೆ ಹೋಗಲಿ. ಅವರಿಗೆ ಸ್ವಾತಂತ್ರ್ಯವಿದೆ, ಆದರೆ ಉದ್ಯೋಗಿಗಳ, ವಿಶೇಷವಾಗಿ ಮಹಿಳೆಯರ ವೀಡಿಯೊಗಳನ್ನು ಚಿತ್ರೀಕರಿಸುವುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಆ ರೀತಿ ಮಾಡಿದರೆ ವಿವಾದ ಸೃಷ್ಟಿಯಾಗಲಿದೆ. ವೀಡಿಯೊವನ್ನು ಚಿತ್ರೀಕರಿಸುವುದು ಮಹಿಳೆಯರಿಗೆ ಕಿರಿಕಿರಿಯುಂಟುಮಾಡುತ್ತದೆ. ಇದು ಅವರ ಗೌಪ್ಯತೆಯ ಉಲ್ಲಂಘನೆ ಮಾಡಿದಂತಾಗುತ್ತದೆ. ಅವರೂ ಕೂಡ ಇತರ ವ್ಯಕ್ತಿಗಳಂತೆ ಖಾಸಗಿ ಜೀವನವನ್ನು ಹೊಂದಿರುತ್ತಾರೆ.

ನಿಮ್ಮ ಮೇಲೆ ಲೋಕಾಯುಕ್ತ ಕೇಸ್ ಗಳಿವೆ ಎಂಬ ಆರೋಪವಿದೆ? ಸರ್ಕಾರದ ಮೇಲೆ ಮೃದು ಧೋರಣೆ ಇದೆಯೇ?
ಸಾಬೀತಾದರೆ, ನಾನು ನನ್ನ ಅಧ್ಯಕ್ಷ ಸ್ಥಾನವನ್ನಷ್ಟೇ ತ್ಯಜಿಸುವುದಿಲ್ಲ ,ನನ್ನ ಕೆಲಸಕ್ಕೂ ರಾಜೀನಾಮೆ ನೀಡುತ್ತೇನೆ. ಕಳೆದ 12 ವರ್ಷಗಳಲ್ಲಿ ನನ್ನ ವಿರುದ್ಧ ಎಸಿಬಿ ಮತ್ತು ಲೋಕಾಯುಕ್ತದಲ್ಲಿ ಹತ್ತು ಪ್ರಕರಣಗಳು ದಾಖಲಾಗಿವೆ. ಆದರೆ, ನನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಸಮನ್ಸ್ ನೀಡದೆ ಎಲ್ಲಾ ಕಡತಗಳನ್ನು ಮುಚ್ಚಲಾಗಿದೆ. ನನ್ನ ಹೆಸರಿನಲ್ಲಿ ಕಾರು, ಬಂಗಲೆ ಅಥವಾ ನಿವೇಶನ ಇಲ್ಲ. ನಾನು 1999 ರಲ್ಲಿ ಉದ್ಯೋಗಿಯಾಗಿ ಸೇರಿದಾಗಿನಿಂದ, ನಾನು ಪ್ರಾಮಾಣಿಕನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಕೊಟ್ಟಿರುವ ಬಂಗಲೆ ಸರ್ಕಾರದ್ದು.

ಮಹಿಳಾ ಉದ್ಯೋಗಿಗಳ ಸಮಸ್ಯೆಗಳನ್ನು ಪರಿಹರಿಸಲು ನೀವು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ?
ಮಹಿಳಾ ಸಮಾಲೋಚನೆ ಕೇಂದ್ರಗಳನ್ನು ಸೂಚಿಸಲಾಗಿದೆ ಮತ್ತು ಮಹಿಳೆಯರಿಗೆ ಹೆಚ್ಚಿನ ಸೌಲಭ್ಯಗಳು ಮತ್ತು ಅವರ ಸುರಕ್ಷತೆಗಾಗಿ ಸರ್ಕಾರಕ್ಕೆ ಶಿಫಾರಸು ಮಾಡಲು ನಾವು ವೇತನ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದೇವೆ.

ನೀವು ರಾಜಕೀಯ ಸೇರುವ ಸಾಧ್ಯತೆ ಇದೆಯೇ?
ನನಗೆ ಆಸಕ್ತಿಯೇ ಇಲ್ಲ. ಶಾಸಕರಿಗೆ ಅವರ ಅಧಿಕಾರ ವ್ಯಾಪ್ತಿಯು ಕೇವಲ 5 ಕಿಮೀ ಇರುತ್ತದೆ. ರಾಜ್ಯ ನೌಕರರ ಅಧ್ಯಕ್ಷರಾಗಿರುವ ನನಗೆ 1,000 ಕಿಮೀ ಇದೆ. ನನಗೆ ಕೆಲಸ ಮಾಡಲು ಸಾಕಷ್ಟು ಅವಕಾಶವಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com