ಶಿವಮೊಗ್ಗ ವಿದ್ಯಾರ್ಥಿನಿ ಕಿಡ್ನಾಪ್​ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮತಾಂತರವಾಗಲು ಕಥೆ ಕಟ್ಟಿದ್ದ ಯುವತಿ ಪೋಷಕರ ಸುಪರ್ದಿಗೆ!

ಉನ್ನತ ವ್ಯಾಸಾಂಗ ಮಾಡುತ್ತಿದ್ದ ಯುವತಿಯೊಬ್ಬಳನ್ನು ಕಿಡ್ನಾಪ್ ​ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿದೆ ಎನ್ನಲಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು  ಯುವತಿಯನ್ನು ಪತ್ತೆ ಹಚ್ಚಿದ್ದು, ಆಕೆಯನ್ನು ಯಾರು ಕಿಡ್ನಾಪ್ ಮಾಡಿಲ್ಲ ಎನ್ನುವುದು ಬಯಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಉನ್ನತ ವ್ಯಾಸಾಂಗ ಮಾಡುತ್ತಿದ್ದ ಯುವತಿಯೊಬ್ಬಳನ್ನು ಕಿಡ್ನಾಪ್ ​ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿದೆ ಎನ್ನಲಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು  ಯುವತಿಯನ್ನು ಪತ್ತೆ ಹಚ್ಚಿದ್ದು, ಆಕೆಯನ್ನು ಯಾರು ಕಿಡ್ನಾಪ್ ಮಾಡಿಲ್ಲ ಎನ್ನುವುದು ಬಯಲಾಗಿದೆ.

ವಿದ್ಯಾರ್ಥಿನಿ ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ಹೋಗಿ, ಕಿಡ್ನಾಪ್ ಕಥೆ ಸೃಷ್ಟಿಸಿದ್ದಾಳೆ ಎಂದು ತಿಳಿದುಬಂದಿದೆ. ಆಕೆ ಕ್ರಿಶ್ಚಿಯನ್ ಧರ್ಮಕ್ಕೆಮತಾಂತರವಾಗಲು ಪ್ರಯತ್ನಿಸಿದ್ದಳು. ಸದ್ಯ ಯುವತಿಯನ್ನು ರಕ್ಷಿಸಿರುವ ಪೊಲೀಸರು ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ.

ಕ್ರಿಶ್ಚಿಯನ್‌ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿ ಕ್ರೈಸ್ತ ಸಂನ್ಯಾಸಿಗಳ ( ಮಿಷನರಿ) ಪ್ರಭಾವಕ್ಕೆ ಒಳಗಾಗಿ, ತಾನೂ ಅವರಂತೆ ಸಮಾಜ ಸೇವೆ ಮಾಡಬೇಕೆಂದುಕೊಂಡಿದ್ದ ಚನ್ನಗಿರಿಯ ಯುವತಿ ನಾಲ್ಕು ವರ್ಷಗಳ ನಂತರ ಮನೆ ಬಿಟ್ಟು ಮುಂಬೈಗೆ ತೆರಳಲು ಸಿದ್ಧವಾಗಿದ್ದಳು. ಕಿಡ್ನಾಪ್‌ ಆಗಿರೋದಾಗಿ ತಂದೆಗೆ ಮೆಸೇಜ್‌ ಕಳಿಸಿ ಒತ್ತೆ ಹಣ ಇಪ್ಪತ್ತು ಲಕ್ಷಕ್ಕೆ ಡಿಮ್ಯಾಂಡ್‌ ಮಾಡಿದ್ದಳು. ಆದರೆ ಶಿವಮೊಗ್ಗ ಪೊಲೀಸರು ಈ ಪ್ರಕರಣವನ್ನ ಒಂದೇ ದಿನದಲ್ಲಿ ಬೇಧಿಸಿದ್ದಾರೆ.

ಕೇವಲ ಇಪ್ಪತ್ತು ವರ್ಷದ ಯುವತಿ ಮೂಲತಃ ದಾವಣಗೆರೆಯ ಚನ್ನಗಿರಿಯ ನಲ್ಲೂರು ಗ್ರಾಮದವಳು. ಚನ್ನಗಿರಿಯ ನವಚೇತನ ಕ್ರಿಶ್ಚಿಯನ್‌ ಶಾಲೆಯಲ್ಲಿ ಪ್ರೌಢಶಾಲೆ ವ್ಯಾಸಂಗ ಮಾಡಿದ್ದಳು.  ಆಗ ಸಮಾಜ ಸೇವೆಯಲ್ಲಿ ನಿರತರಾಗಿದ್ದ ಕ್ರಿಶ್ಚಿಯನ್‌ ಮಿಷನರಿಗಳನ್ನ ನೋಡಿ ಪ್ರಭಾವಿತಳಾಗಿದ್ದಳು. ಶಾಲೆಯಲ್ಲಿ ಉತ್ತಮ ಅಂಕಗಳೊಂದಿಗೆ ಶಿವಮೊಗ್ಗದ ಆದಿಚುಂಚನಗಿರಿಯಲ್ಲಿ ಪಿಯುಸಿ ವ್ಯಾಸಂಗ ಮಾಡಿ ಕೋವಿಡ್‌ ಸಮಯದಲ್ಲಿ ಮೆಡಿಕಲ್‌ ಸೀಟ್‌ ಸಿಗದ ಕಾರಣ ಶಿವಮೊಗ್ಗ ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಪಿಸಿಯೋ ಥೆರಪಿ ಕೋರ್ಸ್‌‌ಗೆ ಸೇರಿದ್ದಳು.

ನರ್ಸಿಂಗ್ ಕಾಲೇಜಿನಲ್ಲೂ ಕೇರಳ ಮೂಲದ ಕ್ರಿಶ್ಚಿಯನ್ ವಿದ್ಯಾರ್ಥಿನಿಯರ ಸಂಪರ್ಕದಿಂದ ತೀವ್ರ ಪ್ರಭಾವಿತಳಾಗಿದ್ದಳು. ಇದೇ ಕಾರಣಕ್ಕೆ ತಾನೂ ಮುಂಬೈ ಹೋಗಿ ಮತಾಂತರಗೊಳ್ಳಲು ನಿರ್ಧರಿಸಿದ್ದಳೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಾಲೇಜಿನಲ್ಲಿ ಕೆಲ ಕೇರಳದ ಕ್ರಿಶ್ಚಿಯನ್‌ ಸ್ನೇಹಿತೆಯರ ಜೊತೆ ಸ್ನೇಹಕ್ಕೆ ಬಂದ ನಂತರ ಧರ್ಮದ ಮೇಲಿನ ವ್ಯಾಮೋಹ ಇನ್ನಷ್ಟು ಹೆಚ್ಚಾಗಿತ್ತು.

ದಿನಾಂಕ 14ರಂದು ಮನೆಯಿಂದ ಹೊರಟು ಮುಂಬೈ ತಲುಪಿ ಅಲ್ಲಿ ಕ್ಯಾಥೋಲಿಕ್‌ ಚರ್ಚ್‌‌ವೊಂದರಲ್ಲಿ ದೀಕ್ಷೆ ಪಡೆದು ತಾನೂ ಕೂಡ ಸಂನ್ಯಾಸಿಯಾಗಲು ಆಕೆ ಬಯಸಿದ್ದಳು. ಈ ಕಾರಣಕ್ಕೆ ಶಿವಮೊಗ್ಗದಿಂದ ನೇರವಾಗಿ ಮುಂಬೈಗೆ ಬಸ್‌ ಟಿಕೆಟ್‌ ಸಿಗದ ಕಾರಣ ಹುಬ್ಬಳ್ಳಿಗೆ ಬಂದು ಅಲ್ಲಿಂದ ವಿಆರ್‌ಎಲ್‌ ಬಸ್‌ ಮೂಲಕ ಮುಂಬೈ ಸೇರುವ ಯೋಚನೆಯಲ್ಲಿದ್ದಳು.

ಆದರೆ ಮುಂಬೈ ತಲುಪಿದ ಮೇಲೆ ಅಲ್ಲಿರಲು ಹಣ ಇರದ ಕಾರಣ, ಆಕೆಗೆ ಹಣದ ಭರವಸೆ ಯಾರೂ ನೀಡದ ಕಾರಣ ತನ್ನ ತಂದೆಗೆ ಟೆಕ್ಸ್ಟ್‌ ಮೆಸೇಜ್‌ ಮಾಡಿ ಕಿಡ್ನಾಪ್‌ ಆಗಿದ್ದಾಳೆ. ಒತ್ತೆ ಹಣ ಇಪ್ಪತ್ತು ಲಕ್ಷ ನೀಡಿದರೆ ಮಾತ್ರ ಬಿಡಲಾಗುತ್ತೆ. ಪೊಲೀಸರಿಗೆ ಮಾಹಿತಿ ನೀಡಿದರೆ ಡೆಡ್‌ಬಾಡಿ ಸಿಗುತ್ತೆ ಎಂದು ಹೆದರಿಸಿದ್ದಳು.

ಯಾರೋ ಆನಾಮಧೇಯ ಕಿಡ್ನಾಪರ್‌ ಇರಬೇಕೆಂದುಕೊಂಡ ಆಕೆಯ ಪೋಷಕರು ಶಿವಮೊಗ್ಗದ ಜಯನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾದ ನಂತರ ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌ ಜಿಕೆ, ರೌಡಿ ನಿಗ್ರಹ ದಳದ ವಿಶೇಷ ತಂಡವನ್ನ ರಚಿಸಿ ಯುವತಿಯ ಜಾಡು ಹಿಡಿಯಲು ಆದೇಶಿಸಿದರು. ಈ ಮಧ್ಯೆ ಆಕೆ ತನ್ನ ಅಕೌಂಟಿನಿಂದ ಐದು ಸಾವಿರ ರೂಪಾಯಿ ಹಣವನ್ನ ಎಟಿಎಂನಿಂದ ವಿತ್‌ಡ್ರಾ ಮಾಡಿರೋದು ಅನುಮಾನಕ್ಕೆ ಕಾರಣವಾಗಿತ್ತು.

ಇವೆಲ್ಲಾ ಸಾಕ್ಷ್ಯಗಳ ಮೂಲಕ ಮೊಬೈಲ್‌ ಸಿಗ್ನಲ್‌ ಆಧಾರಿಸಿ ಹುಬ್ಬಳಿ ಬಸ್‌ ನಿಲ್ದಾಣದಲ್ಲಿ ಯುವತಿಯನ್ನು ಪೊಲೀಸರು ಪತ್ತೆಹಚ್ಚಿ ವಾಪಸ್‌ ಶಿವಮೊಗ್ಗಕ್ಕೆ ಕರೆತಂದಿದ್ದಾರೆ. ಹೀಗೆ ಎರಡು ದಿನಗಳಿಂದ ಶಿವಮೊಗ್ಗದಲ್ಲಿ ಕುತೂಹಲ ಮೂಡಿಸಿದ್ದ ಕಿಡ್ನಾಪ್‌ ಪ್ರಕರಣವನ್ನ ಪೊಲೀಸರು ಬೇಧಿಸಿದ್ದಾರೆ. ಯುವತಿಯನ್ನ ಆಪ್ತ ಸಮಾಲೋಚನೆಗೆ ಕಳುಹಿಸಿ ತಿಳಿ ಹೇಳಿ ಪೋಷಕರೊಂದಿಗೆ ಕಳಿಸಿಕೊಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com