ಕರ್ನಾಟಕದಲ್ಲಿ ಬದಲಾದ ಸರ್ಕಾರ: ಯಾರಾಗಲಿದ್ದಾರೆ ರಾಜ್ಯದ ಅಡ್ವೊಕೇಟ್‌ ಜನರಲ್? 

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದ ಬೆನ್ನಿಗೇ ರಾಜ್ಯದ ಅಗ್ರಗಣ್ಯ ಕಾನೂನು ಅಧಿಕಾರಿ, ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಯಾರು ನೇಮಕವಾಗಲಿದ್ದಾರೆ ಎಂಬ ಚರ್ಚೆ ವಕೀಲ ಸಮುದಾಯದಲ್ಲಿ ಶುರುವಾಗಿದೆ. 
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Updated on

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದ ಬೆನ್ನಿಗೇ ರಾಜ್ಯದ ಅಗ್ರಗಣ್ಯ ಕಾನೂನು ಅಧಿಕಾರಿ, ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಯಾರು ನೇಮಕವಾಗಲಿದ್ದಾರೆ ಎಂಬ ಚರ್ಚೆ ವಕೀಲ ಸಮುದಾಯದಲ್ಲಿ ಶುರುವಾಗಿದೆ. 

ಇದರ ಬೆನ್ನಿಗೇ ಪ್ರತಿಷ್ಠಿತ ಹುದ್ದೆಗೆ ಅನೇಕ ಹಿರಿಯ ವಕೀಲರ ಹೆಸರುಗಳು ಚಾಲ್ತಿಗೆ ಬಂದಿದ್ದು, ಬಿಜೆಪಿ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ಹಲವು ನೀತಿ-ನಿರ್ಧಾರಗಳ ವಿರುದ್ಧ ಸಮರ್ಥವಾಗಿ ವಾದ ಮಂಡಿಸುವುದರ ಜೊತೆಗೆ ಪಕ್ಷದ ಸಿದ್ಧಾಂತವನ್ನು ಪ್ರಬಲವಾಗಿ ಮಂಡಿಸಬಲ್ಲ ಮುಖವನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ವಿರೋಧ ಪಕ್ಷವಾಗಿರುವ ಬಿಜೆಪಿಯು ರಾಜ್ಯ ಸರ್ಕಾರದ ಬಹುತೇಕ ಒಲವು-ನಿಲುವುಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಲಿದ್ದು, ಇಲ್ಲಿ ಸೈದ್ಧಾಂತಿಕ ಬದ್ಧತೆ ಮತ್ತು ಕಾನೂನು ಪಾಂಡಿತ್ಯ ಬಹುಮುಖ್ಯ ಪಾತ್ರವಹಿಸಲಿದೆ. ಈ ನಿಟ್ಟಿನಲ್ಲಿ ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಈ ಬಾರಿ ಮಹತ್ವವಿದೆ.

ರೇಸ್ ನಲ್ಲಿ ಹಲವು ಪ್ರಮುಖರು!
ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಹಿರಿಯ ವಕೀಲರಾದ ಪ್ರೊ. ರವಿವರ್ಮ ಕುಮಾರ್‌, ಕಾಂತರಾಜ್‌, ಶಶಿಕಿರಣ ಶೆಟ್ಟಿ, ವಿಕ್ರಂ ಹುಯಿಲಗೋಳ, ಸಂದೇಶ ಚೌಟ, ಎ ಜಿ ಶಿವಣ್ಣ ಅವರ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಈ ಹಿಂದೆ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಪ್ರೊ. ರವಿವರ್ಮ ಕುಮಾರ್‌ ಅವರು ಕೆಲ ಸಮಯದವರೆಗೆ ಅಡ್ವೊಕೇಟ್‌ ಜನರಲ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ಆನಂತರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಲಪಂಥೀಯ ಧೋರಣೆಯಿಂದ ತೆಗೆದುಕೊಂಡಿರುವ ಸಾಕಷ್ಟು ನೀತಿ, ನಿರ್ಧಾರಗಳನ್ನು ಸಂವಿಧಾನದ ನೆಲೆಗಟ್ಟಿನ ಮೂಲಕವೇ ಸೈದ್ಧಾಂತಿಕವಾಗಿ ಎದುರಿಸಲು, ಕಾನೂನಾತ್ಮಕವಾಗಿ ಸರಿಪಡಿಸಲು ರವಿವರ್ಮ ಕುಮಾರ್ ಅವರಂತಹವರು ಸೂಕ್ತ ಎನ್ನುವ ವಾದವಿದೆ. ರವಿವರ್ಮಕುಮಾರ್ ಅವರ ಹಿರಿತನ, ಅನುಭವ, ಸೈದ್ಧಾಂತಿಕ ಸ್ಪಷ್ಟತೆ, ಸಂವಿಧಾನದ ಬಗ್ಗೆ ಆಳವಾದ ಶ್ರದ್ಧೆ ಪ್ರಸಕ್ತ ಸನ್ನಿವೇಶದಲ್ಲಿ ಅಗತ್ಯವಿದೆ ಎನ್ನುವ ಭಾವನೆ ಪಕ್ಷದ ವಲಯದಲ್ಲಿ, ವಕೀಲ ಸಮುಯದಾಯದಲ್ಲಿ ಕೇಳಿ ಬರುತ್ತಿದೆ.

ಇದಲ್ಲದೆ ಮುಂಚೂಣಿಯಲ್ಲಿರುವ ಇತರ ಹೆಸರುಗಳೆಂದರೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಕಾಂತರಾಜ್‌ ಹಾಗೂ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರ ಪುತ್ರ ಹಾಗೂ ಹಿರಿಯ ವಕೀಲರಾದ ಶಶಿಕಿರಣ್‌ ಶೆಟ್ಟಿ ಅವರದ್ದು. ಇದೇ ರೀತಿ, ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಟಿ ಜಯರಾಂ ಚೌಟ ಅವರ ಪುತ್ರ ಸಂದೇಶ್‌ ಚೌಟ, ವಿಕ್ರಂ ಹುಯಿಲಗೋಳ, ಮಾಜಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿದ್ದ ಎ ಜಿ ಶಿವಣ್ಣ ಅವರ ಹೆಸರುಗಳೂ ವಕೀಲ ವಲಯ ಹಾಗೂ ಪಕ್ಷದ ವಲಯದಿಂದ ಕೇಳಿಬಂದಿವೆ. 

ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ 2017 ರಿಂದ 2018ರವರೆಗೆ ಸಂದೇಶ್‌ ಚೌಟ ಅವರು ಸರ್ಕಾರಿ ಅಭಿಯೋಜಕರಾಗಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 2018-2019ರಲ್ಲಿ ಅವರು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ಎಎಜಿ ಹುದ್ದೆಗೂ ವ್ಯಾಪಕ ಸ್ಪರ್ಧೆ
ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಹುದ್ದೆಯತ್ತ ಗಮನಹರಿಸಿದರೆ 3-4 ಎಎಜಿ ಹುದ್ದೆ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಹುದ್ದೆಗೆ ಕೆಪಿಸಿಸಿ ಕಾನೂನು ಘಟಕದ ಉಸ್ತುವಾರಿ ಅಧ್ಯಕ್ಷರಾಗಿರುವ ಎಸ್‌ ಎ ಅಹ್ಮದ್‌, ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌ ಮತ್ತಿತರರ ಹೆಸರುಗಳು ಕೇಳಿಬರುತ್ತಿವೆ.  ಕ್ರಿಮಿನಲ್‌ ಕಾನೂನು ವಿಭಾಗದಲ್ಲಿ ಸಾಕಷ್ಟು ಅನುಭವಿಯಾಗಿರುವ ಹಿರಿಯ ವಕೀಲ ಶ್ಯಾಮಸುಂದರ್‌ ಅವರ ಹೆಸರು ವಿಶೇಷ ಸರ್ಕಾರಿ ಅಭಿಯೋಜಕರ ಹುದ್ದೆಗೆ ಕೇಳಿ ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com