ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು: ಸಚಿವ ದಿನೇಶ್ ಗುಂಡೂರಾವ್

ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಸಿಬ್ಬಂದಿ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ವ್ಯವಸ್ಥೆಗಳ ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ ಹೇಳಿದರು.
ಅಧಿಕಾರಿಗಳೊಂದಿಿಗೆ ಸಭೆ ನಡೆಸುತ್ತಿರುವ ಸಚಿವ ದಿನೇಶ್ ಗುಂಡೂರಾವ್.
ಅಧಿಕಾರಿಗಳೊಂದಿಿಗೆ ಸಭೆ ನಡೆಸುತ್ತಿರುವ ಸಚಿವ ದಿನೇಶ್ ಗುಂಡೂರಾವ್.

ಬೆಂಗಳೂರು: ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಸಿಬ್ಬಂದಿ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ವ್ಯವಸ್ಥೆಗಳ ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ ಹೇಳಿದರು.

ಆರೋಗ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ದಿನೇಶ್ ಗುಂಡೂರಾವ್ ಅವರು ನಿನ್ನೆ ಇಲಾಖಾ ಅಧಿಕಾರಿಗಳೊಂದಿಗೆ ತಮ್ಮ ಮೊದಲ ಸಭೆ ನಡೆಸಿದರು. ಸಭೆಯಲ್ಲಿ 2021ರಲ್ಲಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಸಾವಿಗೀಡಾಗಿದ್ದರು. ಈ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳದಿರುವ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರು.

“ಆರೋಗ್ಯ ಕೇಂದ್ರಗಳ ಬಗ್ಗೆ ಸಾಕಷ್ಟು ದೂರುಗಳಿವೆ, ದಕ್ಷತೆಯನ್ನು ಸುಧಾರಿಸಬೇಕಿದ್ದು, ನಿರ್ಲಕ್ಷ್ಯಕ್ಕೆ ಯಾವುದೇ ಅವಕಾಶವಿಲ್ಲ ನೀಡುವುದಿಲ್ಲ. ಹಠಾತ್ ತಪಾಸಣೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಆರೋಗ್ಯ ಕಾರ್ಯಕರ್ತರು ಮತ್ತು ಆರೋಗ್ಯಾಧಿಕಾರಿಗಳ ಕಾರ್ಯಕ್ಷಮತೆ ವಿಶ್ಲೇಷಣೆಗೆ ವ್ಯವಸ್ಥೆ ಅಗತ್ಯವಾಗಿದ್ದು, ಇದನ್ನು ಆಧರಿಸಿಯೇ ವರ್ಗಾವಣೆಯೂ ಆಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರೋಗ್ಯ ಆಯುಕ್ತ ಡಿ ರಂದೀಪ್ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ ಡಾ ನವೀನ್ ಭಟ್ ಅವರು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು.

ಇದೇ ವೇಳೆ ಹಿಂದಿನ ಸರ್ಕಾರದ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಮತ್ತು ಕಾಕ್ಲಿಯರ್ ಇಂಪ್ಲಾಂಟ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಸ್ಥಿತಿಯ ಬಗ್ಗೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಇವುಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರ ವಿಸ್ತರಿಸುವ ಅಥವಾ ಮಾರ್ಪಡಿಸುವ ಬಗ್ಗೆ ನಿರ್ಧರಿಸುವುದಾಗಿ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

ಬಳಿಕ ಡ್ರಗ್ಸ್ ನಿಯಂತ್ರಣ ಮುಂತಾದ ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಖಾಲಿ ಇರುವ ಬಗ್ಗೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುಂಡೂರಾವ್ ಅವರು, ನಮ್ಮ ಇಲಾಖೆಯಲ್ಲಿ ಅನೇಕ ಸ್ಕೀಮ್ ಗಳಿವೆ. ನಮ್ಮ ಇಲಾಖೆ ಕಳೆದ ಮೂರು ವರ್ಷದಲ್ಲಿ ಯಾವ ರೀತಿ ಕೆಲಸ ಮಾಡಿದೆ. ಬೇರೆ ಬೇರೆ ರಾಜ್ಯದಲ್ಲಿ ಆರೋಗ್ಯ ಇಲಾಖೆ ಹೇಗೆ ಕೆಲಸ ಮಾಡುತ್ತಿದೆ.ಕೋವಿಡ್ ಸಮಯದಲ್ಲಿ ಯಾವ ಯಾವ ರೀತಿ ಕೆಲಸ ಆಗಿದೆ. ಕೋವಿಡ್ ಸಮಯದಲ್ಲಿ ನಡೆದಿರೋ ಕೆಲಸದ ಬಗ್ಗೆ ವರದಿ ಕೇಳಿದ್ದೇನೆ. ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇನೆಂದು ಹೇಳಿದರು.

ಶುಚಿ ಯೋಜನೆ
ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಶಾಲಾ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುವ ಶುಚಿ ಯೋಜನೆಯನ್ನು ಪುನರಾರಂಭಿಸಲಾಗುವುದು ಎಂದು ಇದೇ ವೇಳೆ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

ಇತ್ತೀಚೆಗೆ ಈ ಯೋಜನೆಯನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸುವಂತೆ ಹಣಕಾಸು ಇಲಾಖೆ ಸೂಚಿಸಿತ್ತು. ಈ ಯೋಜನೆಯನ್ನು ಆರೋಗ್ಯ ಇಲಾಖೆಯೇ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com