‘ನಾಡದೇವತೆ ಭುವನೇಶ್ವರಿ ಭವನ' ಬೃಹತ್ ಸಭಾಂಗಣ ಸದ್ಯದಲ್ಲೇ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರ್ಕಾರವು ‘ನಾಡದೇವತೆ ಭುವನೇಶ್ವರಿ ಭವನ’ ಎಂಬ ಬೃಹತ್ ಸಭಾಂಗಣವನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. 
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಇತರರು
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೊಂದಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಇತರರು

ಬೆಂಗಳೂರು: ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರ್ಕಾರವು ‘ನಾಡದೇವತೆ ಭುವನೇಶ್ವರಿ ಭವನ’ ಎಂಬ ಬೃಹತ್ ಸಭಾಂಗಣವನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. 

ಅವರು ನಿನ್ನೆ ನವೆಂಬರ್ 1, ಕನ್ನಡ ರಾಜ್ಯೋತ್ಸವ ದಿನದಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಪರೋಪಕಾರಿ ಚಾರ್ಮಾಡಿ ಹಸನಬ್ಬ ಸೇರಿದಂತೆ 68 ಸಾಧಕರಿಗೆ ಹಾಗೂ 10 ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ವಿತರಿಸಿ ಮಾತನಾಡಿದರು. ಕನ್ನಡ ಭಾಷೆ ಮಾತನಾಡುವ ಅನಿವಾರ್ಯ ವಾತಾವರಣ ನಿರ್ಮಾಣ ಮಾಡುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದರು.

ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಕಳೆದರೂ ಅದನ್ನು ಆಚರಿಸದೇ ಇರುವುದು ಹಿಂದಿನ ಬಿಜೆಪಿ ಸರ್ಕಾರದ ನಿರ್ಲಕ್ಷ್ಯತನ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ ಅವರು, ಇದು ಬಿಜೆಪಿ ಮಾಡಿದ ಲೋಪ ಎಂದರು.

ನಾವು ‘ಕರ್ನಾಟಕ ಸಂಭ್ರಮ 50’ ನ್ನು ಘೋಷಿಸಿದ್ದೇವೆ, ಇದು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣಗೊಳಿಸಿ 50 ವರ್ಷಗಳು ಸಂದ ಸಂದರ್ಭದಲ್ಲಿ ಆಚರಿಸುವ ಒಂದು ವರ್ಷದ ಕಾರ್ಯಕ್ರಮವಾಗಿದೆ. ರಾಜ್ಯದ ಇತಿಹಾಸ, ಅದರ ವೈಭವ, ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದ ಕಾರ್ಯಕ್ರಮಗಳು ನಾಳೆಯಿಂದ ಒಂದು ವರ್ಷ ರಾಜ್ಯಾದ್ಯಂತ ನಡೆಯಲಿದೆ ಎಂದರು.

ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುವ ಸಮಿತಿಗೆ 2,655 ಅರ್ಜಿಗಳು ಬಂದಿದ್ದು, ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಿದ್ದಕ್ಕಾಗಿ ಶ್ಲಾಘಿಸಿದರು. ಅಧಿಕಾರದಲ್ಲಿರುವವರ ಅಭಿಲಾಷೆಗಳಿಗೆ ಅನುಗುಣವಾಗಿ ಕೊನೆಯ ಕ್ಷಣದಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಸೇರಿಸುವ ನಿದರ್ಶನಗಳಿವೆ. ಆದರೆ ನಾವು ಆ ಅಭ್ಯಾಸಗಳನ್ನು ದೂರವಿಟ್ಟಿದ್ದೇವೆ ಎಂದ ಮುಖ್ಯಮಂತ್ರಿಗಳು ಶಾಲಾ ಪಠ್ಯಕ್ರಮದ ಭಾಗವಾಗಿ ‘ವಚನ’ಗಳನ್ನು ಪರಿಚಯಿಸುವಂತೆ ನಿಜಗುಣಾನಂದ ಸ್ವಾಮಿಗಳ ಸಲಹೆಗೆ ಉತ್ತರಿಸಿದ ಅವರು, ಸರ್ಕಾರ ಅದನ್ನು ಪರಿಗಣಿಸುತ್ತದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಖಾತರಿ ಯೋಜನೆಗಳನ್ನು ಶ್ಲಾಘಿಸಿದ ನ್ಯಾಯಮೂರ್ತಿ ಗೋಪಾಲ ಗೌಡ, ನಿರುದ್ಯೋಗ ಸಮಸ್ಯೆಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com