ಗಣಿ-ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣವನ್ನು ತನಿಖೆ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ
ಮೈಸೂರು: ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ(37 ವ) ಕೊಲೆ ಪ್ರಕರಣದ ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಈಗಷ್ಟೇ ಮಾಹಿತಿ ತಿಳಿಯಿತು. ಅವರು ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದು ಅವರ ಪತಿ ಪರವೂರಿನಲ್ಲಿದ್ದರಂತೆ. ಅವರ ಕೊಲೆ ಹೇಗಾಯ್ತು, ಯಾಕಾಯ್ತು ಎಂದು ತನಿಖೆ ಮಾಡಿಸಲಾಗುವುದು ಎಂದರು.
ಗಣಿ ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಯಾಗಿದ್ದ ಪ್ರತಿಮಾ ತೀರ್ಥಹಳ್ಳಿ ಮೂಲದವರಾಗಿದ್ದು, ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರ ಬಳಿಕ ಕುವೆಂಪು ನಗರದ ಅಪಾರ್ಟ್ ಮೆಂಟಿನಲ್ಲಿ ಬಾಡಿಗೆಗೆ ಒಬ್ಬರೇ ವಾಸವಾಗಿದ್ದರು. ಕಳೆದ ರಾತ್ರಿ ಅವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ರಾತ್ರಿ 8 ಗಂಟೆ ವೇಳೆಗೆ ಅವರನ್ನು ಡ್ರೈವರ್ ಕಚೇರಿಯಿಂದ ಮನೆಗೆ ಬಿಟ್ಟು ಬಂದಿದ್ದರು. ಇಂದು ಬೆಳಗ್ಗೆ 8 ಗಂಟೆಗೆ ಪ್ರತಿಮಾ ಸಹೋದರ ಕರೆ ಮಾಡಿದರೂ ಅದನ್ನು ಸ್ವೀಕರಿಸಿರಲಿಲ್ಲ. ಬಳಿಕ ಫ್ಲ್ಯಾಟ್ ಬಳಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ