ಬೆಂಗಳೂರು-ಮೈಸೂರು ಅವಳಿ ನಗರಗಳಾಗಿ ಅಭಿವೃದ್ಧಿ: ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್

ಬೆಂಗಳೂರು-ಮೈಸೂರನ್ನು ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸಲು ಮೂಲಸೌಕರ್ಯ ಯೋಜನೆಗಳನ್ನು ರಾಜ್ಯ ಸರ್ಕಾರ ಆರಂಭಿಸಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು
ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು

ಮೈಸೂರು: ಬೆಂಗಳೂರು-ಮೈಸೂರನ್ನು ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸಲು ಮೂಲಸೌಕರ್ಯ ಯೋಜನೆಗಳನ್ನು ರಾಜ್ಯ ಸರ್ಕಾರ ಆರಂಭಿಸಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ನಿನ್ನೆ ಸೋಮವಾರ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಐಟಿ ಸಿಟಿ ಬೆಂಗಳೂರು ಮತ್ತು ಹೆರಿಟೇಜ್‌ ಸಿಟಿ ಮೈಸೂರನ್ನು ಅವಳಿ ನಗರಗಳನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಸಿಎಂ ಸಿದ್ದರಾಮಯ್ಯ ಅವರ ಆಶಯವಾಗಿದೆ ಎಂದರು.

ಮೈಸೂರು ನಗರವನ್ನು ಬೆಂಗಳೂರು ನಗರಕ್ಕೆ ಸರಿಸಮನಾಗಿ ಅಭಿವೃದ್ಧಿಪಡಿಸಲು ವಿವಿಧ ಮೂಲಸೌಕರ್ಯ ಯೋಜನೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಬೆಳಗಾವಿಯಂತಹ ದ್ವಿತೀಯ ಹಂತದ ನಗರಗಳನ್ನು ಬೆಂಗಳೂರಿನಂತೆ ಅಭಿವೃದ್ಧಿಪಡಿಸಲು ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಂಡು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಸರ್ಕಾರದ ಕ್ರಮಗಳೇನು?: ಅವಳಿ ನಗರಗಳ ಉಪಕ್ರಮದ ಭಾಗವಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುವ ಮಣಿಪಾಲ್ ಆಸ್ಪತ್ರೆ ಬಳಿ ಸೇರಿದಂತೆ ಹೊರ ವರ್ತುಲ ರಸ್ತೆಯಾದ್ಯಂತ ಸುಮಾರು ನಾಲ್ಕರಿಂದ ಐದು ಮೇಲ್ಸೇತುವೆಗಳು ಅಥವಾ ಗ್ರೇಡ್ ಸಪರೇಟರ್‌ಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ ಸಚಿವರು, ಮೈಸೂರು ನಗರಾಭಿವೃದ್ಧಿ ಕಾಮಗಾರಿಗೆ ಸುಮಾರು 2,000 ಕೋಟಿ ರೂಪಾಯಿ ವಿನಿಯೋಗಿಸುವ ಅಗತ್ಯವಿದೆ ಎಂದು ಮುಡಾ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಂದಾಜಿಸಿದೆ ಎಂದರು. 

ಸ್ವಾಧೀನಪಡಿಸಿಕೊಳ್ಳಬೇಕಾದ ಭೂಮಿಗಳು ಮತ್ತು  ರೈತರಿಗೆ ಪರಿಹಾರವಾಗಿ ನೀಡಬೇಕಾದ ಹಣವನ್ನು ಹೇಗೆ ಹೊಂದಿಸಬೇಕು ಮತ್ತು ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಸಾಧಕ-ಬಾಧಕಗಳನ್ನು ಸಭೆಯಲ್ಲಿ ಚರ್ಚಿಸುತ್ತೇವೆ. ಕಾಮಗಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಹಿಸಿಕೊಳ್ಳಲಿದೆ. ಅವರು ಯೋಜನೆಗಳನ್ನು ಪ್ರಾರಂಭಿಸದಿದ್ದರೆ, ರಾಜ್ಯ ಸರ್ಕಾರವು ಕೆಲಸವನ್ನು ಕೈಗೆತ್ತಿಕೊಳ್ಳುತ್ತದೆ. ನಗರದ ಸುತ್ತ ಪೆರಿಫೆರಲ್ ರಿಂಗ್ ರೋಡ್ ಕೂಡ ನಿರ್ಮಿಸುತ್ತೇವೆ. ವಿಸ್ತೃತ ಯೋಜನಾ ವರದಿಯನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು ಎಂದರು. 

ಈ ಯೋಜನೆಗಳು ನಗರದಲ್ಲಿ ಸಂಚಾರ ಸುಗಮಗೊಳಿಸುತ್ತದೆ ಮತ್ತು ಅಡೆತಡೆಗಳನ್ನು ನಿವಾರಿಸುತ್ತದೆ ಎಂದು ಅವರು ಹೇಳಿದರು. ಮೈಸೂರು ಮಹಾನಗರ ಪಾಲಿಕೆ (MCC) ಚುನಾವಣೆಯ ಐದು ವರ್ಷಗಳ ಅವಧಿ ನವೆಂಬರ್ 16 ಕ್ಕೆ ಕೊನೆಗೊಳ್ಳಲಿದ್ದು, ವೇಳಾಪಟ್ಟಿಯಂತೆ ಚುನಾವಣೆ ನಡೆಯಲಿದ್ದು, ಯಾವುದೇ ವಿಳಂಬವಾಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸಚಿವ ಭೈರತಿ ಸುರೇಶ್ ಹೇಳಿದರು. 

ವೇಳಾಪಟ್ಟಿಯಂತೆ ಚುನಾವಣೆ ನಡೆಸುವಂತೆ ಸಿಎಂ ಸಿದ್ದರಾಮಯ್ಯನವರು ಈಗಾಗಲೇ ನಿರ್ದೇಶನ ನೀಡಿದ್ದಾರೆ. 15 ರಿಂದ 20 ದಿನ ವಿಳಂಬವಾಗಬಹುದು, ಆದರೆ ಲೋಕಸಭೆ ಚುನಾವಣೆಯಿಂದಾಗಿ ಚುನಾವಣೆಯನ್ನು ಮುಂದೂಡಲಾಗುವುದಿಲ್ಲ. 45 ದಿನಗಳಲ್ಲಿ ಅಧಿಸೂಚನೆ ಪ್ರಕಟಿಸಲಾಗುವುದು ಎಂದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮೈಸೂರು ಲೋಕಸಭಾ ಟಿಕೆಟ್ ನೀಡುವ ಕುರಿತು ಸಚಿವ ಸುರೇಶ್ ಅವರು, ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಚರ್ಚಿಸಲು ಮೊದಲ ಸಭೆ ನಡೆಸುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com