ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಡಿ.ಬಿ.ಚಂದ್ರೇಗೌಡ ನಿಧನ, ಬೊಮ್ಮಾಯಿ, ಬಿಎಸ್ ವೈ ಸಂತಾಪ

ಮಾಜಿ ಸಚಿವ, ಬಿಜೆಪಿ ನಾಯಕ ಡಿ.ಬಿ.ಚಂದ್ರೇಗೌಡ(DB Chandregowda) ಸೋಮವಾರ ರಾತ್ರಿ ನಿಧನರಾಗಿದ್ದು, ಅವರಿಗೆ 87 ವರ್ಷ ವಯಸ್ಸಾಗಿತ್ತು.
ಬಿಜೆಪಿ ನಾಯಕ ಡಿ.ಬಿ.ಚಂದ್ರೇಗೌಡ
ಬಿಜೆಪಿ ನಾಯಕ ಡಿ.ಬಿ.ಚಂದ್ರೇಗೌಡ
Updated on

ಬೆಂಗಳೂರು: ಮಾಜಿ ಸಚಿವ, ಬಿಜೆಪಿ ನಾಯಕ ಡಿ.ಬಿ.ಚಂದ್ರೇಗೌಡ(DB Chandregowda) ಸೋಮವಾರ ರಾತ್ರಿ ನಿಧನರಾಗಿದ್ದು, ಅವರಿಗೆ 87 ವರ್ಷ ವಯಸ್ಸಾಗಿತ್ತು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಿ.ಬಿ.ಚಂದ್ರೇಗೌಡ ಸೋಮವಾರ ಮಧ್ಯರಾತ್ರಿ ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಅಂತಿಮ ಇಂದು ಮಧ್ಯಾಹ್ನ 2 ರಿಂದ ಸಂಜೆ 6ರವರೆಗೆ ಸಾರ್ವಜನಿಕರ ಅಂತಿಮ  ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಾಳೆ(ನವೆಂಬರ್ 08) ನಾಳೆ ಮಧ್ಯಾಹ್ನ ದಾರದಹಳ್ಳ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಮೂರು ಬಾರಿ ಶಾಸಕರಾಗಿ, 3 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಚಂದ್ರೇಗೌಡ, ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಕಾನೂನು ಸಚಿವರು ಹಾಗೂ ಸ್ಪೀಕರ್​ ಆಗಿ ಕಾರ್ಯನಿರ್ವಹಿಸಿದ್ದರು. ಇನ್ನು ಕಾಂಗ್ರೆಸ್ ಕಟ್ಟಾಳಾಗಿದ್ದ ಚಂದ್ರೇಗೌಡ, ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಸೇರಿದ್ದರು. ಬಳಿಕ ಬಿಜೆಪಿಯಿಂದ ಸಂಸದರಾಗಿಯೂ ಆಯ್ಕೆಯಾಗಿದ್ದರು.

ಡಿ.ಬಿ.ಚಂದ್ರೇಗೌಡ ನಿಧನಕ್ಕೆ ವಿವಿಧ ಪಕ್ಷಗಳ ನಾಯಕರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಬೊಮ್ಮಾಯಿ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದು, ಹಿರಿಯ ರಾಜಕಾರಿಣಿ, ಮಾಜಿ ಸಚಿವರು, ಮಾಜಿ ಸಂಸದರಾದ ಆತ್ಮೀಯ ಶ್ರೀ ಡಿ. ಬಿ. ಚಂದ್ರೇಗೌಡರು ನಿಧನರಾದ ವಿಷಯ ತಿಳಿದು ತುಂಬಾ ದುಃಖಿತನಾಗಿದ್ದೇನೆ. ಅವರ ನಿಧನ ನಾಡಿಗೆ ತುಂಬಲಾರದ ನಷ್ಟವಾಗಿದ್ದು, ಉತ್ತಮ ಸಂಸದೀಯ ಪಟುವಾಗಿ ಅವರು ಹಾಕಿಕೊಟ್ಟ ಮಾರ್ಗ ಯುವ ಪೀಳಿಗೆ ಮಾದರಿಯಾಗಿರುವಂತಹದ್ದು. ಅವರ ಕುಟುಂಬಕ್ಕೆ ಅವರ ಅಭಿಮಾನಿಗಳಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಅಂತೆಯೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಹಿರಿಯ ನಾಯಕ, ಮಾಜಿ ಸಚಿವ, ರಾಜಕೀಯ ಮುತ್ಸದ್ಧಿ ಶ್ರೀ ಡಿ.ಬಿ.ಚಂದ್ರೇಗೌಡ ಅವರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದ ಅವರು ಶಾಸಕರಾಗಿ, ಸಂಸದರಾಗಿ, ರಾಜ್ಯಸಭಾ ಸದಸ್ಯರಾಗಿ, ಕಾನೂನು ಸಚಿವರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬದವರಲ್ಲಿ, ಅಭಿಮಾನಿಗಳಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇಂದಿರಾಗಾಂಧಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಚಂದ್ರೇಗೌಡ
1971 ಮತ್ತು 1977ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ನಿಂದ ಲೋಕಸಭೆಗೆ ಚಂದ್ರೇಗೌಡ ಸ್ಪರ್ಧಿಸಿದ್ದರು. ಆದಾಗ್ಯೂ, ತುರ್ತುಪರಿಸ್ಥಿತಿಯ ನಂತರ 1977 ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಸಂಸತ್ ಸ್ಥಾನವನ್ನು ಕಳೆದುಕೊಂಡಾಗ, ಅವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿರಾಗಾಂಧಿ ಅವರಿಗೆ ಸ್ಪರ್ಧಿಸಲು ತಮ್ಮ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಅಲ್ಲಿ ಇಂದಿರಾಗಾಂಧಿ ಗೆದ್ದರು. ಅವರ ರಾಜಕೀಯ ಜೀವನದಲ್ಲಿ ಹೊಸ ಜೀವನ ನೀಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.

ಬಳಿಕ ಬದಲಾದ ಸನ್ನಿವೇಶದಲ್ಲಿ ಚಂದ್ರೇಗೌಡರು ಜನತಾ ಪರಿವಾರಕ್ಕೆ ಬದಲಾದರು ಮತ್ತು 1983 ರಲ್ಲಿ ಜನತಾದಳದಿಂದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಗೆದ್ದರು ಮತ್ತು ನಂತರ 1999 ರಲ್ಲಿ ಅವರು ಕಾಂಗ್ರೆಸ್ ಟಿಕೆಟ್‌ನೊಂದಿಗೆ ಶೃಂಗೇರಿ ವಿಧಾನಸಭಾ ಕ್ಷೇತ್ರವನ್ನು ಗೆದ್ದರು. 1978ರಲ್ಲಿ ಎಂಎಲ್‌ಸಿಯಾಗಿಯೂ ಸೇವೆ ಸಲ್ಲಿಸಿದ್ದರು. 1983ರಲ್ಲಿ ಕಾಂಗ್ರೆಸ್ ತೊರೆದು ಕರ್ನಾಟಕ ಕ್ರಾಂತಿ ರಂಗಕ್ಕೆ ಸೇರಿದ್ದರು. 2009 ರಲ್ಲಿ ಚಂದ್ರೇಗೌಡರು ಬೆಂಗಳೂರು ಉತ್ತರ ಸಂಸದೀಯ ಕ್ಷೇತ್ರದಿಂದ ಸ್ಪರ್ಧಿಸಿದರು ಮತ್ತು ಭಾರತೀಯ ಜನತಾ ಪಕ್ಷವನ್ನು ಪ್ರತಿನಿಧಿಸಿ ಲೋಕಸಭೆಗೆ ಪ್ರವೇಶಿಸಿದರು. 1986 ರಲ್ಲಿ ಜನತಾ ಪಕ್ಷವನ್ನು ಪ್ರತಿನಿಧಿಸಿ ರಾಜ್ಯಸಭಾ ಸದಸ್ಯರಾಗಿದ್ದರು, ಅದು ನಂತರ ಜನತಾ ದಳವಾಯಿತು. ಅವರು ಸ್ಪೀಕರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮತ್ತು ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com