
ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ತನಿಖೆಗೆ ತಡೆ ನೀಡಿರುವ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಸುಳ್ಳಿನ ಆಧಾರದಲ್ಲಿ ಸಂಪೂರ್ಣ ತನಿಖೆಗೆ ತಡೆ ನೀಡಲಾಗಿದೆ ಎಂದು ಸಿಬಿಐ ಪರ ವಾದ ಮಂಡಿಸಿದ ಎಎಸ್‌ಜಿ ಎಸ್‌ವಿ ರಾಜು ನ್ಯಾಯಾಲಯಕ್ಕೆ ತಿಳಿಸಿದರು. ಶಿವಕುಮಾರ್ ಅವರ ವಿಚಾರಣೆ ನಡೆಸದೆ ಹೈಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿದೆ ಎಂದು ಈ ಹಿಂದೆ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತ್ತು.
ಡಿ.ಕೆ. ಶಿವಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಉತ್ತರ ನೀಡಲು ಕೊಂಚ ಕಾಲಾವಕಾಶ ಕೋರಿದರು. ನ್ಯಾಯಾಲಯ ಶುಕ್ರವಾರ ಪ್ರಕರಣದ ವಿಚಾರಣೆಯನ್ನು ಪುನರಾರಂಭಿಸಲಿದೆ. ಈ ಪ್ರಕರಣ ಸಂಬಂಧ ಜೂನ್‌ನಲ್ಲಿ ಹೈಕೋರ್ಟ್ ಸಿಬಿಐ ತನಿಖೆಗೆ ತಡೆ ನೀಡಿತ್ತು. ನಂತರ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖೆಗೆ ತಡೆ ನೀಡಿರುವ ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ತೆರವು ಮಾಡಲು ಅಕ್ಟೋಬರ್ 17 ರಂದು ನ್ಯಾಯಾಲಯ ನಿರಾಕರಿಸಿತ್ತು. ಆದರೆ ನ್ಯಾಯಾಲಯದ ಆದೇಶದ ವಿರುದ್ಧ ಸಿಬಿಐ ಮಾಡಿದ ಮೇಲ್ಮನವಿಯ ಬಗ್ಗೆ ಅವರ ಪ್ರತಿಕ್ರಿಯೆಯನ್ನು ಕೇಳಿತು.
ಏಪ್ರಿಲ್ 2013 ರಿಂದ ಏಪ್ರಿಲ್ 2018 ರ ನಡುವೆ ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರಿಂದ ಸ್ವಾಧೀನಕ್ಕೆ ಪಡೆಯಲಾದ ಒಟ್ಟು ಮೌಲ್ಯವು 128 ಕೋಟಿಯಿಂದ 162 ಕೋಟಿಗೆ ಏರಿಕೆಯಾಗಿದೆ. ಇದು ಸುಮಾರು ಶೇ. 45 ಅಥವಾ ರೂ. 75 ಕೋಟಿಯಷ್ಟು ಏರಿಕೆಯಾಗಿದೆ ಎಂದು ಸಿಬಿಐ ತನ್ನ ಅರ್ಜಿಯಲ್ಲಿ ಆರೋಪಿಸಿತ್ತು.
Advertisement