
ಬೆಂಗಳೂರು: ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಬಿಜೆಪಿ ನಾಯಕರು ಭೇಟಿ ನೀಡುತ್ತಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ಹಾಸನಾಂಬ ದೇಗುಲಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಕಾರಣಗಳಿಗಾಗಿ ಇಂತಹ ಕಸರತ್ತು ಮಾಡುವ ಬದಲು ರಾಜ್ಯದ 25 ಬಿಜೆಪಿ ಸಂಸದರು ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು, ಕೇಂದ್ರವು ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ನೋಡಿಕೊಳ್ಳಬೇಕು. ಕೇಂದ್ರದ ತಂಡವು ರಾಜ್ಯಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಅವಲೋಕಿಸಿದೆ, ಆದರೂ ಕರ್ನಾಟಕಕ್ಕೆ ಕೇಂದ್ರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಹೇಳಿದರು.
ರಾಜ್ಯಕ್ಕೆ 33,700 ಕೋಟಿ ರೂಪಾಯಿ ನಷ್ಟವಾಗಿದ್ದು, 17,900 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಬಿಜೆಪಿ ನಾಯಕರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದರಿಂದ ನಮಗೆ ಯಾವುದೇ ತೊಂದರೆ ಇಲ್ಲ. ಆದರೆ, ಅವರು ರಾಜಕೀಯ ಕಾರಣಗಳಿಗಾಗಿ ಇದನ್ನು ಮಾಡುತ್ತಿರುವುದು ಬೇಸರ ತರಿಸುತ್ತಿದೆ. ಬಿಜೆಪಿಯವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಬದಲು ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಿ ಎಂದು ತಿಳಿಸಿದರು.
ರಾಜ್ಯದಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಮತ್ತು ನೆರವು ಪಡೆಯಲು ರಾಜ್ಯದ ಸಚಿವರನ್ನು ಭೇಟಿ ಮಾಡಲು ಕೇಂದ್ರ ಸಚಿವರು ಸಮಯ ನೀಡುತ್ತಿಲ್ಲ. ಬಿಜೆಪಿ ನಾಯಕರಿಗೆ ರಾಜ್ಯ ಮತ್ತು ರೈತರ ಬಗ್ಗೆ ಕಾಳಜಿ ಇದ್ದರೆ ಕೇಂದ್ರದಿಂದ ಅನುದಾನ ಬಿಡುಗಡೆ ಮಾಡುವಂತೆ ನೋಡಿಕೊಳ್ಳಬೇಕು ಎಂದರು.
ಏತನ್ಮಧ್ಯೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಮತ್ತು ಇತರ ನಾಯಕರು ಬರಪೀಡಿತ ತಾಲೂಕುಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ನೇರವಾಗಿ ಮಾಹಿತಿ ಪಡೆಯುತ್ತಿದ್ದಾರೆ. ಇದೇ ವೇಳೆ ರೈತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದ್ದಾರೆ.
Advertisement