ಎಫ್'ಡಿಎ ಪರೀಕ್ಷೆಯಲ್ಲಿ ಅಕ್ರಮ: ಕೊನೆಗೂ ಸಿಐಡಿ ತನಿಖೆಗೆ ಸರ್ಕಾರ ಆದೇಶ

ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಪರೀಕ್ಷಾ ಅಕ್ರಮ ಪ್ರಕರಣವನ್ನು ರಾಜ್ಯ ಗೃಹ ಇಲಾಖೆ ಸೂಚನೆ ಮೇರೆಗೆ ಶನಿವಾರ ಅಪರಾಧ ತನಿಖಾ ವಿಭಾಗಕ್ಕೆ (ಸಿಐಡಿ) ವರ್ಗಾಯಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಪರೀಕ್ಷಾ ಅಕ್ರಮ ಪ್ರಕರಣವನ್ನು ರಾಜ್ಯ ಗೃಹ ಇಲಾಖೆ ಸೂಚನೆ ಮೇರೆಗೆ ಶನಿವಾರ ಅಪರಾಧ ತನಿಖಾ ವಿಭಾಗಕ್ಕೆ (ಸಿಐಡಿ) ವರ್ಗಾಯಿಸಲಾಗಿದೆ.

ಪರೀಕ್ಷಾ ಅಕ್ರಮ ಸಂಬಂಧ ಯಾದಗಿರಿಯಲ್ಲಿ ಐದು, ಕಲಬುರಗಿ ಟೌನ್‌ನಲ್ಲಿ ಎರಡು ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಒಂದು ಸೇರಿದಂತೆ ಒಟ್ಟು ಎಂಟು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.

ಇದೀಗ ಗೃಹ ಇಲಾಖೆಯು ಸಿಐಡಿಗೆ ತನಿಖೆಗೆ ಆದೇಶಿರುವ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌. ಹಿತೇಂದ್ರ ಅವರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳ ಸಂಬಂಧದ ದಾಖಲೆಗಳನ್ನು ತನಿಖಾಧಿಕಾರಿಗಳಿಂದ ಪಡೆದು ಸಿಐಡಿಗೆ ಹಸ್ತಾಂತರಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ.

ಕಲಬುರಗಿ ಪೊಲೀಸ್ ಕಮಿಷನರ್ ಚೇತನ್ ಆರ್, ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಮತ್ತು ಯಾದಗಿರಿ ಎಸ್ಪಿ ಸಂಗೀತಾ ಪತ್ರ ಸ್ವೀಕರಿಸಿರುವುದನ್ನು ಖಚಿತಪಡಿಸಿದ್ದಾರೆ. ಆದರೆ, ಸಿಐಡಿ ತನಿಖೆಯ ಮೇಲ್ವಿಚಾರಣೆ ನಡೆಸಲಿರುವ ಎಸ್ಪಿಯ ಹೆಸರನ್ನು ಇನ್ನೂ ಪ್ರಕಟಿಸಿಲ್ಲ.

ಕಲಬುರಗಿ ನಗರ, ಕಲಬುರಗಿ ಜಿಲ್ಲೆ ಮತ್ತು ಯಾದಗಿರಿ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಿಗೆ ತಲಾ ಒಬ್ಬರಂತೆ ಮೂವರು ತನಿಖಾ ಅಧಿಕಾರಿಗಳನ್ನು ಸಿಐಡಿ ನೇಮಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿಯಿರುವ ಎಫ್‌ಡಿಎ ಹಾಗೂ ಎಸ್‌ಡಿಎ ಹುದ್ದೆಗಳ ಭರ್ತಿಗಾಗಿ ಕೆಇಎಯಿಂದ ಕಳೆದ ಅ.28 ಹಾಗೂ ಅ.29ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಅದರಂತೆ ಯಾದಗಿರಿಯ 17 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಮೊದಲ ದಿನದ ಪರೀಕ್ಷೆಯಲ್ಲಿ ಇಲ್ಲಿನ ಐದು ಕೇಂದ್ರಗಳಲ್ಲಿ ಬ್ಲೂಟೂತ್‌ ಅಕ್ರಮ ಪತ್ತೆಯಾಗಿದ್ದರಿಂದ, ಅಫಜಲ್ಪುರ ತಾಲೂಕು ಹಾಗೂ ವಿಜಯಪುರ ಜಿಲ್ಲೆ ಮೂಲದ 11 ಜನ ಅಭ್ಯರ್ಥಿಗಳು ಹಾಗೂ ಐವರು ಮಧ್ಯವರ್ತಿಗಳು ಸೇರಿದಂತೆ ಒಟ್ಟು 16 ಜನರನ್ನು ಪೊಲೀಸರು ಬಂಧಿಸಿದ್ದರು.

ಕಲಬುರಗಿಯಲ್ಲಿಯೂ ಇದೇ ತೆರನಾದ ಅಕ್ರಮ ಪತ್ತೆಯಾಗಿ, ಅಲ್ಲಿಯೂ ಹಲವರ ಬಂಧನವಾಗಿತ್ತು. ಸೂಕ್ಷ್ಮವಾದ ಬ್ಲೂಟೂತ್‌ ಸ್ಪೀಕರ್‌ ಕಿವಿಯಲ್ಲಿಟ್ಟುಕೊಂಡು, ಹೊರಗಿನವರ ಮೂಲಕ ಮೊಬೈಲ್‌ನಲ್ಲಿ ಉತ್ತರ ಕೇಳಿಸಿಕೊಂಡು ಬರೆಯುತ್ತಿದ್ದವರನ್ನು ಬಂಧಿಸಲಾಗಿತ್ತು. ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಂತೆ ಇದೂ ಕೂಡ ನಡೆದಿತ್ತು. ಅದರ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ್‌ ಹೆಸರೇ ಇಲ್ಲಿಯೂ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದರಿಂದ ಪೊಲೀಸರು ತನಿಖೆ ನಡೆಸಿದ್ದರು. ಈ ಅಕ್ರಮ ಕೇವಲ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಾತ್ರವಲ್ಲದೆ ರಾಜ್ಯದ ವಿವಿಧೆಡೆಯೂ ನಡೆದಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಓಎಂಆರ್‌ ಶೀಟ್‌ ತಿರುಚುವಿಕೆ ಸಾಧ್ಯತೆ ಬಗ್ಗೆ ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು.

ತನಿಖೆಯನ್ನು ಸಿಐಡಿಗೆ ವಹಿಸಿದರೆ, ವಿವಿಧೆಡೆಯೂ ನಡೆದ ಅಕ್ರಮ ಬಯಲಾಗಬಹುದು ಎಂಬ ಸಲಹೆಗಳು ಮೂಡಿಬಂದಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com