ನಿಗಮ, ಮಂಡಳಿ ನೇಮಕಾತಿ ಪರೀಕ್ಷೆ: ಅಭ್ಯರ್ಥಿಗಳಿಗೆ ಡ್ರೆಸ್ ಕೋಡ್, ಕೆಇಎ ಆದೇಶ!

ರಾಜ್ಯದಲ್ಲಿ ನವೆಂಬರ್ 18 ಮತ್ತು 19 ರಂದು ನಡೆಯಲಿರುವ ವಿವಿಧ  ನಿಗಮ ಮತ್ತು ಮಂಡಳಿಗಳ ನೇಮಕಾತಿ ಪರೀಕ್ಷೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಡ್ರೆಸ್ ಕೋಡ್ ಆದೇಶ  ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 18 ಮತ್ತು 19 ರಂದು ನಡೆಯಲಿರುವ ವಿವಿಧ  ನಿಗಮ ಮತ್ತು ಮಂಡಳಿಗಳ ನೇಮಕಾತಿ ಪರೀಕ್ಷೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಡ್ರೆಸ್ ಕೋಡ್ ಆದೇಶ  ಹೊರಡಿಸಿದೆ.

ಎಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್ ಫೋನ್‌ಗಳು, ಪೆನ್ ಡ್ರೈವ್‌ಗಳು, ಇಯರ್‌ಫೋನ್‌ಗಳು, ಮೈಕ್ರೊಫೋನ್‌ಗಳು, ಬ್ಲೂಟೂತ್ ಸಾಧನಗಳು ಮತ್ತು ಕೈಗಡಿಯಾರಗಳನ್ನು ಒಳಗೊಂಡಿರುವ ನಿಷೇಧಿತ ವಸ್ತುಗಳ ಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಅವುಗಳನ್ನು ಬಳಸಲು ಅನುಮತಿಸಲಾಗುವುದಿಲ್ಲ. ಪರೀಕ್ಷಾ ಕೊಠಡಿಯಲ್ಲಿ ಬ್ಲೂಟೂತ್ ಸಾಧನಗಳ ಬಳಕೆಯನ್ನು ತಡೆಯಲು ಶಿರವಸ್ತ್ರ ಧರಿಸಲು ಅಥವಾ ಇನ್ನಾವುದೇ ಬಟ್ಟೆಯನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಮಾಸ್ಕ್ ಗಳನ್ನೂ ಸಹ ನಿಷೇಧಿಸಲಾಗಿದೆ.

ಪೆನ್ಸಿಲ್, ಪೇಪರ್, ಎರೇಸರ್, ಜ್ಯಾಮಿಟ್ರಿ ಬಾಕ್ಸ್‌ಗಳು ಮತ್ತು ಲಾಗ್ ಟೇಬಲ್‌ಗಳನ್ನು ಸಹ ನಿರ್ಬಂಧಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂವುಗಳು ಅಥವಾ ಗುಂಡಿಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸಲು ಅನುಮತಿಸಲಾಗುವುದಿಲ್ಲ.

ಪರೀಕ್ಷಾ ಕೊಠಡಿಯೊಳಗೆ ಪೂರ್ಣ ತೋಳಿನ ಬಟ್ಟೆ, ಜೀನ್ಸ್ ಪ್ಯಾಂಟ್, ಎತ್ತರದ ಹಿಮ್ಮಡಿಯ ಬೂಟುಗಳು ಅಥವಾ ಚಪ್ಪಲಿಗಳನ್ನು ಧರಿಸುವುದನ್ನು ಸಹ ನಿರ್ಬಂಧಿಸಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಅಭ್ಯರ್ಥಿಯು ಕುತ್ತಿಗೆಯ ಸುತ್ತ ಲೋಹದ ಆಭರಣ ಧರಿಸುವುದು, ಅಥವಾ ಕಿವಿಯೋಲೆ, ಉಂಗುರ, ಕಡಗ ಧರಿಸುವುದನ್ನು ನಿರ್ಬಂಧಿಸಲಾಗಿದೆ. ಅಂತಯೇ, ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ರೀತಿಯಲ್ಲಿ ಯಾವುದೇ ವಸ್ತ್ರ/ ಸಾಧನ ಧರಿಸುವುದನ್ನು ನಿಷೇಧಿಸಲಾಗಿದೆ.

ಪರೀಕ್ಷೆಯ ದಿನದಂದು ಪುರುಷ ಅಭ್ಯರ್ಥಿಗಳಿಗೆ ಪೂರ್ಣ ತೋಳಿನ ಶರ್ಟ್‌ಗಳನ್ನು ಅನುಮತಿಸದ ಕಾರಣ ಅರ್ಧ ತೋಳಿನ ಶರ್ಟ್‌ಗಳನ್ನು ಧರಿಸಲು ತಿಳಿಸಲಾಗಿದೆ. ಕುರ್ತಾ ಪೈಜಾಮ, ಜೀನ್ಸ್ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಧರಿಸುವ ಬಟ್ಟೆಗಳು ಹಗುರವಾಗಿದ್ದು ದೊಡ್ಡ ಎಂಬ್ರಾಯಿಡರಿ, ಜಿಪ್ ಪಾಕೆಟ್‌ಗಳು, ದೊಡ್ಡ ಬಟನ್‌ಗಳು- ಇವುಗಳನ್ನು ಹೊಂದಿರಬಾರದು ಎಂದು ತಿಳಿಸಲಾಗಿದೆ. ಅಭ್ಯರ್ಥಿಗಳು ಶೂ ಹಾಕಿಕೊಂಡು ಪರೀಕ್ಷೆಗೆ ಹಾಜರಾಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com