ಇಂಡಿಗೋ ಏರ್ ಲೈನ್ಸ್ ಸಿಬ್ಬಂದಿ ಯಡವಟ್ಟು, ಶಿವಮೊಗ್ಗ ತೆರಳಬೇಕಾದ ಪ್ರಯಾಣಿಕರ ಪರದಾಟ!

ಇಂಡಿಗೋ ಏರ್‌ಲೈನ್ಸ್‌ನ ಸಿಬ್ಬಂದಿಯ ಸಮನ್ವಯದ ಕೊರತೆ ಮತ್ತು ತಪ್ಪು ಮಾಹಿತಿಯಿಂದಾಗಿ ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ್ಟಿದ್ದ ವಿಮಾನ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.
ಶಿವಮೊಗ್ಗಕ್ಕೆ ಕಾರಿನಲ್ಲಿ ತೆರಳಿದ ಪ್ರಯಾಣಿಕರು
ಶಿವಮೊಗ್ಗಕ್ಕೆ ಕಾರಿನಲ್ಲಿ ತೆರಳಿದ ಪ್ರಯಾಣಿಕರು

ಶಿವಮೊಗ್ಗ: ಇಂಡಿಗೋ ಏರ್‌ಲೈನ್ಸ್‌ನ ಸಿಬ್ಬಂದಿಯ ಸಮನ್ವಯದ ಕೊರತೆ ಮತ್ತು ತಪ್ಪು ಮಾಹಿತಿಯಿಂದಾಗಿ ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ್ಟಿದ್ದ ವಿಮಾನ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ಟರ್ಮಿನಲ್ 1 ರಿಂದ ಬೆಳಗ್ಗೆ 9-50ಕ್ಕೆ ಹೊರಡಬೇಕಾಗಿದ್ದ ವಿಮಾನ 6ಇ-7731 45 ನಿಮಿಷ ತಡವಾಗಿ ನಿರ್ಗಮಿಸಲಿದೆ ಎಂದು ಪ್ರಯಾಣಿಕರಿಗೆ ತಿಳಿಸಿದ ನಂತರ ತಾಂತ್ರಿಕ ಕಾರಣ ನೀಡಿ ವಿಮಾನಗಳನ್ನು ರದ್ದುಗೊಳಿಸಿದೆ.

ಪ್ರಯಾಣಿಕರು ತಮ್ಮ ಚೆಕ್ ಇನ್ ಲಗ್ಗೇಜ್ ತೆಗೆದುಕೊಂಡು, ಮತ್ತೆ ಕೆಲವರು ವಿಮಾನ ನಿಲ್ದಾಣದಿಂದ ಹೊರ ಬಂದ ನಂತರ 2.5 ಗಂಟೆಗಳ ನಂತರ ಮತ್ತೆ ವಿಮಾನ ಕಾರ್ಯನಿರ್ವಹಿಸಲಿದೆ ಎಂಬ ಕರೆ ಬಂದಿದೆ. ಶಿವಮೊಗ್ಗದ ನೂತನ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಿಂದ ಆಗಸ್ಟ್ 31 ರಂದು ವಿಮಾನ ಹಾರಾಟ ಆರಂಭವಾದ ನಂತರ ಇಂಡಿಗೋ ವಿಮಾನಯಾನ ಸಂಸ್ಥೆ ಮಾತ್ರ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಿಂದ ಶಿವಮೊಗ್ಗಕ್ಕೆ ವಿಮಾನ ಸೇವೆ ಒದಗಿಸುತ್ತಿದೆ. 78 ಆಸನಗಳನ್ನು ಹೊಂದಿರುವ ಎಟಿಆರ್-72 ವಿಮಾನ ಕಾರ್ಯಾಚರಣೆ ನಡೆಸುತ್ತಿದೆ. 

ಎಲ್ಲ ಕಡೆಯ ಗೊಂದಲದಿಂದ ಪ್ರಯಾಣಿಕರು ನಿರಾಶೆಗೊಂಡರು. ವಿವಿಧ ನಗರಗಳಿಂದ ಆಗಮಿಸಿದ್ದ ಶಂಕರ ಕಣ್ಣಿನ ಆಸ್ಪತ್ರೆಯ ನಾಲ್ಕು ಸದಸ್ಯರ ವೈದ್ಯರ ತಂಡವು ಅನೇಕ ಸಭೆಗಳಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ಹೊರಟಿತ್ತು. ಇವರಲ್ಲಿ ಡಾ.ಕೌಶಿಕ್ ಮುರಳಿ ಬೆಂಗಳೂರಿನವರಾಗಿದ್ದರೆ, ದೆಹಲಿಯಿಂದ ಡಾ.ಕಾಜಲ್ ಬನ್ಸಾಲ್, ಕೊಯಮತ್ತೂರಿನಿಂದ ಡಾ.ಭರತ್ ಬಾಲಸುಬ್ರಮಣ್ಯಂ ಮತ್ತು ಚೆನ್ನೈನಿಂದ ಡಾ.ಪಿ.ಜಾನಕಿರಾಮನ್ ಬಂದಿದ್ದರು. ಅಂದುಕೊಂಡಂತೆ ಬೆಳಗ್ಗೆ 11.05ಕ್ಕೆ ಶಿವಮೊಗ್ಗ ತಲುಪುವ ಬದಲು ಕಾರಿನಲ್ಲಿ ಧಾವಿಸಿ ಸಂಜೆ 6.15ಕ್ಕೆ ತಲುಪಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಡಾ ಮುರಳಿ, ದೊಡ್ಡಬಳ್ಳಾಪುರ ದಾಟಿದ ನಂತರ 12-50ಕ್ಕೆ ವಿಮಾನ ನಿರ್ಗಮಿಸುವುದಾಗಿ ಕರೆ ಬಂದಿತ್ತು. ಸಿಬ್ಬಂದಿ ನಡುವಿನ ಸಮನ್ವಯದ ಕೊರತೆ ನಮಗೆ ಆಘಾತ ತಂದಿತು ಎಂದರು. 

ಮರುನಿಗದಿಪಡಿಸಲಾದ ವಿಮಾನ ಮಧ್ಯಾಹ್ನ 1.10 ಕ್ಕೆ ಕೆಐಎಯಿಂದ ಹೊರಟು ಅಂತಿಮವಾಗಿ 2.15 ಕ್ಕೆ ಶಿವಮೊಗ್ಗ ತಲುಪಿದೆ. ನಿಗದಿತ ಸಮಯಕ್ಕಿಂತ ಮೂರು ಗಂಟೆ ತಡವಾಗಿ ಬಂದಿದೆ.

ವಿಮಾನ ವಿಳಂಬವಾದ್ದರಿಂದ ರದ್ದಗೊಳಿಸಲಾಗಿತ್ತು. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ತಿಂಡಿ,ಊಟ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com