ಗಿಗ್ ಕಾರ್ಮಿಕರಿಗೆ ಯುನಿವರ್ಸಲ್ ಐಡಿ ಕಾರ್ಡ್ ನೀಡುವ ಕುರಿತು ಚಿಂತನೆ: ಸಚಿವ ಸಂತೋಷ್ ಲಾಡ್

ಆಹಾರ ವಿತರಣಾ ಆ್ಯಪ್‌ಗಳು ಮತ್ತು ಇ-ಕಾಮರ್ಸ್ ಕಂಪನಿಗಳೊಂದಿಗೆ ಕೆಲಸ ಮಾಡುವ ಗಿಗ್ ಯುನಿವರ್ಸಲ್ ಐಡಿ ಕಾರ್ಡ್ ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದ್ದು, ಇದರಿಂದ ಅವರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸೋಮವಾರ ಹೇಳಿದರು.
ಸಚಿವ ಸಂತೋಷ್ ಲಾಡ್
ಸಚಿವ ಸಂತೋಷ್ ಲಾಡ್

ಉಡುಪಿ: ಆಹಾರ ವಿತರಣಾ ಆ್ಯಪ್‌ಗಳು ಮತ್ತು ಇ-ಕಾಮರ್ಸ್ ಕಂಪನಿಗಳೊಂದಿಗೆ ಕೆಲಸ ಮಾಡುವ ಗಿಗ್ ಯುನಿವರ್ಸಲ್ ಐಡಿ ಕಾರ್ಡ್ ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದ್ದು, ಇದರಿಂದ ಅವರು ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸೋಮವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಗಿಗ್ ಕಾರ್ಯಕರ್ತರ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಿಯಮಾವಳಿಗಳನ್ನು ರೂಪಿಸಲಾಗುತ್ತಿದ್ದು, ಇದನ್ನು ಕಾನೂನಿನ ಅಡಿಯಲ್ಲಿ ತರಲಾಗುವುದು ಎಂದು ಹೇಳಿದರು.

ಗಿಗ್ ಕಾರ್ಮಿಕರ ಕುರಿತ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಎಲ್ಲಾ ಗಿಗ್ ಗಿಗ್ ಕಾರ್ಮಿಕರಿಗೆ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಲು ಅವರಿಗೆ ಅವಕಾಶ ನೀಡಲಾಗುತ್ತದೆ. ಈ ಸೌಲಭ್ಯವು ರಾಜ್ಯದ ಸುಮಾರು 4-5 ಲಕ್ಷ ಜನರಿಗೆ ಸಹಾಯ ಮಾಡುತ್ತದೆ. ಅಸಂಘಟಿತ ವಲಯದ ವ್ಯಾಪಾರಿಗಳು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ನೌಕರರು, ಟೈಲರ್‌ಗಳು ಮತ್ತು ಇತರ ಎಲ್ಲ ಕಾರ್ಮಿಕರಿಗೆ ಸಹಾಯ ಮಾಡಲು ಸಾರ್ವತ್ರಿಕ ಸಾಮಾಜಿಕ ಭದ್ರತಾ ಮಸೂದೆಯನ್ನು ಪರಿಚಯಿಸಲು ಸರ್ಕಾರ ಯೋಜಿಸಿದೆ. ಸರ್ಕಾರದ ಮುಂದೆ ರಾಜಸ್ಥಾನ ಮಾದರಿ ಮಸೂದೆ ಇದ್ದು, ಅದರ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತ ಮಸೂದೆಯು ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ಕೂಲಿಕಾರರ ಮಕ್ಕಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನದಲ್ಲಿ ಕಡಿತ ಮಾಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿ,  ವಿದ್ಯಾರ್ಥಿ ವೇತನ ನಾವು ಕಡಿತ ಮಾಡಿಲ್ಲ. 2021 ರಲ್ಲಿ 2,000 ಇದ್ದ ವಿದ್ಯಾರ್ಥಿ ವೇತನ ಎಂಟು ಸಾವಿರಕ್ಕೆ ಏರಿಸಿದರು. 10,000 ನೀಡುವವರಿಗೆ 30,000 ಕೊಟ್ಟರು. ಮೂವತ್ತು ಸಾವಿರ ಕೊಡುವವರಿಗೆ ಒಂದು ಲಕ್ಷ ರೂ. ಕೊಟ್ಟರು. ಇದು ಅವೈಜ್ಞಾನಿಕ ಕ್ರಮವಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಏಕಾಏಕಿ 39 ಲಕ್ಷ ಕಾರ್ಡ್ ಬೇಡಿಕೆ ಬಂತು.

ಹಾವೇರಿ ಜಿಲ್ಲೆಯಲ್ಲಿ ಮೂರು ಲಕ್ಷ ಕಾರ್ಡುಗಳಿವೆ. ಇದರಲ್ಲಿ ಅನೇಕ ನಕಲಿ ಕಾರ್ಡುಗಳಿವೆ. ಈ ಬಾರಿ 13 ಲಕ್ಷ ಅರ್ಜಿಗಳು ಬಂದಿವೆ. ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ 9 ಲಕ್ಷ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇವೆ, ವೈಜ್ಞಾನಿಕ ರೀತಿಯಲ್ಲಿ ಈ ಸಮಸ್ಯೆ ನಿರ್ವಹಿಸುತ್ತೇವೆ. ನಿಜವಾದ ಕಾರ್ಮಿಕರ ಮಕ್ಕಳಿಗೆ ಸರ್ಕಾರದಿಂದ ಸಹಾಯ ಸಿಗಬೇಕು. ಈ ಹಿನ್ನೆಲೆಯಲ್ಲಿ ನಕಲಿ ಕಾರ್ಡ್ ಗಳು ಯಾವುದು ಎಂಬುದನ್ನು ಪತ್ತೆ ಹಚ್ಚುತ್ತೇವೆ. ಅಧಿಕಾರಿಗಳು ಈ ಕೆಲಸ ಮಾಡುತ್ತಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com