ಬೆಂಗಳೂರಿನಲ್ಲಿ ಮೊದಲ 'ಕಂಬಳ': ವೇದಿಕೆಗೆ ಪವರ್ ಸ್ಟಾರ್ ಪುನೀತ್‌ ರಾಜಕುಮಾರ್ ಹೆಸರು

ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕರಾವಳಿ ಕರ್ನಾಟಕದ ಜನಪ್ರಿಯ ಕೋಣಗಳ ಓಟದ ಸ್ಪರ್ಧೆ 'ಕಂಬಳ'ಕ್ಕೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 25 ಮತ್ತು 26 ರಂದು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಅರಮನೆ ಮೈದಾನದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕರಾವಳಿ ಕರ್ನಾಟಕದ ಜನಪ್ರಿಯ ಕೋಣಗಳ ಓಟದ ಸ್ಪರ್ಧೆ 'ಕಂಬಳ'ಕ್ಕೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 25 ಮತ್ತು 26 ರಂದು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಅರಮನೆ ಮೈದಾನದಲ್ಲಿ ಕಂಬಳ ನಡೆಯುತ್ತಿದೆ ಎಂದು ಕಾರ್ಯಕ್ರಮದ ಆಯೋಜಕರು ಬುಧವಾರ ತಿಳಿಸಿದ್ದಾರೆ.

‘ಕಂಬಳ’ದ ಜೊತೆಗೆ ಇಡೀ ಕರಾವಳಿ ಕರ್ನಾಟಕ “ಸಂಸ್ಕೃತಿ”ಯನ್ನು ರಾಜ್ಯದ ರಾಜಧಾನಿಯಲ್ಲಿ ಅನಾವರಣಗೊಳಿಸಲು ಸಂಘಟಕರು ನಿರ್ಧರಿಸಿದ್ದಾರೆ.

ತುಳುನಾಡಿನ ಕಂಬಳವನ್ನು ಬೆಂಗಳೂರಿಗೆ ತರುವುದು ನಮ್ಮ ಬದ್ಧತೆ ಮತ್ತು ಕನಸಾಗಿತ್ತು. ಕರಾವಳಿ ಕರ್ನಾಟಕದ ಸಂಸ್ಕೃತಿ, ಪಾಕಪದ್ಧತಿ ಮತ್ತು ಪರಂಪರೆಯನ್ನು ನಿಮಗಾಗಿ ತರುತ್ತಿದ್ದೇವೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕರಾವಳಿ ಕರ್ನಾಟಕದ ಸಮುದಾಯ ಕಂಬಳವನ್ನು ಜಗತ್ತಿಗೆ ಪ್ರದರ್ಶಿಸಲು ಬಯಸಿದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಬ್ಲಾಕ್‌ಬಸ್ಟರ್ 'ಕಾಂತಾರ' ಚಿತ್ರ ಕಂಬಳವನ್ನು ಒಳಗೊಂಡಿದ್ದು, ತುಳುನಾಡು ಹೊರಗಿನ ಅನೇಕರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ ಎಂದು ಶೆಟ್ಟಿ ಅವರು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ 139 ಜೋಡಿ ಕೋಣಗಳು ಈಗಾಗಲೇ ಕರಾವಳಿ ಪ್ರದೇಶದಿಂದ ಬೆಂಗಳೂರಿಗೆ ತೆರಳಿವೆ. ಮಾಜಿ ಸಚಿವ ಹಾಗೂ ಹೊಳೆನರಸೀಪುರ ಶಾಸಕ ಎಚ್ ಡಿ ರೇವಣ್ಣ ಅವರು ಕೋಣಗಳು ಮತ್ತು ಅವುಗಳ ಜೊತೆಗಿರುವ ಜನರ ಆಹಾರ ಮತ್ತು ವಾಸ್ತವ್ಯದ ಖರ್ಚುವೆಚ್ಚ ನೋಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಶೆಟ್ಟಿ ಹೇಳಿದ್ದಾರೆ.

ಮುಖ್ಯ ವೇದಿಕೆಗೆ ಎರಡು ವರ್ಷಗಳ ಹಿಂದೆ ನಿಧನರಾದ ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಇಡಲಾಗಿದೆ. ಸಾಂಸ್ಕೃತಿಕ ವೇದಿಕೆಗೆ ಕೃಷ್ಣ ರಾಜ ಒಡೆಯರ್ ಹೆಸರು ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜೇತರಿಗೆ 16 ಗ್ರಾಂ ಚಿನ್ನ ಮತ್ತು ಒಂದು ಲಕ್ಷ ರೂ., ಮೊದಲ ರನ್ನರ್ ಅಪ್ ಗೆ ಎಂಟು ಗ್ರಾಂ ಚಿನ್ನ ಮತ್ತು ರೂ. 50,000 ಹಾಗೂ ಎರಡನೇ ರನ್ನರ್ ಅಪ್ ಗೆ ನಾಲ್ಕು ಗ್ರಾಂ ಚಿನ್ನ ಮತ್ತು 25,000 ರೂ. ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com