ಬೆಂಗಳೂರು: ದೇವಾಲಯ ಏಕತೆ ಮತ್ತು ಎಲ್ಲರೂ ಒಳ್ಳಗೊಳ್ಳುವಿಕೆಯ ಸಂಕೇತ. ಅಸ್ಪೃಶ್ಯತೆ ಆಚರಣೆ ಸಾಂವಿಧಾನಬಾಹಿರ ಎಂದು ತಿಳಿಸಿದ್ದೂ, ಗ್ರಾಮೀಣ ಭಾಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ದೇವಾಲಯ ಪ್ರವೇಶ ಮತ್ತು ಪೂಜೆಗೆ ನಿರಾಕರಿಸಿ ಅಡ್ಡಿ ಪಡಿಸುವ ಪ್ರಕ್ರಿಯೆ ಮುಂದುವರೆದಿರುವುದು ದುರುದೃಷ್ಟಕರ ಎಂದು ಹೈಕೋರ್ಟ್ ಗುರುವಾರ ಬೇಸರ ವ್ಯಕ್ತಪಡಿಸಿದೆ.
ದೇವಾಲಯಕ್ಕೆ ದಲಿತ ಕುಟುಂಬ ಪ್ರವೇಶಕ್ಕೆ ಅಡ್ಡಿಪಡಿಸಿ, ಜಾತಿ ಹೆಸರಿನಲ್ಲಿ ನಿಂದಿಸಿ ಹಲ್ಲೆ ನಡೆಸಿದ ಆರೋಪದಲ್ಲಿ ತಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸುವಂತೆ ಕೋರಿ ಪಾಂಡುರಗ ಭಟ್ ಸೇರಿದಂತೆ ಇತರೆ ಏಳು ಮಂದಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪಪೀಠ, ಈ ಆದೇಶ ನೀಡಿದೆ.
ಪ್ರಕರಣದಲ್ಲಿ ದೂರುದಾರರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣದಿಂದ ಅರ್ಜಿದಾರರು ದೇವಾಲಯಕ್ಕೆ ಪ್ರವೇಶಕ್ಕೆ ನಿರಾಕರಿಸಿರುವ ವರ್ತನೆ ಪ್ರತಿಗಾಮಿ ನಡೆ. ಈ ರೀತಿಯ ಬೆಳವಣಿಗೆ ನಡೆಯುತ್ತಿರುವುದು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುತ್ತದೆ. ಮನುಷ್ಯರು ಮನುಷ್ಯರಂತೆ ನಡೆದುಕೊಳ್ಳಬೇಕು. ಈ ರೀತಿಯ ತಾರತಮ್ಯ ತಕ್ಷಣ ನಿಲ್ಲುವಂತಾಗಬೇಕು ಎಂದು ತಿಳಿಸಿದೆ.
ದೂರುದಾರರ ವಾದವನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ನ್ಯಾಯಪೀಠ, ದೇವಾಲಯದ ಹೊರಭಾಗವೂ ಸಾರ್ವಜನಿಕ ಸ್ಥಳವಾಗಿದೆ. ದೂರುದಾರರು ಮತ್ತವರ ಕಟುಂಬಸ್ಥರು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಗೊತ್ತಾಗಿರುವುದರಿಂದಲೇ ಅವರನ್ನು ಅವಮಾನಿಸುವುದಕ್ಕಾಗಿ ದೇವಾಲಯ ಪ್ರವೇಶಕ್ಕೆ ತಡೆಹಿಡಿದಿದ್ದಾರೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, 2016ರಲ್ಲಿ ಪ್ರಕರಣ ನಡೆದಿದ್ದು, ಸುಮಾರು 8 ವರ್ಷಗಳೇ ಕಳೆದಿವೆ. ಆದ್ದರಿಂದ ವಿಚಾರಣಾ ನ್ಯಾಯಾಲಯ ಮುಂದಿನ ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿ ಪೀಠ ಆದೇಶಿಸಿದೆ.
ಏನಿದು ಪ್ರಕರಣ?
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ವಿನಾಯಕ ನಗರ ಕ್ಯಾಂಪ್‌ನ ಕುಟುಂಬಸ್ಥರು 2016ರ ಸೆಪ್ಟಂಬರ್ 17ರಂದು ಗಡಿಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಇವರಿಗೆ ಜಾತಿ ಹೆಸರನ್ನು ಉಲ್ಲೇಖಿಸಿ ದೇವಾಲಯ ಪ್ರವೇಶಕ್ಕೆ ಅಡ್ಡಿಪಡಿಸಲಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಹಲ್ಲೆ ನಡೆಸಿದ್ದರು. ಈ ಸಂಬಂಧ ಸಾವಿತ್ರಮ್ಮ ದಾವಣಗೆರೆ ಜಿಲ್ಲೆ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ(ದೌರ್ಜನ್ಯ ತಡೆ)ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಆ ಬಳಿಕ ಪ್ರಕರಣ ರದ್ದು ಕೋರಿ ವಿನಾಯಕ ಕ್ಯಾಂಪ್ ಬಳಿಯ ಸ್ವರೂಪ್ ಆಶ್ರಮದ ಪಾಂಡುರಂಗ ಭಟ್, ಕುಮಾರಿ ಉಶಾ, ಕುಮಾರಿ ಶಾರದಾ, ವಿಲಾಸ್ ಲಾಡವ, ವೆಂಕಟನಾರಾಯಣಾ, ಚಿದಾನಂದ, ರವಿ ಮತ್ತು ಉಮಾ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ 2022ರಲ್ಲಿ ವಜಾಗೊಳಿಸಿ ಆದೇಶಿಸಿತ್ತು. ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗಳು ದೂರಿನಲ್ಲಿ ತಿಳಿಸಿರುವಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಿಸಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಅಂಶಗಳಿಲ್ಲ. ಅಲ್ಲದೆ, ದೂರುದಾರರು ಹಾಗೂ ಅರ್ಜಿದಾರರ ನಡುವೆ ಗಲಾಟೆ ನಡೆದಿರುವುದು ದೇವಾಲಯದ ಗೋಡೆಯ ಬಳಿಯಲ್ಲಿ ಅದು ಸಾರ್ವಜನಿಕ ಸ್ಥಳವಾಗುವುದಿಲ್ಲ. ಹೀಗಾಗಿ ತಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸಬೇಕು ಎಂದು ಕೋರಿದ್ದರು.
Advertisement