ಡಿಕೆಶಿ ವಿರುದ್ಧದ​ ಸಿಬಿಐ ತನಿಖೆಗೆ ಅನುಮತಿ ವಾಪಸ್: ಗೊತ್ತಿಲ್ಲ ಎಂದ ಡಿಸಿಎಂ; ಕಾನೂನಿನ ಚೌಕಟ್ಟಿನೊಳಗೆ ನಿರ್ಧಾರ ಎಂದ ಸರ್ಕಾರ

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಅನುಮತಿ ವಾಪಸ್ ಪಡೆಯುವ​ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದ್ದು, ಈ ಬಗ್ಗೆ ವಿರೋಧ, ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಅನುಮತಿ ವಾಪಸ್ ಪಡೆಯುವ​ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದ್ದು, ಈ ಬಗ್ಗೆ ವಿರೋಧ, ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಿ.ಕೆ.ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ಅಂದಿನ ಸರ್ಕಾರ ಕಾನೂನುಬದ್ಧ ಕ್ರಮ ಅನುಸರಿಸಿಲ್ಲ. ಸರ್ಕಾರಿ ಸೇವೆಯಲ್ಲಿರುವವರ ವಿರುದ್ಧದ ತನಿಖೆಗೆ ಕಾನೂನಾತ್ಮಕ ಮಾನದಂಡಗಳಿವೆ. ಅದರನ್ವಯ ಅಂದು ಶಾಸಕರಾಗಿದ್ದ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡುವ ಮುನ್ನ ಸ್ಪೀಕರ್ ಅನುಮತಿ ಪಡೆಯಬೇಕಿತ್ತು. ಆದರೆ ಸರ್ಕಾರ ಸ್ಪೀಕರ್ ಅನುಮತಿ ಪಡೆದಿಲ್ಲ. ಅಡ್ವೊಕೇಟ್ ಜನರಲ್​ರಿಂದ ಕಾನೂನು ಸಲಹೆ ಪಡೆದಿದೆಯಾದರೂ, 25 ಸೆಪ್ಟೆಂಬರ್ 2019ರಂದು ಆ ಸಲಹೆ ದೊರೆತಿದೆ. ಆದರೆ ಅದಕ್ಕೂ ಮುನ್ನವೇ ಅಂದಿನ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ಮೌಖಿಕವಾಗಿ ಆದೇಶಿಸಿದ್ದರು. ಆ ಮೌಖಿಕ ಆದೇಶದ ಅನುಸಾರ ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸಿಬಿಐ ತನಿಖೆಗೆ ಸಮ್ಮತಿ ನೀಡಿರುವುದು ಕಾನೂನುಬಾಹಿರ'' ಎಂದು ಹೇಳಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಇದು ರಾಜಕೀಯ ಪ್ರೇರಿತ ಅಲ್ಲ. ಯಡಿಯೂರಪ್ಪ ಅವರು ಮೌಖಿಕ ನಿರ್ದೇಶನ ಕೊಟ್ಟು ಸಿಬಿಐ ತನಿಖೆಗೆ ಕೊಡಿ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಮೌಖಿಕ ಆದೇಶ ಕೊಟ್ಟಿದ್ದು ರಾಜಕೀಯ ಪ್ರೇರಿತ ಅಲ್ಲವೇ? ನಾವು ಕಾನೂನಿನ ಚೌಕಟ್ಟಿನೊಳಗೆ ನಿರ್ಧಾರ ಕೈಗೊಂಡಿದ್ದೇವೆ. ಕಾನೂನು ಚೌಕಟ್ಟಿನಲ್ಲಿ ನಮ್ಮ ಇತಿಮಿತಿಯಲ್ಲಿ ತೀರ್ಮಾನ ಮಾಡಿದ್ದೇವೆ. ಹಾಗಾಗಿ ಇದು ರಾಜಕೀಯ ಪ್ರೇರಿತ ಅಲ್ಲ ಎಂದು ಹೇಳಿದರು.

ರಾಜಕೀಯ ಪ್ರೇರಿತ ಬಿಜೆಪಿ ಅವರು ಮಾಡಿದಾಗ ಒಂದು, ನಾವು ಮಾಡಿದಾಗ ಒಂದು ಆಗೋದಿಲ್ಲ. ಎಲ್ಲವೂ ಒಂದೇ ರೀತಿ ಆಗುತ್ತದೆ. ಸರ್ಕಾರ ಕೇಸ್ ವಾಪಸ್ ಪಡೆದಿದೆ. ಮುಂದೆ ಏನು ಆಗುತ್ತದೆ ಗೊತ್ತಿಲ್ಲ. ಸಂಪುಟದ ನಿರ್ಧಾರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಕಾನೂನು ಚೌಕಟ್ಟಿನಲ್ಲಿ ಏನಾಗಿದೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸುತ್ತೇವೆ. ಮುಂದೆ ನ್ಯಾಯಾಲಯ, ಸಿಬಿಐ ಏನು ಮಾಡುತ್ತದೆ ಅದು ಅವರಿಗೆ ಬಿಟ್ಟ ವಿಚಾರ. ನಾವು ಅದರ ಬಗ್ಗೆ ಮೊದಲೇ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.

ಇದು ಶಾಸಕಾಂಗ-ನ್ಯಾಯಾಂಗದ ನಡುವೆ ತಿಕ್ಕಾಟ ವಿಚಾರ ಅಲ್ಲ. ಈ ಬಗ್ಗೆ ಮೊದಲೇ ಕೇಸ್ ತನಿಖೆಗೆ ಕೊಟ್ಟವರಿಗೆ ಗೊತ್ತಾಗಬೇಕಿತ್ತು. ಒಬ್ಬ ಎಂಎಲ್‌ಎ ಮೇಲೆ ಕೇಸ್ ಮಾಡೋವಾಗ ಸ್ಪೀಕರ್ ಅನುಮತಿ ಪಡೆಯಬೇಕು ಎಂಬ ನಿಯಮ ಮಾಡಿದ್ದಾರೆ. ಅದು ವ್ಯವಸ್ಥೆಯಲ್ಲಿ ಇರುವ ನಿಯಮ. ಅದನ್ನು ಮಾಡಿದರೆ ಪ್ರಕ್ರಿಯೆ ಲೋಪ ಆಗುತ್ತಿರಲಿಲ್ಲ. ಹೀಗಾಗಿ ನಾವು ತಪ್ಪಾಗಿದ್ದನ್ನು ಸರಿ ಮಾಡಿದ್ದೇವೆ. ಮೆರಿಟ್ ಆಫ್ ಕೇಸ್‌ಗೆ ನಾವು ಹೋಗಿಯೇ ಇಲ್ಲ. ಆದಾಯ ಮೀರಿ ಆಸ್ತಿ ಗಳಿಸಿದ್ದಾರೆ ಎನ್ನುವುದು ನಮಗೆ ಸಂಬಂಧವಿಲ್ಲ. ಕಾನೂನು ಲೋಪದ ವಿಚಾರ ಬಂದಾಗ ಸರ್ಕಾರಕ್ಕೆ ಜವಾಬ್ದಾರಿ ಇದೆ. ಹೀಗಾಗಿ ಅದರ ಬಗ್ಗೆ ಕ್ರಮವಹಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಬಿಜೆಪಿ-ಜೆಡಿಎಸ್ ವ್ಯಾಖ್ಯಾನ ಅವರಿಗೆ ಬಿಟ್ಟಿದ್ದು. ನಾವು ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ಹಿಂದಿನ ಸರ್ಕಾರ ಮಾಡಿದ ನಿರ್ಧಾರ ಸರಿಯಿಲ್ಲ ಎಂದು ನಾವು ಕೇಸ್ ತನಿಖೆಗೆ ಅನುಮತಿ ವಾಪಸ್ ಪಡೆದಿದ್ದೇವೆ. ಅಂದಿನ ಸಿಎಂ ಅವರು ಯಾವ ಕಾರಣಕ್ಕೆ ಮೌಖಿಕ ಆದೇಶ ಕೊಟ್ಟರು? ಅದನ್ನು ಸಿಎಸ್ ಹೇಗೆ ಪಾಲನೆ ಮಾಡಿದರು? ಸಿಎಸ್ ಆದವರು ಸಿಎಂ ಹೇಳಿದ್ದನ್ನು ಬರವಣಿಗೆಯಲ್ಲಿ ತೆಗೆದುಕೊಳ್ಳಬೇಕಿತ್ತು. ಇಂತಹ ಸೂಕ್ಷ್ಮ ವಿಚಾರದಲ್ಲಿ ಬರವಣಿಗೆಯ ಮೂಲಕ ತೆಗೆದುಕೊಳ್ಳದೇ ಇದ್ದರೆ ಹೇಗೆ? ಇದೆಲ್ಲವನ್ನು ಹಿಂದಿನ ಸರ್ಕಾರ ಯೋಚನೆ ಮಾಡಬೇಕಿತ್ತು. ಬಿಜೆಪಿ ಸರ್ಕಾರ ತಪ್ಪು ಮಾಡಿತ್ತು ಎಂದು ನಾವು ಆ ತಪ್ಪನ್ನು ಮುಂದುವರಿಸಲು ಆಗುವುದಿಲ್ಲ. ಬಿಜೆಪಿ ಮಾಡಿದ ತಪ್ಪನ್ನು ನಾವು ಮುಂದುವರಿಸಿಕೊಂಡು ಹೋಗಬೇಕೆಂದು ಇಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಸಂಪುಟ ತೆಗೆದುಕೊಂಡಿರುವ ನಿರ್ಧಾರ ಕಾನೂನು ಸಂದೇಶ ಕೊಡುತ್ತದೆ. ಕಾನೂನು ಲೋಪ ಆಗಿತ್ತು. ಅದನ್ನು ಸರಿ ಮಾಡಿದ್ದೇವೆ. ಸಂಪುಟದ ಈ ನಿರ್ಧಾರ ಕಾನೂನಿನ ಸಂದೇಶ ಕೊಡುತ್ತದೆ. ನಾವು ಸಂಪುಟದ ನಿರ್ಧಾರವನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುತ್ತೇವೆ. 2-3 ದಿನಗಳಲ್ಲಿ ಸರ್ಕಾರದ ಆದೇಶ ಮಾಡುತ್ತೇವೆ. ಅದಾದ ಮೇಲೆ ನ್ಯಾಯಾಲಯ ಯಾವ ಆದೇಶ ನೀಡುತ್ತದೆ ನೋಡೋಣ. ಇದನ್ನು ಸ್ವೀಕಾರ ಮಾಡುತ್ತಾರೆಯೇ? ಇಲ್ಲವೇ? ಸರ್ಕಾರಕ್ಕೆ ಯಾವ ನಿರ್ದೇಶನ ಬರುತ್ತದೆ ನೋಡೋಣ ಎಂದರು.

ಇನ್ನು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ, ಸಂಪುಟ ನಿರ್ಧಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಈ ವಿಚಾರವನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ನಿನ್ನೆ ನಾನು ಸಚಿವ ಸಂಪುಟ ಸಭೆಗೆ ಹೋಗಲು ಆಗಲಿಲ್ಲ. ಈ ಬಗ್ಗೆ ಯಾರು ಮಾತನಾಡಬೇಕೋ ಅವರೇ ಮಾತನಾಡುತ್ತಾರೆಂದು ತಿಳಿಸಿದರು. ಈ ಮೂಲಕ ಈ ಬಗ್ಗೆ ತಮಗೆ ಏನು ಗೊತ್ತಿಲ್ಲ. ಸಂಪುಟ ಈ ನಿರ್ಧಾರ ತೆಗೆದುಕೊಂಡಿದೆ ಎನ್ನುವ ಅರ್ಥದಲ್ಲಿ ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ವಿರೋಧ ಪಕ್ಷವನ್ನು ಮುಗಿಸಬೇಕು ಎಂದು ಸಂಚು ಮಾಡುತ್ತಿದೆ. ವಿಪಕ್ಷದವರ ಧ್ವನಿ ಕಟ್ಟಿಹಾಕಲು ಕೆಲವರನ್ನು ಐಟಿ ಮತ್ತು ಇಡಿ ಮೂಲಕ ಹೆದರಿಸುತ್ತಿದೆ. ಎಐಸಿಸಿ ಅಧ್ಯಕ್ಷರಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷರ ತನಕವೂ ನಾಯಕರ ವಿರುದ್ದ ಸಂಚು ರೂಪಿಸುತ್ತಿದೆ. ಅನವಶ್ಯಕವಾಗಿ ಡಿಕೆ ಶಿವಕುಮಾರ್​ ಅವರ ವಿರುದ್ದ  ಹಿಂದಿನ ಬಿಜೆಪಿ ಸರ್ಕಾರ ಪ್ರಾಮಾಣಿಕವಾಗಿ ಸಂಚು ರೂಪಿಸುವ ಕೆಲಸ ಮಾಡಿತ್ತು. ಕೊಲೆ ಮಾಡಿದರೂ ಪರವಾಗಿಲ್ಲ ಅಂತವರಿಗೆ ಏನೂ ಆಗಿಲ್ಲ. ಆದರೆ. ನಮ್ಮನ್ನು ಮಾತ್ರ ಹೆದರಿಸುತ್ತಾರೆಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com