ಹವಾಮಾನ: ಕಂಬಳಕ್ಕೆ ತಂಪೆರೆದ ವರುಣ, ಮಳೆಯಲ್ಲೂ ಕೋಣಗಳ ಭರ್ಜರಿ ಓಟ

ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕರಾವಳಿ ಕ್ರೀಡೆ ಕಂಬಳವನ್ನು ಆಯೋಜನೆ ಮಾಡಲಾಗಿದ್ದು ಕಂಬಳಕ್ಕೆ ಮಳೆ ತಂಪೆರೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕರಾವಳಿ ಕ್ರೀಡೆ ಕಂಬಳವನ್ನು ಆಯೋಜನೆ ಮಾಡಲಾಗಿದ್ದು ಕಂಬಳಕ್ಕೆ ಮಳೆ ತಂಪೆರೆದಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ತೆರೆದ ಆವರಣದಲ್ಲಿ ನಿರ್ಮಿಸಲಾಗಿರುವ 155 ಮೀಟರ್‌ ಗಟ್ಟಿ ಕರೆಯಲ್ಲಿ ಕೋಣಗಳಿಗೆ ಓಡಲು ಅತ್ಯಂತ ಸೂಕ್ತವಾಗಿದೆ ಎಂಬುದನ್ನು ದೃಢಪಡಿಸಿಕೊಳ್ಳಲು ಕೋಣಗಳನ್ನು ಸಾಂಕೇತಿಕವಾಗಿ ಓಡಿಸಲಾಯಿತು. ಕಂಬಳ ಆಯೋಜನೆ ವೇಳೆ ಜಿಟಿ ಜಿಟಿ ಮಳೆಯಾಗಿತ್ತು.

ಮಧ್ಯಾಹ್ನ ಏಕಾಏಕಿ ಸುರಿದ ಗಾಳಿ ಮಳೆಗೆ ಬಯಲ️ಲ್ಲಿ ನಿಂತಿದ್ದ ಜನತೆ ರಕ್ಷಣೆಗೆ ಓಡಿದರು. ಮಳೆ ಬಂದರೂ ಕಂಬಳ ಕೂಟ ಮಾತ್ರ ಸರಾಗವಾಗಿ ನಡೆಯುತ್ತಿದೆ.

ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಸಂಸದ ಸದಾನಂದ ಗೌಡ, ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್​ ರೈ ಸಾಕ್ಷಿಯಾದರು. ಇನ್ನು ಕಂಬಳ ಕೆರೆಗೆ ಡಾ. ಪುನಿತ್​​ ರಾಜ್​​ಕುಮಾರ್​ ಪತ್ನಿ ಅಶ್ವಿನಿ ಪುನಿತ್​ ರಾಜ್​​ಕುಮಾರ್ ಅವರು ದೀಪ ಬೆಳಗುವ ಮೂಲಕ ಕೋಣಗಳ ಓಟಕ್ಕೆ ಚಾಲನೆ ನೀಡಿದರು.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳ ಪಂದ್ಯಾವಳಿಯನ್ನು ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ ಮಾಡಲಾಗಿದೆ. ಅಲ್ಲದೆ ಸಂಚಾರಿ ಪೊಲೀಸರು ಸಾರ್ವಜನಿಕರು ಕಟ್ಟುನಿಟ್ಟಾಗಿ ಟ್ರಾಫಿಕ್​ ನಿಯಮ ಪಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ಇನ್ನು ಕಂಬಳ ವೀಕ್ಷಣೆಗೆ ಬರುವ ಜನರು ಗೇಟ್ ನಂಬರ್ 1, 2, 3 ಹಾಗೂ 4ರ ಮೂಲಕ ಪ್ರವೇಶಿಸಲು ಅವಕಾಶ ನೀಡಲಾಗಿದೆ.

ಕಂಬಳ ವೀಕ್ಷಿಸಲು ಬರುವ ವಿವಿಐಪಿಗಳಿಗೆ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿಗಳು ಫನ್ ವರ್ಲ್ಡ್‌ ಕಡೆಯಿಂದ ಪ್ರವೇಶಿಸಬೇಕು. ಯಾವುದೇ ಟಿಕೆಟ್‌ ಇಲ್ಲದೆ ಉಚಿತವಾಗಿ ಪ್ರವೇಶದ ವ್ಯವಸ್ಥೆ ಮಾಡಲಾಗಿದೆ. ಸಂಜೆ 6:30 ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬಳ ಮೈದಾನಕ್ಕೆ ಆಗಮಿಸಲಿದ್ದಾರೆ.

ಕರಾವಳಿ ಕಂಬಳ ಉತ್ಸವಕ್ಕೆ ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ನಟ ದರ್ಶನ್ ಕಾಂತಾರ ಹೀರೋ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಉಪೇಂದ್ರ, ಶಿವಣ್ಣ, ಆಶಿಶ್ ಬಲ್ಲಾಳ್, ರಾಜ್ ಬಿ ಶೆಟ್ಟಿ, ಮೇಘಾ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗುತ್ತಿದ್ದಾರೆ.

ಇಂದು ಮತ್ತು ನಾಳೆ ನಡೆಯಲಿರುವ ಕಂಬಳಕ್ಕೆ ಅನುಷ್ಕಾ ಶೆಟ್ಟಿ, ರಿಷಬ್ ಶೆಟ್ಟಿ, ಪೂಜಾ ಹೆಗ್ಡೆ, ವಿವೇಕ್ ಒಬೆರಾಯ್, ಸೇರಿದಂತೆ ಹಲವು ತಾರೆಯರು ಮೆರಗು ನೀಡಲಿದ್ದಾರೆ.

ಗೆದ್ದ ಕೋಣಗಳಿಗೆ ಬಹುಮಾನ ಇಂತಿದೆ...
ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು
ಎರಡನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ನಗದು
ಮೂರನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ನಗದು ಸಿಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com