ಕುಟುಂಬ ಪಿಂಚಣಿ ಪಡೆಯಲು ಎರಡನೇ ಪತ್ನಿ ಅರ್ಹರಲ್ಲ: ಹೈಕೋರ್ಟ್

ಮೃತ ಪತಿಯ ಪಿಂಚಣಿ ಪಡೆಯುವುದಕ್ಕೆ ಮೊದಲ ಪತ್ನಿ ಬದುಕಿರುವಾಗಲೇ 2ನೇ ಪತ್ನಿಗೆ ಯಾವುದೇ ಅಧಿಕಾರ ಇರುವುದಿಲ್ಲ ಎಂದು ಹೈಕೋರ್ಟ್ ಶನಿವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೃತ ಪತಿಯ ಪಿಂಚಣಿ ಪಡೆಯುವುದಕ್ಕೆ ಮೊದಲ ಪತ್ನಿ ಬದುಕಿರುವಾಗಲೇ 2ನೇ ಪತ್ನಿಗೆ ಯಾವುದೇ ಅಧಿಕಾರ ಇರುವುದಿಲ್ಲ ಎಂದು ಹೈಕೋರ್ಟ್ ಶನಿವಾರ ಹೇಳಿದೆ.

ಸರ್ಕಾರಿ ಉದ್ಯೋಗಿಯಾದ ಪತಿಯ ಮರಣದ ಹಿನ್ನೆಲೆಯಲ್ಲಿ ಪಿಂಚಣಿ ಕೋರಿ ಎರಡನೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾ ಮಾಡಿದೆ. ಕೌಟುಂಬಿಕ ಪಿಂಚಣಿಯನ್ನು ಪತ್ನಿಗೆ ಪಾವತಿಸಲಾಗುತ್ತದೆಯೇ ವಿನಾ ಕಾನೂನಿನ ದೃಷ್ಟಿಯಲ್ಲಿ ಸಿಂಧುತ್ವ ಹೊಂದಿರದ ಪತ್ನಿಗಲ್ಲ ಎಂದು ಹೇಳಿದೆ.

ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 17ರ ಅಡಿ ದ್ವಿಪತ್ನಿತ್ವ ಅಪರಾಧವಾಗಿದೆ ಮತ್ತು ಕರ್ನಾಟಕ ಸಿವಿಲ್‌ ಸೇವೆಗಳ ನಿಯಮಗಳು ನಿಯಮ 294ರಲ್ಲಿ ಸರ್ಕಾರಿ ಅಧಿಕಾರಿ ನಿವೃತ್ತಿ ಅಥವಾ ವಿಧಿವಶರಾದರೆ ಅವರ ಕುಟುಂಬದವರಿಗೆ ಪಿಂಚಿಣಿ ನೀಡಬೇಕು ಎಂದು ಹೇಳುತ್ತದೆ” ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ.

“ಮೊದಲನೇ ವಿವಾಹ ನಡೆದಿರುವಾಗ ಎರಡನೇ ಮದುವೆಯಿಂದ ಬರುವ ಸಂಬಂಧವನ್ನು ಪರಿಗಣಿಸಿರುವುದು ಸಾರ್ವಜನಿಕ ಹಿತಾಸಕ್ತಿಗೆ ಎರವಾಗಲಿದೆ. ಇದು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಉದ್ಯೋಗಿಗಳನ್ನು ಅಲ್ಲಿಗೆ ನೂಕಲಿದ್ದು, ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ಪೀಠ ಹೇಳಿದೆ.

“ಹಿಂದೂ ವಿವಾಹ ಕಾಯಿದೆ 1955 ಸೆಕ್ಷನ್‌ 16ರ ಅಡಿ ಎರಡನೇ ವಿವಾಹದಿಂದ ಜನಿಸಿದ ಮಕ್ಕಳ ನ್ಯಾಯಸಮ್ಮತತೆಗೆ ಸೀಮಿತ ಸ್ಥಾನಮಾನವಿದೆ” ಎಂದು ವಿಭಾಗೀಯ ಪೀಠ ಹೇಳಿದೆ.

“ಪಿಂಚಣಿ ನೀಡಲು ಮೇಲ್ಮನವಿದಾರೆಯು ಕಾನೂನಾತ್ಮಕವಾಗಿ ಮದುವೆಯಾಗಿಲ್ಲ.ಹಿಂದೂ ಧರ್ಮದಲ್ಲಿ ಏಕಪತ್ನಿತ್ವ ಅನುಕರಣೀಯ ಮಾತ್ರವಲ್ಲ. ಕಾನೂನಿನ ಪ್ರಕಾರ ಸಿಂಧುವಾಗುತ್ತದೆ. ಮೊದಲ ಪತ್ನಿ ಜೀವಂತವಾಗಿದ್ದಾಗ ಎರಡನೇ ವಿವಾಹವಾಗುವುದನ್ನು ಕಾನೂನಿನ ಅಡಿ ಪರಿಗಣಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ಏನಿದು ಪ್ರಕರಣ?
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ನಿವಾಸಿಯಾದ ಮೇಲ್ಮನವಿದಾರೆ ಮಂಗಳಮ್ಮ (ಹೆಸರು ಬದಲಿಸಲಾಗಿದೆ) 1987ರ ಮೇ 9ರಂದು ಹಾಸನ ಜಿಲ್ಲಾ ಪಂಚಾಯಿತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ನಾಗರಾಜಯ್ಯ (ಹೆಸರು ಬದಲಿಸಲಾಗಿದೆ) ಅವರನ್ನು ವಿವಾಹವಾಗಿದ್ದಾಗಿ ಹೇಳಿದ್ದರು. ನಾಗರಾಜಯ್ಯ ಅವರು 2015ರ ಜನವರಿ 14ರಂದು ಸಾವನ್ನಪ್ಪಿದ್ದಾರೆ. ನಾಗರಾಜಯ್ಯ ಅವರ ಮೊದಲ ಪತ್ನಿ ವನಜಮ್ಮ (ಹೆಸರು ಬದಲಿಸಲಾಗಿದೆ) ಅವರು 2011ರ ಏಪ್ರಿಲ್‌ 6ರಂದು ಸಾವಿಗೀಡಾಗಿರುವುದರಿಂದ ಪಿಂಚಣಿ ಕೋರಿ ಮನವಿ ಸಲ್ಲಿಸಿದ್ದರು.

ನಾಗರಾಜಯ್ಯ ಅವರ ಸೇವಾ ದಾಖಲೆಗಳಲ್ಲಿ ವನಜಮ್ಮ ಅವರ ಹೆಸರು ಮಾತ್ರ ಇದ್ದು, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳಲ್ಲಿ ಮೊದಲನೇ ಪತ್ನಿ ಇರುವಾಗ ಎರಡನೇ ಪತ್ನಿ ಹೊಂದಲು ಅವಕಾಶ ಇಲ್ಲ ಎಂದು ಮಂಗಳಮ್ಮ (ಹೆಸರು ಬದಲಿಸಲಾಗಿದೆ) ಅವರ ಮನವಿಯನ್ನು ಸಂಬಂಧಿತ ಪ್ರಾಧಿಕಾರ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ 2022ರ ಡಿಸೆಂಬರ್‌ 14ರಂದು ಮಂಗಳಮ್ಮ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದು, ಏಕಸದಸ್ಯ ಪೀಠವು ಅವರ ಅರ್ಜಿಯನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ತಾನು ನಾಗರಾಜಯ್ಯ ಅವರ ಎರಡನೇ ಪತ್ನಿಯಾಗಿದ್ದು, ಪಿಂಚಣಿಗೆ ಅರ್ಹ ಎಂದು ಮಂಗಳಮ್ಮ ಮೇಲ್ಮನವಿ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com